ನವದೆಹಲಿ(ಮಾ.30): ಇತ್ತ ದೇಶವ್ಯಾಪಿ ಕೊರೋನಾ ಅಬ್ಬರ ಹೆಚ್ಚಿರುವಾಗಲೇ ಅತ್ತ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಕುರಿತಂತೆ ಚರ್ಚೆಯಾಗುತ್ತಿದೆ.

ರಾಮಮಂದಿರ ನಿರ್ಮಾಣ ಸಂಬಂಧ ಕೇಂದ್ರ ಸರ್ಕಾರ ಈಗಾಗಲೇ ಟ್ರಸ್ಟ್‌ ರಚಿಸಿ, ಅದಕ್ಕೆ ದೇಗುಲ ನಿರ್ಮಾಣ ಹೊಣೆ ವಹಿಸಿದೆ. ಟ್ರಸ್ಟ್‌ ಕೂಡಾ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿ, ಶಂಕುಸ್ಥಾಪನೆ ದಿನ ನಿಗದಿ ಮತ್ತು ನಿರ್ಮಾಣ ಹೊಣೆಯನ್ನು ಮತ್ತೊಂದು ಸಮಿತಿಗೆ ವರ್ಗಾಯಿಸಿದೆ.

ಈ ಹಿಂದೆ ರಾಮನವಮಿ ದಿನವಾದ ಏ.2ರಂದೇ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡುವ ಬಗ್ಗೆ ಹಲವು ಧಾರ್ಮಿಕ ನಾಯಕರು ಬಹಿರಂಗವಾಗಿಯೇ ಘೋಷಣೆ ಮಾಡಿದ್ದರು. ಆದರೆ ಟ್ರಸ್ಟ್‌ ರಚನೆಯಾದ ಬಳಿಕ ಎಲ್ಲೂ ಈ ಕುರಿತು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಹೀಗಾಗಿ ಏ.2ರಂದು ಶಂಕುಸ್ಥಾಪನೆ ಆಗಲಿದೆಯೇ? ಇಲ್ಲವೇ ಎಂಬುದರ ಕುರಿತು ಇದೀಗ ಕುತೂಹಲ ಮೂಡಿದೆ.

ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಂಡರೆ ಅದಕ್ಕೆ ಸಾವಿರಾರು ಜನ ಸೇರುತ್ತಾರೆ. ಆದರೆ ಪ್ರಸಕ್ತ ಕೊರೋನಾ ಸನ್ನಿವೇಶದಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಕೆಲ ಆಯ್ದ ಧಾರ್ಮಿಕ ಮುಖಂಡರನ್ನಷ್ಟೇ ಕರೆದು ಸಣ್ಣ ಪ್ರಮಾಣದಲ್ಲಿ ಶಂಕುಸ್ಥಾಪನೆ ಮಾಡಬಹುದಾ? ಎಂಬ ಕುತೂಹಲವೂ ಮೂಡಿದೆ.