2024ರಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಸೋಲಿಸಲು ಮೆಘಾ ಪ್ಲಾನ್ ರೆಡಿಯಾಗಿದೆ. ಕರ್ನಾಟಕದಲ್ಲಿ ಗೆಲುವಿನ ಬೆನ್ನಲ್ಲೇ ಕಾಂಗ್ರೆಸ್ ಪುಟಿದೇಳುವ ಸೂಚನೆ ಪಡೆದ ಮಮತಾ ಬ್ಯಾನರ್ಜಿ ಪ್ರಾಬಲ್ಯದ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವುದಾಗಿ ಹೇಳಿದ್ದಾರೆ.
ಕೋಲ್ಕತಾ(ಮೇ.15): ಕರ್ನಾಟಕದಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ರಾಜಕೀಯ ಲೆಕ್ಕಾಚಾರ ಬದಲಿಸಿದೆ. 2024ರ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಗೊಳ್ಳುತ್ತಿದೆ. ಇದೀಗ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಬಲ್ಯವಿರುವ ಕಡೆ ಟಿಎಂಸಿ ಬೆಂಬಲ ಸೂಚಿಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇಷ್ಟು ದಿನ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕಿದ್ದ ಮಮತಾ ಬ್ಯಾನರ್ಜಿ ಇದೀಗ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವುದಾಗಿ ಬಹಿರಂಗ ಹೇಳಿಕೆ ನೀಡಿದ್ದಾರೆ.
2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಒಗ್ಗಟ್ಟು ಅವಶ್ಯಕ ವಿದೆ ಅನ್ನೋ ಮಂತ್ರವನ್ನೇ ಪುನರುಚ್ಚರಿಸುವ ಮಮತಾ ಬ್ಯಾನರ್ಜಿ, ಮೊದಲ ಬಾರಿಗೆ ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಎಲ್ಲೆಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದೆ. ಈ ಕ್ಷೇತ್ರಗಳಲ್ಲಿ ಟಿಎಂಸಿ ಪಕ್ಷ, ಕಾಂಗ್ರೆಸ್ ಬೆಂಬಲಿಸಲಿದೆ. ಇಲ್ಲಿ ಟಿಎಂಸಿ ಸ್ಪರ್ಧೆ ಮಾಡುವುದಿಲ್ಲ ಎಂದು ಬ್ಯಾನರ್ಜಿ ಹೇಳಿದ್ದಾರೆ.
ಕಾಂಗ್ರೆಸ್ ದಿಗ್ವಿಜಯ: ಕಮಲಕ್ಕೆ ನಾಳೆಯ ಪಾಠ, ಟ್ರಬಲ್ ಎಂಜಿನ್‌ಗೆ ಸೋಲು ಎಂದ ಮಮತಾ ಬ್ಯಾನರ್ಜಿ
ಕಾಂಗ್ರೆಸ್‌ಗೆ ಮೈತ್ರಿ ಆಫರ್ ಮುಂದಿಟ್ಟಿರುವ ಮಮತಾ ಬ್ಯಾನರ್ಜಿ ಕಂಡೀಷನ್ ಕೂಡ ಹಾಕಿದ್ದಾರೆ. ಕಾಂಗ್ರೆಸ್ ಪ್ರಾಬಲ್ಯವಿರುವ ಕಡೆ ಟಿಎಂಸಿ ಸ್ಪರ್ಧಿಸದೇ, ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ. ಆದರೆ ಕಾಂಗ್ರೆಸ್ ಪ್ರಾದೇಶಿಕ ಪಕ್ಷಕ್ಕೆ ಪ್ರಾದೇಶಿಕ ಮಟ್ಟದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬ್ಯಾನರ್ಜಿ ಹೇಳಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ಬಳಿಕ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿದ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಮಹತ್ವದ ಸಂದೇಶ ನೀಡಿದ್ದರು. ಬದಲಾವಣೆಯ ಪರವಾಗಿ ತಮ್ಮ ನಿರ್ಣಾಯಕ ಜನಾದೇಶಕ್ಕಾಗಿ ಕರ್ನಾಟಕದ ಜನತೆಗೆ ನನ್ನ ಸಲ್ಯೂಟ್! ವಿವೇಚನಾರಹಿತ ನಿರಂಕುಶ ಮತ್ತು ಬಹುಸಂಖ್ಯಾತ ರಾಜಕೀಯ ನಾಶವಾಯಿತು!! ಜನರು ಬಹುತ್ವ ಮತ್ತು ಪ್ರಜಾಪ್ರಭುತ್ವ ಶಕ್ತಿಗಳನ್ನು ಗೆಲ್ಲಲು ಬಯಸಿದಾಗ, ಪ್ರಾಬಲ್ಯ ಸಾಧಿಸಲು ಬಯಸುವ ಯಾರು ಕೂಡ ಅವರ ಮುಂದೆ ನಿಲ್ಲಲು ಆಗದು. ಇದು ಕರ್ನಾಟಕ ಚುನಾವಣೆ ನೀಡಿರುವ ಸಂದೇಶ. ಇದು ನಾಳೆಗೆ ಪಾಠ ಕೂಡ ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದರು.
ಪಶ್ಚಿಮ ಬಂಗಾಳ ಇತರ ರಾಜ್ಯಕ್ಕಿಂತ ಭಿನ್ನವಲ್ಲ, ಕೇರಳ ಸ್ಟೋರಿ ನಿಷೇಧಕ್ಕೆ ಸಿಎಂ ಮಮತಾಗೆ ಸುಪ್ರೀಂ ನೋಟಿಸ್!
ಕರ್ನಾಟಕ ಚುನಾವಣೆ ಫಲಿತಾಂಶ ಬಳಿಕ ಬಿಹಾರ ಸಿಎಂ ನಿತೀಶ್ ಕುಮಾರ್, ಕಾಂಗ್ರೆಸ್ ಜೊತೆ ಮೈತ್ರಿ ಮಾತುಗಳನ್ನಾಡಿದ್ದರು. ಅತಿ ಹೆಚ್ಚು ವಿಪಕ್ಷಗಳು ಒಟ್ಟಾಗಿ ಕೆಲಸ ಮಾಡಿದರೆ ಮತ್ತು ಒಗ್ಗಟ್ಟಾಗಿದ್ದರೆ, ಬಿಜೆಪಿ ವಿರುದ್ಧ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಹೇಳಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ವಿಪಕ್ಷಗಳನ್ನು ಒಗ್ಗೂಡಿಸಿ ಬಲಿಷ್ಠ ಮೈತ್ರಿಕೂಟ ರಚಿಸಲು ಮುಂದಾಗಿರುವ ನಿತೀಶ್ ಹಲವು ರಾಜ್ಯಗಳಿಗೆ ಭೇಟಿ ನೀಡಿ ವಿಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.ಅತಿ ಹೆಚ್ಚು ವಿಪಕ್ಷಗಳು ಒಂದಾಗಿ ಹೋರಾಟ ನಡೆಸಿದರೆ ಉತ್ತಮ ಫಲಿತಾಂಶ ದೊರಕಲಿದೆ. ನಮ್ಮೆಲ್ಲರ ಉದ್ದೇಶವೂ ಒಂದೇ ಆಗಿದೆ. ದೇಶದ ಹಿತಕ್ಕೋಸ್ಕರ ನಾವೆಲ್ಲರೂ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯ ಸಮಯಕ್ಕೆ ವಿಪಕ್ಷಗಳ ಮೈತ್ರಿಕೂಟವನ್ನು ಬಲಿಷ್ಠಗೊಳಿಸುವುದರ ಕುರಿತಾಗಿ ಶರದ್ ಪವಾರ್ ಅವರೊಂದಿಗೂ ಮಾತುಕತೆ ನಡೆಸಿದರು.
