* ಮಹಾ ಸರ್ಕಾರಕ್ಕೆ ರಾಜ್ ಠಾಕ್ರೆ ಎಚ್ಚರಿಕೆ* ಲೌಡ್‌ಸ್ಪೀಕರ್ ತೆರವಿಗೆ ನಾಳೆ ಸಂಜೆಯ ಗಡುವು
ಔರಂಗಾಬಾದ್(ಮೇ.02): ರಾಜ್ಯದ ಮಸೀದಿಗಳಿಂದ ಧ್ವನಿವರ್ಧಕ ತೆಗೆಯಲು ಮೀನಾ ಮೇಷ ಎಣಿಸುತ್ತಿರುವ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಅಧ್ಯಕ್ಷ ರಾಜ್ ಠಾಕ್ರೆ, ಮೇ 3ರೊಳಗೆ ಲೌಡ್‌ಸ್ಪೀಕರ್ ತೆಗೆಯದೇ ಇದ್ದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ಇಲ್ಲಿ ಬೃಹತ್ ರಾರಯಲಿ ಉದ್ದೇಶಿಸಿ ಮಾತನಾಡಿದ ರಾಜ್‌ಠಾಕ್ರೆ, ‘ಮೇ. 3 ರ ನಂತರವೂ ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸದಿದ್ದರೆ, ಮಸೀದಿಗಳ ಮೇಲೆಯೇ ಧ್ವನಿವರ್ಧಕದಲ್ಲಿ ದುಪ್ಪಟ್ಟು ಧ್ವನಿಯಲ್ಲಿ ಎಲ್ಲ ಹಿಂದೂಗಳು ಹನುಮಾನ್ ಚಾಲೀಸಾವನ್ನು ನುಡಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ
‘ಧ್ವನಿವರ್ಧಕಗಳ ವಿವಾದವು ಧಾರ್ಮಿಕವಲ್ಲ, ಸಾಮಾಜಿಕ ವಿಚಾರವಾಗಿದೆ. ಮಸೀದಿಯ ಮೇಲಿರುವ ಎಲ್ಲ ಧ್ವನಿವರ್ಧಕಗಳು ಅಕ್ರಮವಾಗಿವೆ. ಅಲ್ಲೇನು ಸಂಗೀತ ಕಾರ್ಯಕ್ರಮ ನಡೆಯುತ್ತಿದೆಯೇ ಧ್ವನಿವರ್ಧಕಗಳನ್ನು ಹಚ್ಚಲು? ಉತ್ತರ ಪ್ರದೇಶದಲ್ಲಿ ಈಗಾಗಲೇ ಧ್ವನಿವರ್ಧಕಗಳನ್ನು ತೆರವುಗೊಳಿಸಿದ್ದಾರೆ. ಆದರೆ ಮಹಾರಾಷ್ಟ್ರದಲ್ಲೇಕೆ ಅಡ್ಡಿಯಾಗುತ್ತಿದೆ’ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಕಿಡಿಕಾರಿದ್ದಾರೆ.
‘ಮುಸ್ಲಿಮರಿಗೆ ಈ ವಿಷಯ ಚೆನ್ನಾಗಿ ಹೇಳಿದ್ದು ಅರ್ಥವಾಗದಿದ್ದರೆ, ನಾವು ಅವರಿಗೆ ಮಹಾರಾಷ್ಟ್ರದ ಶಕ್ತಿಯನ್ನು ತೋರಿಸುತ್ತಿವೆ’ ಎಂದು ಎಚ್ಚರಿಸಿದ್ದಾರೆ.
ಮುಂಬೈ ಮಸೀದಿ ಮುಂದೆ ಹನುಮಾನ್ ಚಾಲೀಸಾ!
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜ್‌ಠಾಕ್ರೆ, ‘ನಾನು ಪ್ರಾರ್ಥನೆ ವಿರೋಧಿಸುವುದಲ್ಲ. ನೀವು ನಿಮ್ಮ ಮನೆಯಲ್ಲಿ ಪ್ರಾರ್ಥಿಸಬಹುದು. ಆದರೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದನ್ನು ಮೈಕ್‌ನಲ್ಲಿ ಪ್ರಸಾರ ಮಾಡುವುದು ಸರಿಯಲ್ಲ. ಹೀಗಾಗಿ ಸರ್ಕಾರ ಕೂಡಲೇ ಮಸೀದಿಯಿಂದ ಧ್ವನಿವರ್ಧಕ ತೆಗೆಸಬೇಕು. ಇಲ್ಲದೇ ಹೋದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು, ಮಸೀದಿಗಳ ಮುಂದೆ ಧ್ವನಿವರ್ಧಕಗಳಲ್ಲಿ ಮಸೀದಿ ಧ್ವನಿಗಿಂತ ಡಬ್ಬಲ್ ಜೋರಾಗಿ ಹನುಮಾನ್ ಚಾಲೀಸಾ ಪ್ರಸಾರ ಮಾಡಲಿದ್ದಾರೆ’ ಎಂದು ಎಚ್ಚರಿಸಿದ್ದಾರೆ.
ಅಲ್ಲದೇ ಮಹಾರಾಷ್ಟ್ರದಲ್ಲಿರುವ ಮದರಸಾ ಹಾಗೂ ಮಸೀದಿಗಳ ಬಳಿ ರೈಡ್ ಮಾಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿ ವಿನಂತಿಸಿಕೊಂಡಿದ್ದಾರೆ. ಮದರಸಾಗಳಲ್ಲಿ ಪಾಕಿಸ್ತಾನಿ ಬೆಂಬಲಿಗರು ವಾಸಿಸಿದ್ದಾರೆ. ಸ್ಥಳೀಯ ಶಾಸಕರು ಇವರನ್ನು ಮತ ಬ್ಯಾಂಕ್ ಎಂಬಂತೇ ಬಳಸುತ್ತಿದ್ದಾರೆ. ಆಧಾರ ಕಾರ್ಡ್ ಕೂಡ ಇಲ್ಲದ ಈ ಜನರಿಗೆ ಶಾಸಕರೇ ಆಧಾರ ಕಾರ್ಡ್ ಮಾಡಿಸಿಕೊಳ್ಳಲು ನೆರವಾಗಿದ್ದಾರೆ ಎಂದು ಠಾಕ್ರೆ ಗಂಭೀರ ಆರೋಪ ಮಾಡಿದ್ದಾರೆ.
