ಉತ್ತರಾಖಂಡ್‌ನ ರಿಷಿಕೇಶದಲ್ಲಿ ಹೋರಿಯೊಂದು ಸ್ಕೂಟಿಯನ್ನು ಓಡಿಸಿದ ವಿಚಿತ್ರ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಕೂಟಿ ಸ್ಟಾರ್ಟ್ ಆಗಿ ಚಲಿಸುತ್ತಿದ್ದಂತೆ ಹೋರಿ ಅದರ ಮೇಲೆ ಕಾಲುಗಳನ್ನಿರಿಸಿ ಓಡಿಸಿಕೊಂಡು ಹೋಗಿದೆ.
ಹೋರಿಯೊಂದು ರಸ್ತೆ ಬದಿ ನಿಂತಿದ್ದ ಸ್ಕೂಟಿಯನ್ನು ಓಡಿಸಿದಂತಹ ವಿಚಿತ್ರ ಘಟನೆಯೊಂದು ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉತ್ತರಾಖಂಡ್‌ನ ರಾಜಧಾನಿಯ ಡೆಹ್ರಾಡೂನ್ ಸಮೀಪದ ರಿಷಿಕೇಶದ ಜನವಸತಿ ಪ್ರದೇಶ ಗುಮನಿವಾಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಅಧಿಕಾರಿಗಳು 32 ಸೆಕೆಂಡ್‌ನ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಈ ಹೋರಿಯ ಸ್ಕೂಟಿ ರೈಡ್ ವೀಡಿಯೋ ಸೆರೆಯಾಗಿದೆ. ಮೇ 2 ರಂದು ಶುಕ್ರವಾರ ಅಂದರೆ ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಈ ಘಟನೆ ನಡೆದಿದೆ.
ಸಾಮಾನ್ಯವಾದ ಬೀದಿಯಲ್ಲಿ ಓಡಾಡುವ ಹೋರಿಯೊಂದಕ್ಕೆ ಸ್ಕೂಟಿ ನೋಡಿ ಏನನಿಸಿತೋ ಏನೋ ಸೀದಾ ತನ್ನೆರಡು ಮುಂದಿನ ಕಾಲುಗಳನ್ನು ಸ್ಕೂಟಿಯ ಮೇಲಿರಿಸಿ ಅದನ್ನು ಏರಲು ನೋಡಿದೆ. ಈ ವೇಳೆ ಸ್ಕೂಟಿ ಸ್ಟಾರ್ಟ್ ಆಗಿದ್ದು, ಮುಂದೆ ಹೋದರೆ ಹೋರಿ ಜೊತೆಯಲ್ಲೇ ಸಾಗಿದೆ ಮುಂದಿನ ಎರಡು ಕಾಲು ಸ್ಕೂಟಿ ಮೇಲೆ ಹಿಂದಿನ ಎರಡು ಕಾಲು ನೆಲದ ಮೇಲೆ ಇರಿಸಿಕೊಂಡು ಸ್ಕೂಟಿ ಮೇಲೇ ಹೋರಿ ಸಾಗಿದೆ. ಹೀರೋ ಮಯಿಸ್ಟೋದ ಸ್ಕೂಟಿ ಇದಾಗಿದೆ. ಈ ವೇಳೆ ಪಕ್ಕದಲ್ಲೇ ಶಾಲೆಯಿಂದ ಪುಟ್ಟ ಮಗುವನ್ನು ಕರೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರು ಭಯದಿಂದ ಪಕ್ಕಕ್ಕೆ ಸರಿದು ಹೋಗುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಆ ಮಹಿಳೆ ತಿರುಗಿ ನೋಡುವಷ್ಟರಲ್ಲಿ ಈ ಹೋರಿ ಸ್ಕೂಟಿಯ ಜೊತೆ ಮುಂದೆ ಸಾಗಿ ಓಡಿಸಿಕೊಂಡು ಹೋಗಿ ರಸ್ತೆ ಬದಿಯ ಕರೆಂಟ್ ಕಂಬದ ಸಮೀಪ ಬ್ಯಾಲೆನ್ಸ್ ಕಳೆದುಕೊಂಡಿದೆ.
ಸ್ಕೂಟಿಯೂ ಕೂಡ ಕೀ ಕೊಟ್ಟು ಸ್ಟಾರ್ಟ್ ಮಾಡಿದಂತೆ ತುಂಬಾ ವೇಗವಾಗಿ ಓಡುತ್ತಿರುವಂತೆ ವಿಡಿಯೋದಲ್ಲಿ ಕಾಣಿಸುತ್ತಿದೆ. ರಸ್ತೆಯ ಇಳಿಜಾರಿನ ರೀತಿಯಿಂದಾಗಿ ಸ್ಕೂಟಿ ಹೋರಿ ಮೇಲೆರುತ್ತಿದ್ದಂತೆ ಸಾಕಷ್ಟು ವೇಗ ಪಡೆದುಕೊಂಡಿದೆ. ಆದೆ ಅಕ್ಸಿಲೇಟರ್ ಟಚ್ ಆಗಿದ್ದಿರಬಹುದು. ಹೀಗಾಗಿ ಇಷ್ಟೊಂದು ವೇಗವಾಗಿ ಸ್ಕೂಟಿ ಸಾಗಿರಬಹುದು ಎಂದು ವೀಡಿಯೋ ನೋಡಿದ ಕೆಲವರು ವಿಶ್ಲೇಷಿಸಿದ್ದಾರೆ. ನಡುರಸ್ತೆಯಲ್ಲಿ ಸ್ವಲ್ಪ ಕಾಲ ಚಲಿಸಿದ ನಂತರ ಮನೆಯ ಗೇಟೊಂದಕ್ಕೆ ಡಿಕ್ಕಿ ಹೊಡೆದಿದೆ ನಂತರ ಸ್ಕೂಟಿ ಎಡಕ್ಕೆ ತಿರುಗಿ ಟ್ರಾನ್ಸ್‌ಫಾರ್ಮರ್ ಇರುವ ಕರೆಂಟ್ ಕಂಬದ ಪಕ್ಕಕ್ಕೆ ಹೋಗಿ ನಿಂತಿದೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ವೈರಲ್ ವೀಡಿಯೋಗಳನ್ನು ಪೋಸ್ಟ್ ಮಾಡುತ್ತಿರುವ ಘರ್ ಕೆ ಕಲೇಶ್ ಎಂಬ ಎಕ್ಸ್ ಪೇಜ್ ಕೂಡ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ನೀವು ಅನೇಕ ಬಾರಿ ಸ್ಕೂಟಿ ಕದಿಯುವ ಜನರನ್ನು ನೋಡಿರಬಹುದು, ಆದರೆ ರಿಷಿಕೇಶದಲ್ಲಿ ನಡೆದ ಕಳ್ಳತನ ಪ್ರಕರಣ ವಿಭಿನ್ನವಾಗಿದೆ. ಇಲ್ಲಿ ಬೀದಿಯಲ್ಲಿ ಓಡಾಡುವ ಎತ್ತು ಹೋರಿ ಕೂಡ ಸ್ಕೂಟಿ ಓಡಿಸುತ್ತದೆ ಎಂದು ಬರೆದಿದ್ದಾರೆ. ವೀಡಿಯೋ ನೋಡಿದ ಅನೇಕರು ಹಲವು ತಮಾಷೆಯ ಕಾಮೆಂಟ್ ಮಾಡಿದ್ದಾರೆ.
ಈಗ ಸ್ಕೂಟಿಯ ಮಾಲೀಕನ ಬಳಿ ಏನೂ ಅಂತ ಹೇಳೋದು ಸ್ಕೂಟಿಯನ್ನು ಕದ್ದಿದ್ದೂ ಮನುಷ್ಯರಲ್ಲ ಅಂತ ಹೇಳೋದಾ ಎಂದು ಒಬ್ಬರು ಕೇಳಿದ್ದಾರೆ. ತುಂಭಾ ಜಾಸ್ತಿ ತೂಕ ಇರುವ ಡ್ರೈವರ್ ಇವ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆತ ಸ್ಕೂಟಿಯನ್ನು ಕದ್ದುಕೊಂಡು ಹೋಗಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಬುಲ್ ಕೂಡ ಸೊಗಸಾಗಿ ಸ್ಕೂಟಿ ರೈಡ್ ಮಾಡ್ತಿದೆ ಎಂದು ಈಗ ತಿಳಿಯಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂದು ನಿನ್ನ ಗಾಡಿಯನ್ನು ನಿನ್ನ ಸೋದರ ಓಡಿಸಿದ್ದಾನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಇದನ್ನು ಹೋಂಡಾಬುಲ್ ಎಂದು ನೋಡುಗರೊಬ್ಬರು ಕರೆದಿದ್ದಾರೆ. ಮತ್ತೊಬ್ಬರು ಆ ಹೋರಿ ಸ್ಕೂಟಿಯನ್ನು ಹೆಣ್ಣೆಂದು ಭಾವಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ಮಾಲೀಕ ಇನ್ಸ್ಯೂರೆನ್ಸ್ ಸಂಸ್ಥೆಗೆ ಏನೂ ಅಂತ ಹೇಳುತ್ತಾನೆ ಎಂದು ಮತ್ತೊಬ್ಬರು ಕೇಳಿದ್ದಾರೆ. ಬಹುಶಃ ವೀಡಿಯೋ ಇಲ್ಲದಿದ್ದರೆ ಇಂತಹ ಘಟನೆಯನ್ನು ಯಾರೋ ನಂಬಲು ಸಾಧ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.


