Delhi Politics: ದೆಹಲಿ ಚುನಾವಣೆಯಲ್ಲಿ ಆಪ್ ಸೋಲಿನ ಬೆನ್ನಲ್ಲೇ ಬಿಜೆಪಿ ಮತ್ತೊಂದು ಶಾಕ್ ನೀಡಲಿ ಸಜ್ಜಾಗಿದೆ. ಇತ್ತ ಮಾಜಿ ಸಿಎಂ ಆತಿಶಿ ಗೆಲುವಿನ ಸಂಭ್ರಮಾಚರಣೆ ವಿಡಿಯೋ ಟೀಕೆಗೆ ಗುರಿಯಾಗಿದೆ.

ನವದೆಹಲಿ: ಇಪ್ಪತ್ತೇಳು ವರ್ಷಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಆಪ್‌ಗೆ ಶಾಕ್‌ ನೀಡಿದ್ದ ಬಿಜೆಪಿ, ಇದೀಗ ಮತ್ತೊಂದು ಆಘಾತ ನೀಡಲು ಮುಂದಾಗಿದೆ. ಆಪ್‌ ಭಾರೀ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಚುನಾವಣೆಯ ಪ್ರಚಾರದುದ್ದಕ್ಕೂ ಭರ್ಜರಿ ಆರೋಪ ಮಾಡುತ್ತಲೇ ಬಂದಿದ್ದ ಬಿಜೆಪಿ, ಇದೀಗ ಹೊಸ ಸರ್ಕಾರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಆಪ್‌ ಸರ್ಕಾರದ ಭ್ರಷ್ಟಾಚಾರಗಳ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವುದಾಗಿ ಘೋಷಿಸಿದೆ.

ಬಿಜೆಪಿಯು ಭ್ರಷ್ಟಾಚಾರದ ಕುರಿತು ಶೂನ್ಯ ಸಹಿಷ್ಣುತೆಯನ್ನು ಹೊಂದಿದೆ ಮತ್ತು ಯಾರು ಹಗರಣಗಳಲ್ಲಿ ಭಾಗಿಯಾಗಿದ್ದಾರೋ ಅವರನ್ನು ಉತ್ತರದಾಯಿಗಳನ್ನಾಗಿ ಮಾಡಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷ ವಿರೇಂದ್ರ ಸಚ್‌ದೇವ್‌ ಹೇಳಿದ್ದಾರೆ. ಸಿಎಜಿ ವರದಿಯನ್ನು ಮೊದಲ ಕ್ಯಾಬಿನೆಟ್‌ನಲ್ಲೇ ಮಂಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅನೇಕ ಬಾರಿ ಹೇಳಿದ್ದಾರೆ. ಅದರಂತೆ ನಾವು ಮೊದಲ ಕ್ಯಾಬಿನೆಟ್‌ ಸಭೆಯಲ್ಲೇ ಆ ವರದಿಯನ್ನು ಮಂಡಿಸುತ್ತೇವೆ. ಇದರ ಜತೆಗೆ, ಎಲ್ಲಾ ಹಗರಣ ಪ್ರಕರಣಗಳ ಕುರಿತ ತನಿಖೆಗೆ ಎಸ್‌ಐಟಿಯನ್ನೂ ರಚಿಸುತ್ತೇವೆ ಎಂದು ಹೇಳಿದರು.

ಅತಿಶಿ ಡ್ಯಾನ್ಸ್ ವಿಡಿಯೋ ವೈರಲ್ 
ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸೋಲುಂಡರೂ ನಿರ್ಗಮಿತ ಸಿಎಂ ಆತಿಶಿ ಸಿಂಗ್ ಕಾಲ್ಕಾಜಿ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ. ತಮ್ಮ ಗೆಲುವಿನ ಸಂಭ್ರಮಾಚರಣೆ ವೇಳೆ ಅವರು ಡ್ಯಾನ್ಸ್ ಮಾಡಿರುವುದು ಈಗ ಟೀಕೆಗೆ ಗ್ರಾಸವಾಗಿದೆ. ಈ ಕುರಿತು ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ‘ಇದ್ಯಾವ ರೀತಿಯ ನಾಚಿಕೆಗೇಡಿನ ವರ್ತನೆ? ಪಕ್ಷ ಸೋತಿದೆ, ಎಲ್ಲ ಘಟಾನುಘಟಿ ನಾಯಕರು ಸೋತಿದ್ದಾರೆ, ಆತಿಶಿ ಮರ್ಲೆನಾ ಮಾತ್ರ ಸಂಭ್ರಮಿಸುತ್ತಿದ್ದಾರೆ’ ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ಓವೈಸಿ ಚದುರಂಗದಾಟಕ್ಕೆ ಬಿಜೆಪಿ ಚೆಕ್‌ಮೆಟ್; ಮುಸ್ಲಿಂ ಪ್ರಾಬಲ್ಯ ಕ್ಷೇತ್ರದಲ್ಲಿ ಕಮಲ ಬಾವುಟ ಹಾರಿದ್ದೇಗೆ?

Scroll to load tweet…

ಆಪ್‌ ಸೋಲಿಗೆ ಕಾರಣಗಳೇನು?

  • 10 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಆಮ್‌ ಆದ್ಮಿ ಪಕ್ಷದ ವಿರುದ್ಧದ ಹೆಚ್ಚಿದ್ದ ಆಡಳಿತ ವಿರೋಧಿ ಅಲೆ
  • ಲಿಕ್ಕರ್‌ ಹಗರಣ, ಶೀಶ್‌ ಮಹಲ್‌ ಪ್ರಕರಣಗಳಿಂದ ಕೇಜ್ರಿವಾಲ್‌ರಂಥ ಪ್ರಮುಖರ ವರ್ಚಸ್ಸಿಗೆ ಕಳಂಕ.
  • ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರ ಪರೋಕ್ಷ ಬೆಂಬಲ ಪಡೆದಿದ್ದ ಆಪ್‌ ಈ ಬಾರಿ ಏಕಾಂಗಿ.
  • ಆಪ್‌ ಸರ್ಕಾರ ಹಲವು ಉಚಿತಗಳೇನೋ ಕೊಟ್ಟಿದ್ದು ನಿಜ. ಆದರೆ ದೆಹಲಿ ಅಭಿವೃದ್ಧಿ ಮಾಡುವಲ್ಲಿ ವಿಫಲ.
  • ಈ ಬಾರಿ ತಂತ್ರಗಾರಿಕೆ ಬದಲಿಸಿದ ಬಿಜೆಪಿ. ಹಿಂದುತ್ವಕ್ಕಿಂತ ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಿದ್ದರಿಂದ ಯಶಸ್ಸು.
  • ಆಂತರಿಕ ಕಚ್ಚಾಟಗಳಿಂದ ಹಲವು ನಾಯಕರು ಪಕ್ಷ ತ್ಯಜಿಸಿದ್ದರಿಂದ ಆಪ್‌ ಸಂಘಟನೆಗೆ ಹಿನ್ನಡೆ.
  • ವಾಯು ಮಾಲಿನ್ಯ, ಯಮುನಾ ನದಿ ಮಾಲಿನ್ಯ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವೈಫಲ್ಯ
  • ಅಭಿವೃದ್ಧಿಗಿಂತ ಕೇಂದ್ರ ಸರ್ಕಾರದ ಜತೆಗೆ ಪದೇ ಪದೆ ತಿಕ್ಕಾಟಕ್ಕಿಳಿದದ್ದು
  • ಹರ್ಯಾಣ ಸರ್ಕಾರ ಯಮುನಾ ನದಿಗೆ ವಿಷಹಾಕಿದೆ ಎಂಬ ಆಪ್‌ ಮುಖಂಡರ ಅನಗತ್ಯ ಹೇಳಿಕೆಗಳು

ಇದನ್ನೂ ಓದಿ: ಕೊನೆ 15 ದಿನದಲ್ಲಿ ದೆಹಲಿ ಚುನಾವಣೆ ದಿಕ್ಕನ್ನೇ ಬದಲಿಸಿ ಬಿಜೆಪಿಯನ್ನು ಗೆಲ್ಲಿಸಿದ್ದೇಗೆ ರಾಹುಲ್-ಪ್ರಿಯಾಂಕಾ?