ನವದೆಹಲಿ(ಮೇ.04): ಲಾಕ್‍ಡೌನ್‍ನಿಂದ ನಗರಗಳಿಗೆ ಕೆಲಸಕ್ಕಾಗಿ ವಲಸೆ ಬಂದಿದ್ದ ಕಾರ್ಮಿಕರು ತಮ್ಮ ಊರಿಗೆ ಮರಳಲು ಪರದಾಡುತ್ತಿದ್ದಾರೆ. ಹೀಗಿರುವಾಗ ರೈಲು ಟಿಕೆಟ್ ಶುಲ್ಕ ಮತ್ತೊಂದು ಹೊರೆಯಾಗಿ ಪರಿಣಮಿಸಿದ್ದು, ಕೇಂದ್ರದ ಈ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆದರೀಗ ಇದರ ಬೆನ್ನಲ್ಲೇ ದೇಶದ ವಿವಿಧ ರಾಜ್ಯಗಳಿಂದ ತಮ್ಮ ಊರುಗಳಿಗೆ ಹೊರಡಿರುವ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ಟಿಕೆಟ್ ದರವನ್ನು ನೀಡುವುದಾಗಿ ಕಾಂಗ್ರೆಸ್ ಪಕ್ಷ ನೀಡಲಿದೆ ಎಂದು ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಈಗಾಗಲೇ ಸೋನಿಯಾ ಗಾಂಧಿ ಈ ಬಗ್ಗೆ ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆದೇಶ ಹೊರಡಿಸಿದ್ದು, ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ಮರಳಲು ರೈಲ್ವೆ ಪ್ರಯಾಣದ ವೆಚ್ಚ ಭರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.

ವಿದೇಶದಿಂದ ಬರೋರಿಗೆ ಫ್ರೀ, ಬಡ ಕಾರ್ಮಿಕರಿಗೆ ಟಿಕೆಟ್‌ ಶುಲ್ಕ: ವಿಪಕ್ಷಗಳ ಆಕ್ರೋಶ

ಅಲ್ಲದೇ ದೇಶದ ಬಡವರು ಕಷ್ಟದಲ್ಲಿರುವಾಗ ಅವರಿಗೆ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಕೊಡುಗೆಯಿದು. ಈ ಸಮಯದಲ್ಲಿ ಕಾರ್ಮಿಕರ ನೆರವಿಗೆ ನಿಲ್ಲಬೇಕಾಗಿದೆ. ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಪ್ರಜೆಗಳನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತದೆ. ಆದರೆ ನಮ್ಮ ದೇಶದಲ್ಲಿರುವ ಬಡ, ನಿರ್ಗತಿಕ ವಲಸೆ ಕಾರ್ಮಿಕರ ಬಗ್ಗೆ ಯಾಕೆ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ. ಅಲ್ಲದೆ ವಲಸೆ ಕಾರ್ಮಿಕರಿಗೆ ರೈಲಿನಲ್ಲಿ ಉಚಿತವಾಗಿ ಅವರ ಊರುಗಳಿಗೆ ಕಳುಹಿಸಿ ಎಂದು ಕಾಂಗ್ರೆಸ್ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮತ್ತು ರೈಲ್ವೆ ಸಚಿವಾಲಯಗಳಿಗೆ ಮನವಿ ಮಾಡಿದೆ. ಆದರೂ ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.

ಕಾರ್ಮಿಕರ ಪ್ರಯಾಣಕ್ಕೆ KSRTCಗೆ ಒಂದು ಕೋಟಿ ಕೊಟ್ಟ ಕಾಂಗ್ರೆಸ್

ಇನ್ನು ರಾಜ್ಯದಲ್ಲಿ ಕೆಎಸ್‌ಆರ್‌ಟಿಸಿ ಕಾರ್ಮಿಕರಿಂದ ಟಿಕೆಟ್ ದರ ಪಡೆಯುತ್ತಿರುವುದನ್ನು ಖಂಡಿಸಿದ್ದ ರಾಜ್ಯ ಕಾಂಗ್ರೆಸ್, ಭಾನುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಕೆಎಸ್‌ಆರ್‌ಟಿಸಿಗೆ ಒಂದು ಕೋಟಿ ರೂ. ಚೆಕ್ ನಿಡಿತ್ತು. ಈ ಮೂಲಕ ಕಾರ್ಮಿಕರನ್ನು ತಮ್ಮ ಊರಿಗೆ ಹಣ ಪಡೆಯದೆ ತಲುಪಿಸುವಂತೆ ಮನವಿ ಮಾಡಿತ್ತು. ಆದರೆ ಇದಕ್ಕೂ ಕೆಲವೇ ಕ್ಷಣಗಳ ಮೊದಲು ಕರ್ನಾಟಕ ಸರ್ಕಾರ ಮೂರು ದಿನಗಳವರೆಗೆ ಕಾರ್ಮಿಕರಿಗೆ ಉಚಿತ ಬಸ್‌ ಸೌಲಭ್ಯವಿರುತ್ತದೆ ಎಂದು ಆದೇಶ ಹೊರಡಿಸಿತ್ತು.