ಅಮೆರಿಕ ಗಲಾಟೆ ಬಗ್ಗೆ ಟ್ರಂಪ್ ಜತೆ ಮಾತಾಡುವೆ: ಕೇಂದ್ರ ಸಚಿವ ಅಠಾವಳೆ!
ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರಿಂದ ಬುಧವಾರ ಅಮೆರಿಕ ಸಂಸತ್ ಮೇಲೆ ದಾಳಿ| ದಾಳಿ ಬೆನ್ನಲ್ಲೇ ತೀವ್ರ ಆಕ್ರೋಶ| ಅಮೆರಿಕ ಗಲಾಟೆ ಬಗ್ಗೆ ಟ್ರಂಪ್ ಜತೆ ಮಾತಾಡುವೆ: ಕೇಂದ್ರ ಸಚಿವ ಅಠಾವಳೆ!
ನವದೆಹಲಿ: ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಬುಧವಾರ ಅಮೆರಿಕ ಸಂಸತ್ (ಕ್ಯಾಪಿಟಲ್) ಮೇಲೆ ನಡೆಸಿದ ಹಿಂಸಾತ್ಮಕ ದಾಳಿಯನ್ನು ಕೇಂದ್ರ ಸಚಿವ ಹಾಗೂ ಭಾರತೀಯ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ರಾಮದಾಸ್ ಅಠಾವಳೆ ಖಂಡಿಸಿದ್ದಾರೆ. ಹಾಗೂ ಈ ಬಗ್ಗೆ ಟ್ರಂಪ್ ಜೊತೆ ದೂರವಾಣಿ ಮೂಲಕ ಮಾತನಾಡುವುದಾಗಿ ಅವರು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಠಾವಳೆ, ‘ಇದು ರಿಪಬ್ಲಿಕನ್ ಪಕ್ಷಕ್ಕೆ ಮಾತ್ರ ಆದ ಅಪಮಾನ ಅಲ್ಲ, ಇಡೀ ಅಮೆರಿಕ ಪ್ರಜಾಪ್ರಭುತ್ವಕ್ಕೆ ಉಂಟಾದ ಅಪಮಾನ. ಹಾಗಾಗಿ ಈ ಅಸಮಾಧಾನ ಹೊರಹಾಕುತ್ತಿದ್ದೇವೆ. ಈ ಬಗ್ಗೆ ಟ್ರಂಪ್ ಜೊತೆ ಮಾತನಾಡುತ್ತೇನೆ’ ಎಂದು ಹೇಳಿದರು. ಟ್ರಂಪ್ ಕೂಡ ರಿಪಬ್ಲಿಕನ್ ಪಕ್ಷದವರು ಎಂಬುದು ಇಲ್ಲಿ ಗಮನಾರ್ಹ.
ಬೆಂಬಲಿಗರ ದಾಳಿಗೆ ಟ್ರಂಪ್ ಖಂಡನೆ
ಅಮೆರಿಕ ಸಂಸತ್ತಿನ ಮೇಲೆ ತಮ್ಮ ಬೆಂಬಲಿಗರು ನಡೆಸಿದ ದಾಳಿಯನ್ನು ಖಂಡಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ದಾಳಿಕೋರರು ಅಮೆರಿಕವನ್ನು ಪ್ರತಿನಿಧಿಸುವವರಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಕಾನೂನು ಬದ್ಧವಾಗಿ ಹಾಗೂ ಅಡ್ಡಿ ಆತಂಕವಿಲ್ಲದೆ ಅಧಿಕಾರ ಹಸ್ತಾಂತರಿಸುವುದಾಗಿ ಭರವಸೆ ನೀಡಿದ್ದಾರೆ.
ನೂತನ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಟ್ರಂಪ್, ‘ಅಮೆರಿಕ ಯಾವಾಗಲೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸುವ ದೇಶ. ಎಲ್ಲ ಅಮೆರಿಕನ್ನರಂತೆ ನಾನು ಕೂಡ ಹಿಂಸಾಚಾರ ಹಾಗೂ ಗಲಭೆಯಿಂದ ಸಿಟ್ಟಾಗಿದ್ದೇನೆ. ಹಿಂಸಾಚಾರದಲ್ಲಿ ಭಾಗಿ ಆದವರನ್ನು ತಕ್ಷಣದಿಂದಲೇ ನಾನು ಉಚ್ಚಾಟಿಸುತ್ತೇನೆ ಮತ್ತು ಸಂಸತ್ತಿನ ಕಟ್ಟಡಕ್ಕೆ ಭದ್ರತೆ ಒದಗಿಸಿದ್ದೇನೆ’ ಎಂದು ಹೇಳಿದ್ದಾರೆ. ಟ್ರಂಪ್ ಅವರ ಈ ಮುದ್ರಿತ ಹೇಳಿಕೆಯೊಂದನ್ನು ಶ್ವೇತ ಭವನ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದೆ.