ಬೆಂಗಳೂರು(ಜು.27): ‘ಹಿಂದೂಗಳಷ್ಟೇ ಅಲ್ಲ, ರಾಮಮಂದಿರ ನಿರ್ಮಾಣಕ್ಕೆ ಯಾವುದೇ ಸಮುದಾಯದವರು ದೇಣಿಗೆ ನೀಡಿದರೂ ಸ್ವೀಕರಿಸಲಾಗುವುದು’ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಸದಸ್ಯರೂ ಆದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ ಸಿದ್ಧಗಂಗಾ ಮಠದ ಮಣ್ಣು..!

ಭಾನುವಾರ ಪಿಟಿಐ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು ಈ ವಿಷಯ ಸ್ಪಷ್ಟಪಡಿಸಿದರು. ‘ರಾಮಮಂದಿರಕ್ಕೆ ಎಲ್ಲ ಧರ್ಮಗಳ ದೇಣಿಗೆಯನ್ನೂ ಸ್ವೀಕರಿಸಲಾಗುತ್ತದೆಯೇ’ ಎಂದು ಸಂದರ್ಶಕರು ಪ್ರಶ್ನಿಸಿದಾಗ, ‘ರಾಮನಲ್ಲಿ ಯಾರಿಗೆ ಭಕ್ತಿ ಹಾಗೂ ನಂಬಿಕೆ ಇದೆಯೋ, ಅವರು ನೀಡುವ ದೇಣಿಗೆಯನ್ನು ಸ್ವೀಕರಿಸಲಾಗುವುದು. ಇಂಥದ್ದೇ ಧರ್ಮದಿಂದ ಸ್ವೀಕರಿಸಲಾಗುವುದು, ಇಂಥ ಧರ್ಮದಿಂದ ಸ್ವೀಕರಿಸುವುದಿಲ್ಲ ಎಂಬ ನಿಯಮವೇನೂ ಇಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಮಂದಿರ ನಿರ್ಮಾಣಕ್ಕಾಗಿ ತಲಾ ವ್ಯಕ್ತಿಯಿಂದ 10 ರು. ಹಾಗೂ ಮನೆಯೊಂದರಿಂದ 100 ರು. ದೇಣಿಗೆ ಸ್ವೀಕರಿಸುವ ಸಲಹೆ ಬಂದಿದೆ. ಇದೊಂದು ಸಲಹೆ ಮಾತ್ರ. ಇದು ತೆರಿಗೆ ಅಲ್ಲ. 1 ಕೋಟಿ ರು. ಕೊಟ್ಟರೂ ಟ್ರಸ್ಟ್‌ ಸ್ವೀಕರಿಸಲಿದೆ. 1 ರು. ನೀಡಿದರೂ ಸ್ವೀಕರಿಸುತ್ತದೆ. ಮಂದಿರ ನಿರ್ಮಾಣದಲ್ಲಿ ಯಾರು ಭಾಗಿಯಾಗಲು ಬಯಸುವರೋ ಅವರಿಗೆ ಒಂದು ಅವಕಾಶವಿದು’ ಎಂದು ಶ್ರೀಗಳು ನುಡಿದರು.

12.30ಕ್ಕೆ ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ ರಾಮ ಮಂದಿರದ ಭೂಮಿ ಪೂಜೆ!

‘ಕಾರ್ಪೋರೆಟ್‌ ಸಾಮಾಜಿಕ ಸಹಭಾಗಿತ್ವದ ಅಡಿಯೂ ದೇಣಿಗೆ ಸಂಗ್ರಹಿಸುವ ಇರಾದೆ ಟ್ರಸ್ಟ್‌ಗೆ ಇದೆ. ಮಂದಿರ ನಿರ್ಮಾಣಕ್ಕೆ 300 ಕೋಟಿ ರು. ಹಾಗೂ ಸುತ್ತಲಿನ ಸ್ಥಳದ ಅಭಿವೃದ್ಧಿಗೆ 1000 ಕೋಟಿ ರು.ಬೇಕಾಗಬಹುದು. ದೇಣಿಗೆ ಸಂಗ್ರಹಕ್ಕೆ 1 ತಿಂಗಳ ಅಭಿಯಾನ ನವೆಂಬರ್‌ 25ರ ಸುಮಾರಿಗೆ ನಡೆಯುವ ಸಾಧ್ಯತೆ ಇದೆ’ ಎಂದು ಅವರು ಮಾಹಿತಿ ನೀಡಿದರು.

ಮಂದಿರ ನಿರ್ಮಾಣಕ್ಕೆ ಆಗಸ್ಟ್‌ 5ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಲಿದ್ದಾರೆ.