‘15 ನಿಮಿಷ ಪೊಲೀಸರನ್ನು ತೆಗೆಯಿರಿ, ನಾವೇನು ಮಾಡುತ್ತೇವೆಂದು ತೋರಿಸುತ್ತೇವೆ’ ಎಂಬ ಪ್ರಚೋದನಕಾರಿ ಹೇಳಿಕೆಗೆ ಈಗ ಬಿಜೆಪಿ ನಾಯಕಿ ನವನೀತ್‌ ರಾಣಾ ತಿರುಗೇಟು ನೀಡಿ, ‘ನಮಗೆ ಬರೀ 15 ಸೆಕೆಂಡ್‌ ಸಾಕು’ ಎಂದು ಹೇಳಿದ್ದಾರೆ.

ನವದೆಹಲಿ (ಮೇ.10): ಹೈದರಾಬಾದ್‌ನ ಎಐಎಂಐಎಂ ನಾಯಕ ಅಕ್ಬರುದ್ದೀನ್‌ ಓವೈಸಿ 11 ವರ್ಷಗಳ ಹಿಂದೆ ನೀಡಿದ್ದ ‘15 ನಿಮಿಷ ಪೊಲೀಸರನ್ನು ತೆಗೆಯಿರಿ, ನಾವೇನು ಮಾಡುತ್ತೇವೆಂದು ತೋರಿಸುತ್ತೇವೆ’ ಎಂಬ ಪ್ರಚೋದನಕಾರಿ ಹೇಳಿಕೆಗೆ ಈಗ ಬಿಜೆಪಿ ನಾಯಕಿ ನವನೀತ್‌ ರಾಣಾ ತಿರುಗೇಟು ನೀಡಿ, ‘ನಮಗೆ ಬರೀ 15 ಸೆಕೆಂಡ್‌ ಸಾಕು’ ಎಂದು ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

ಹೈದರಾಬಾದ್‌ನಲ್ಲಿ ಎಐಎಂಎಐಎಂ ಸಂಸದ ಅಸಾದುದ್ದೀನ್‌ ಓವೈಸಿ ವಿರುದ್ಧ ಬಿಜೆಪಿಯ ಮಾಧವಿ ಲತಾ ಸ್ಪರ್ಧಿಸಿದ್ದಾರೆ. ಅವರ ಪರ ಮಹಾರಾಷ್ಟ್ರದ ಮಾಜಿ ಸಂಸದೆ ನವನೀತ್‌ ರಾಣಾ ಗುರುವಾರ ಪ್ರಚಾರ ನಡೆಸಿ, ‘ಓವೈಸಿಯ ಸಹೋದರ ಹಿಂದೆ 15 ನಿಮಿಷ ಪೊಲೀಸರನ್ನು ತೆಗೆಯಿರಿ, ನಾವೇನು ಮಾಡುತ್ತೇವೆಂದು ತೋರಿಸುತ್ತೇವೆ ಎಂದಿದ್ದರು. ನಾನು ಅವರಿಗೆ ಹೇಳುತ್ತೇನೆ, ನಿಮಗೆ 15 ನಿಮಿಷ ಬೇಕಾಗಬಹುದು, ಆದರೆ ನಮಗೆ ಬರೀ 15 ಸೆಕೆಂಡ್‌ ಸಾಕು...’ ಎಂದು ಹೇಳಿದರು.

ಇದೇ ವೇಳೆ ಅವರು, ‘ಮಾಧವಿ ಲತಾ ಖಂಡಿತ ಹೈದರಾಬಾದ್‌ ಪಾಕಿಸ್ತಾನ ಆಗುವುದನ್ನು ತಡೆಯುತ್ತಾರೆ. ಕಾಂಗ್ರೆಸ್‌ ಅಥವಾ ಎಐಎಂಐಎಂಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ’ ಎಂದೂ ಕಿಡಿಕಾರಿದರು. ರಾಣಾ ಹೇಳಿಕೆಗೆ ತಿರುಗೇಟು ನೀಡಿರುವ ಅಸಾದುದ್ದೀನ್‌ ಓವೈಸಿ, ‘ಮೋದಿಜೀ, ಅವರಿಗೆ 15 ಸೆಕೆಂಡ್‌ ಕೊಡಿ. ಏನು ಮಾಡುತ್ತಾರೋ ನೋಡೋಣ. 15 ಸೆಕೆಂಡ್‌ ಯಾಕೆ, ಒಂದು ತಾಸು ಕೊಡಿ. ಏನು ಮಾಡುತ್ತಾರೋ ಮಾಡಲಿ. ಇಲ್ಲಿ ಏನಾದರೂ ಮಾನವೀಯತೆ ಉಳಿದಿದೆಯಾ? ನಾವು ಯಾರಿಗೂ ಹೆದರುವುದಿಲ್ಲ. ಎಲ್ಲದಕ್ಕೂ ಸಿದ್ಧರಿದ್ದೇವೆ’ ಎಂದು ಹೇಳಿದರು.

5 ವರ್ಷ ಮನೆಗೆ ಮರಳಲ್ಲ: ನೀಟ್‌ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿ ಪರಾರಿ

ಅಕ್ಬರುದ್ದೀನ್‌ ಏನು ಹೇಳಿದ್ದರು?: 2013ರಲ್ಲಿ ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದ ಅಕ್ಬರುದ್ದೀನ್‌ ಒವೈಸಿ, 15 ನಿಮಿಷ ಪೋಲೀಸರನ್ನು ಸುಮ್ಮನಿರಿಸಿದರೆ ನಾವು (ಮುಸ್ಲಿಮರು) 100 ಕೋಟಿ ಹಿಂದೂಗಳನ್ನು ಫಿನಿಷ್‌ ಮಾಡ್ತೀವಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.