Arvind Kejriwal: ದೆಹಲಿ ಚುನಾವಣೆ ಸೋಲಿನ ಬಳಿಕ ಕೇಜ್ರಿವಾಲ್ ಮತ್ತೊಮ್ಮೆ ಸಿಎಂ ಆಗಬಹುದು ಎಂದು ಪ್ರತಾಪ್ ಸಿಂಗ್ ಬಾಜ್ವಾ ಭವಿಷ್ಯ ನುಡಿದಿದ್ದಾರೆ. ಅದು ಹೇಗೆ ಅಂತ ಎಂಬುದರ ಮಾಹಿತಿ ಇಲ್ಲಿದೆ.
ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ, ಆಮ್ ಆದಿ ಪಕ್ಷದ ನಾಯಕ ಅರವಿಂದ ಕೇಜ್ರವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಕೆಳಗಿಳಿಸಿ ತಾವೇ ಸಿಎಂ ಸ್ಥಾನದಲ್ಲಿ ಕೂರಬಹುದು ಎಂದು ಪಂಜಾಬ್ ವಿಧಾನಸಭೆಯ ವಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಭವಿಷ್ಯ ನುಡಿದಿದ್ದಾರೆ.
'ಹಿಂದೂ ಕೂಡ ಪಂಜಾಬ್‌ನ ಮುಖ್ಯಮಂತ್ರಿ ಆಗಬಹುದು'ಎಂದು ಆಪ್‌ನ ಪಂಜಾಬ್ ಘಟಕದ ಅಧ್ಯಕ್ಷ ಅಮನ್ ಅರೋರಾ ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಾಜ್ವಾ ಈ ಭವಿಷ್ಯ ನುಡಿದಿದ್ದಾರೆ. ಹಾಲಿ ಆಪ್ ಶಾಸಕರ ನಿಧನದಿಂದಾಗಿ ಈಗಾಗಲೇ ಲೂಧಿಯಾನ ವಿಧಾನಸಭಾ ಕ್ಷೇತ್ರದ ಸ್ಥಾನ ತೆರವಾಗಿದೆ. ಇದು ಆ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಕೇಜ್ರಿವಾಲ್‌ಗೆ ಅನುಕೂಲ ಮಾಡಿಕೊಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಒಂದು ವೇಳೆ ಈ ರೀತಿಯೇನಾದರೂ ಆದರೆ ಹಾಲಿ ಸಿಎಂ ಮಾನ್, ಬೆಂಬಲಿಗರು ಹಾಗೂ ದಿಲ್ಲಿ ನಾಯಕತ್ವದ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯಲಿದೆ. ಪಂಜಾಬ್‌ನ ಆಪ್ ಶಾಸಕರಿಂದ ಇದರ ವಿರುದ್ಧ ದೊಡ್ಡಮಟ್ಟದ ವಿರೋಧ ವ್ಯಕ್ತವಾಗಲೂಬಹುದು ಎಂದು ಬಾಜ್ವಾ ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷದ ಸ್ಥಾನಮಾನ ಉಳಿಸಿಕೊಂಡ ಆಪ್
ಹ್ಯಾಟ್ರಿಕ್ ಜಯದ ಕನಸು ಕಂಡಿದ್ದ ಆಪ್‌ಗೆ ದೆಹಲಿ ಕಳೆದುಕೊಂಡಿದೆ. ಸೋತರೂ ಕೂಡ ಆಪ್‌ಗೆ ಚುನಾವಣಾ ಆಯೋಗ ನೀಡಿರುವ ರಾಷ್ಟ್ರೀಯ ಪಕ್ಷ ಎನ್ನುವ ಸ್ಥಾನಕ್ಕೆ ಯಾವುದೇ ಕುತ್ತಿಲ್ಲ. 2023ರ ಏಪ್ರಿಲ್‌ನಲ್ಲಿ ಚುನಾವಣಾ ಆಯೋಗ ಆಮ್ ಆದ್ಮಿಗೆ ರಾಷ್ಟ್ರೀಯ ಸ್ಥಾನಮಾನ ನೀಡಿತ್ತು. ಇದೀಗ ದೆಹಲಿ ಕೈ ತಪ್ಪಿದ್ದರೂ ಕೂಡ ಆ ಸ್ಥಾನ ಹಾಗೆಯೇ ಉಳಿಯಲಿದೆ. ನಿಯಮದ ಪ್ರಕಾರ ರಾಷ್ಟ್ರೀಯ ಪಕ್ಷ ಮಾನ್ಯತೆ ಪಡೆಯಲು ರಾಜ್ಯಗಳಲ್ಲಿ ಶೇ.6ರಷ್ಟು ಮತಪಡೆಯಬೇಕು, 2 ಶಾಸಕರನ್ನು ಹೊಂದಿರಬೇಕು. 4-5 ರಾಜ್ಯಗಳಲ್ಲಿ ರಾಜ್ಯಪಕ್ಷ ಸ್ಥಾನವಿರಬೇಕು. ಈಗಾಗಲೇ ಆಮ್ ಆದ್ಮಿ ಪಂಜಾಬ್, ಗೋವಾ, ಗುಜರಾತ್, ದೆಹಲಿಯಲ್ಲಿ ರಾಜ್ಯ ಸ್ಥಾನಮಾನ ಹೊಂದಿರುವ ಕಾರಣ ರಾಷ್ಟ್ರೀಯ ಪಕ್ಷ ಸ್ಥಾನಮಾನ ಭದ್ರವಾಗಿರಲಿದೆ.
ಇದನ್ನೂ ಓದಿ: ಚುನಾವಣೆ ಸೋಲಿನ ಬೆನ್ನಲ್ಲೇ AAPಗೆ ಮತ್ತೊಂದು ಆಘಾತ; ಸರ್ಕಾರ ರಚನೆ ಬಳಿಕ ಇದೇ ಕೆಲಸ ಮಾಡಲಿದೆ ಬಿಜೆಪ
ಗುಜರಾತ್‌ನಲ್ಲಿ ಸ್ಪರ್ಧಿಸಿದ್ದ 180ರ ಪೈಕಿ ಒಂದು ಸ್ಥಾನವೂ ಗೆಲ್ಲಲಾಗಲಿಲ್ಲ, ಹಿಮಾಚಲದಲ್ಲಿ ಸ್ಪರ್ಧಿಸಿದ್ದ 67 ಸ್ಥಾನಗಳ ಪೈಕಿ ಒಂದರಲ್ಲೂ ಗೆದ್ದಿರಲಿಲ್ಲ. ಗೋವಾದಲ್ಲಿ ಸ್ಪರ್ಧಿಸಿದ್ದ 39 ಸ್ಥಾನಗಳ ಪೈಕಿ 2ರಲ್ಲಿ ಮಾತ್ರ ಗೆಲ್ಲುವಲ್ಲಿ ಸಫಲವಾಗಿತ್ತು. ಪಂಜಾಬ್‌ನಲ್ಲಿ ಮಾತ್ರ 117ರ ಪೈಕಿ 92 ಸ್ಥಾನ ಗೆದ್ದು ದಿಲ್ಲಿಯ ರೀತಿಯಲ್ಲೇ ಅಭೂತಪೂರ್ವ ಗೆಲುವು ಸಾಧಿಸಿತ್ತು. ಉಳಿದಂತೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಎಲ್ಲೂ ಜಯ ಒಲಿದಿರಲಿಲ್ಲ.
ಲೋಕಸಭೆ ಚುನಾವಣೆ ವೇಳೆ ಒಗ್ಗಟ್ಟಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಸೆಣಸಿ ಪ್ರಬಲ ಸ್ಪರ್ಧೆ ನೀಡಿದ್ದ ಇಂಡಿಯಾ ಕೂಟವು ದೆಹಲಿ ಚುನಾವಣೆಯಲ್ಲಿಯೂ ಅದನ್ನೇ ಮುಂದುವರೆಸಿಕೊಂಡು ಬಂದಿದ್ದರೆ ವಿಜಯ ಪತಾಕೆ ಹಾರಿಸಬಹುದಿತ್ತು. ಕಾಂಗ್ರೆಸ್ ಹಾಗೂ ಆಪ್ ಒಟ್ಟಾಗಿದ್ದರೆ ಬಿಜೆಪಿಯನ್ನು ಕಟ್ಟಿಹಾಕಬಹುದಿತ್ತು ಎಂದು ವಿಶ್ಲೇಷಣೆ ಕೇಳಿಬಂದಿದೆ.
ಇದನ್ನೂ ಓದಿ: ದಿಲ್ಲಿ ಗದ್ದುಗೆಯಿಂದ AAP ಇಳಿಸಲು RSS ಸ್ವಯಂ ಸೇವಕರು ಗುಪ್ತಗಾಮಿನಿಯಂತೆ ಕೆಲಸ ಮಾಡಿದ್ದೇಗೆ?
