ನವದೆಹಲಿ[ಫೆ.27]: ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ವಾಯುಪಡೆಯ ಮೂಲಕ ದಾಳಿ ನಡೆಸಿ ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಮೈಲೇಜ್‌ ಗಳಿಸಿದ್ದಾರೆ. ಭಾರತವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ ಎಂಬ ಸಂದೇಶ ರವಾನಿಸುವ ಮೂಲಕ ಮತದಾರರ ಮನದಲ್ಲಿ ನಮ್ಮ ಪ್ರಧಾನಿ ಗಟ್ಟಿಗ ಎಂಬ ಸಂದೇಶವನ್ನೂ ಅವರು ಬಿತ್ತಿದಂತಾಗಿದೆ.

ಗಡಿನಿಯಂತ್ರಣ ರೇಖೆ ಬಳಿ ಎಂದಿನಂತೆ ವಹಿವಾಟು!

2016ರಲ್ಲಿ ಪಾಕಿಸ್ತಾನದ ಮೇಲೆ ಸರ್ಜಿಕಲ್‌ ದಾಳಿ ನಡೆಸಿದಾಗ ಮೋದಿಯವರ ಖ್ಯಾತಿ ಉತ್ತುಂಗಕ್ಕೇರಿತ್ತು. ಆದರೆ, ಈ ಬಾರಿ ಲೋಕಸಭೆ ಚುನಾವಣೆಗೆ ಕೇವಲ ಮೂರು ತಿಂಗಳಿರುವಾಗ ಆಗಿನ ಸರ್ಜಿಕಲ್‌ ದಾಳಿಗಿಂತ ದೊಡ್ಡ ಪ್ರಮಾಣದ ಯಶಸ್ವಿ ದಾಳಿಯನ್ನು ಪಾಕ್‌ ಮೇಲೆ ನಡೆಸಲಾಗಿದೆ. ಇದು ಚುನಾವಣೆಯವರೆಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ನೆನಪಿನಲ್ಲುಳಿಯುವುದರಿಂದ ಬಿಜೆಪಿಗೆ ರಾಜಕೀಯವಾಗಿ ದೊಡ್ಡ ಲಾಭ ತಂದುಕೊಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕಳೆದ 2014ರ ಲೋಕಸಭೆ ಚುನಾವಣೆಯ ವೇಳೆ ಇದ್ದಷ್ಟುಪ್ರಬಲವಾದ ಮೋದಿ ಅಲೆ 2019ರ ಲೋಕಸಭೆ ಚುನಾವಣೆಯ ವೇಳೆ ಇಲ್ಲ. ಇನ್ನು, ಚುನಾವಣಾ ಪೂರ್ವ ಸಮೀಕ್ಷೆಗಳು ಕೂಡ ಎನ್‌ಡಿಎಗೆ ಪೂರ್ಣ ಬಹುಮತ ಲಭಿಸುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿವೆ. ಹೀಗಿರುವಾಗ ಭಾರತದ ಸಾಂಪ್ರದಾಯಿಕ ವೈರಿಯಾದ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿರುವುದು, ಅದೂ ಪುಲ್ವಾಮಾದಲ್ಲಿ 40 ಸೈನಿಕರನ್ನು ಪಾಕ್‌ ಪ್ರೇಷಿತ ಭಯೋತ್ಪಾದಕ ಬಲಿತೆಗೆದುಕೊಂಡಿದ್ದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಿರುವುದು ಮತದಾರರನ್ನು ಭಾವನಾತ್ಮಕವಾಗಿ ಸೆಳೆಯಲಿದೆ ಎಂದು ಹೇಳಲಾಗುತ್ತಿದೆ.

All Is Well ಎಂದಿದ್ದ ಪಾಕ್ ಆರ್ಮಿ: ಸಾಲಾ ಕಣ್ತೆರೆದು ಮಲಗಿತ್ತು ಎಂದ ಪಾಕಿ ಸಿಟಿಜನ್ಸ್!

ಮೋದಿ ಸರ್ಕಾರ ತನ್ನ ಅವಧಿಯಲ್ಲಿ ದೇಶದ ಮೇಲೆ ಭಯೋತ್ಪಾದಕ ದಾಳಿಗಳು ನಡೆದಿಲ್ಲ ಎಂದು ಪದೇಪದೇ ಹೇಳಿಕೊಳ್ಳುತ್ತಿತ್ತು. ದೇಶದ ಒಳಗೆ, ಮುಖ್ಯವಾಗಿ ಜನಸಾಮಾನ್ಯರ ಮೇಲೆ ಕಳೆದ ಐದು ವರ್ಷಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಿಲ್ಲ ಎಂಬುದು ನಿಜವೂ ಹೌದು. ಆದರೆ, 2016ರಲ್ಲಿ ಪಠಾಣ್‌ಕೋಟ್‌ನ ವಾಯುನೆಲೆಯ ಮೇಲೇ ಉಗ್ರರು ದಾಳಿ ನಡೆಸಿದರು.

ನಂತರ ಉರಿಯಲ್ಲೂ ಸೇನಾ ಕ್ಯಾಂಪ್‌ ಮೇಲೆ ದೊಡ್ಡ ದಾಳಿ ನಡೆಸಿ 19 ಸೈನಿಕರನ್ನು ಬಲಿ ಪಡೆದರು. ನಂತರ ಈ ವರ್ಷ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಬಸ್‌ ಮೇಲೆ ಆತ್ಮಹತ್ಯಾ ದಾಳಿ ನಡೆಸಿ 40 ಯೋಧರನ್ನು ಹತ್ಯೆಗೈದರು. ಹೀಗಾಗಿ ನಮ್ಮ ಅವಧಿಯಲ್ಲಿ ಭಯೋತ್ಪಾದಕ ದಾಳಿ ನಡೆದಿಲ್ಲ ಎಂಬ ಎನ್‌ಡಿಎ ಹೆಗ್ಗಳಿಕೆ ಹುಸಿಯಾಗತೊಡಗಿತ್ತು. ಆದರೆ, ಆ ಎಲ್ಲ ದಾಳಿಗಳನ್ನೂ ಮೀರಿಸುವಂತೆ ಈಗ ಸೇಡು ತೀರಿಸಿಕೊಂಡಿರುವುದರಿಂದ ಮೋದಿಯವರ ಕಠಿಣ ನಾಯಕತ್ವದ ಬಗ್ಗೆ ಜನರಿಗೆ ಮತ್ತೊಮ್ಮೆ ವಿಶ್ವಾಸ ಮೂಡುವಂತಾಗಿದೆ.