ಎರಡು ವರ್ಷಗಳ ಹಿಂದೆ ಓಡಿಹೋಗಿದ್ದ ಪತ್ನಿಯನ್ನು, ಪತಿಯೊಬ್ಬ ಸಿಲಿಗುರಿಯ ಮತಗಟ್ಟೆಯ ಬಳಿ ಐದು ಗಂಟೆಗಳ ಕಾಲ ಕಾದು ಹಿಡಿದಿದ್ದಾನೆ. ಮತ ಚಲಾಯಿಸಲು ಬಂದ ಪತ್ನಿ ಸಿಕ್ಕ ಕೂಡಲೇ ಆಕೆಯ ಮೇಲೆ ಹಲ್ಲೆಗೆ ಮುಂದಾದ ಪತಿಯನ್ನು ಭದ್ರತಾ ಸಿಬ್ಬಂದಿ ತಡೆದು ಮಹಿಳೆಯನ್ನು ರಕ್ಷಿಸಿದ್ದಾರೆ.

ಸಿಲಿಗುರಿ (ಪಶ್ಚಿಮ ಬಂಗಾಳ): ವರ್ಷಗಳ ಹಿಂದೆ ಬೇರೊಬ್ಬ ವ್ಯಕ್ತಿಯ ಜೊತೆ ಓಡಿಹೋಗಿದ್ದ ಹೆಂಡತಿಯನ್ನು, ಮತಗಟ್ಟೆಯ ಬಳಿ 5 ತಾಸು ಕಾದು ಕುಳಿತು, ಹಿಡಿಯುವಲ್ಲಿ ಆಕೆಯ ಪತಿ ಯಶಸ್ವಿಯಾಗಿದ್ದಾನೆ. ಈ ಘಟನೆ ಸಿಲಿಗುರಿ ಉಪವಿಭಾಗದ ಮತಿಗರಾ-ನಕ್ಸಲ್‌ಬಾರಿ ವಿಧಾನಸಭಾ ಕ್ಷೇತ್ರದ ಫಾನ್ಸಿದೇವಾದ ತಾರಾಬರಿಯ ಬೂತ್ ಸಂಖ್ಯೆ 25/238ರಲ್ಲಿ ಗುರುವಾರ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತ್ನಿ ಕೈಗೆ ಸಿಕ್ಕ ಕೂಡಲೇ ಆಕೆಯ ಕೂದಲು ಎಳೆದಾಡಿ, ಹಲ್ಲೆಗೆ ಮುಂದಾಗಿದ್ದಾನೆ. ಆಗ ಆಕ್ರೋಶಿತ ಪತಿಯನ್ನು ಸಿಎಪಿಎಫ್‌ ಸಿಬ್ಬಂದಿ ತಡೆದು, ಮಹಿಳೆಯನ್ನು ರಕ್ಷಿಸಿದ್ದಾರೆ.

ಏನಿದು ಪ್ರಕರಣ?

ಮತಗಟ್ಟೆಯ ಎದುರು ಮುಂಜಾನೆಯಿಂದಲೇ ವ್ಯಕ್ತಿಯೊಬ್ಬ ಸುಮ್ಮನೆ ನಿಂತಿದ್ದ. ಯಾರ ಬಳಿಯೂ ಮಾತಾಡುತ್ತಿರಲಿಲ್ಲ. ಬಿಸಿಲಿನ ಧಗೆಗೆ ಬೆವರು ಇಳಿಯುತ್ತಿದ್ದರೂ ಮಿಸುಕಾಡುತ್ತಿರಲಿಲ್ಲ. ಮಧ್ಯಾಹ್ನ 2 ಗಂಟೆಗೆ ಮಹಿಳೆಯೊಬ್ಬಳು ತನ್ನ ಮತಚೀಟಿ ಮತ್ತು ಎಪಿಕ್‌ ಕಾರ್ಡ್‌ ಹಿಡಿದು ಮತಗಟ್ಟೆಗೆ ಬಂದಳು.

ಈ ವ್ಯಕ್ತಿ ತಕ್ಷಣ ಆಕೆಯತ್ತ ನುಗ್ಗಿ, ಕೂದಲು ಎಳೆದು, ಮತಚೀಟಿಯನ್ನು ಕಸಿಯಲು ಮುಂದಾಗಿದ್ದಾನೆ. ಈ ವೇಳೆ ರಂಪಾಟ ಸೃಷ್ಟಿಯಾಗಿದೆ. ನಂತರ ಇಬ್ಬರು ಸಿಎಪಿಎಫ್‌ ಸಿಬ್ಬಂದಿ ಧಾವಿಸಿ, ಅವನನ್ನು ತಡೆದು ಮಹಿಳೆಯನ್ನು ರಕ್ಷಿಸಿದ್ದಾರೆ. ಆಕೆ ಈತನ ಪತ್ನಿಯಾಗಿದ್ದು, 2 ವರ್ಷದ ಹಿಂದೆ ಇವನನ್ನು ಬಿಟ್ಟು ಬೇರೊಬ್ಬನ ಜೊತೆ ಓಡಿಹೋಗಿದ್ದಳು. ನಂತರ ಆತನ ಕೈಗೆ ಸಿಕ್ಕಿರಲಿಲ್ಲ ಎಂದು ತಿಳಿದುಬಂದಿದೆ.

ಪತ್ನಿ ಹಿಡಿಯಲು ನೆರವಾದ ಎಸ್‌ಐಆರ್‌!

ಬಂಗಾಳದಲ್ಲಿ ಮತಪಟ್ಟಿ ಪರಿಷ್ಕರಣೆಯ ಬಳಿಕ ಮತ ಚಲಾಯಿಸದಿದ್ದರೆ, ತಮ್ಮ ಹೆಸರು ಪಟ್ಟಿಯಿಂದ ಹೊರಗುಳಿಯಬಹುದು ಎಂಬ ಭೀತಿ ಜನರನ್ನು ಕಾಡುತ್ತಿದೆ. ಹೀಗಾಗಿ ತನ್ನ ಪತ್ನಿಯೂ ವೋಟ್‌ ಹಾಕಲು ಮತಗಟ್ಟೆಗೆ ಬಂದೇ ಬರುತ್ತಾಳೆ ಎಂದು ಅಂದಾಜಿಸಿದ್ದ ಪತಿ ಸಮಯ ನೋಡಿ ಆಕೆಯನ್ನು ಹಿಡಿದಿದ್ದಾನೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಸಿಎಂ ಕನಸು ಭಗ್ನಗೊಳಿಸಿದ್ದು ಸಿದ್ದು-ಡಿಕೆಶಿ ಎಂದ ಬಿಜೆಪಿ ಶಾಸಕ

ಈ ವೇಳೆ, ಎಪಿಕ್‌ ಕಾರ್ಡ್‌ನಲ್ಲಿ ಆಕೆಯ ಪತಿ ಎಂದು ನಮೂದಾಗಿರುವ ತನ್ನ ಹೆಸರನ್ನು ತೆಗೆದುಹಾಕುವವರೆಗೂ ಆಕೆಗೆ ಮತ ಚಲಾಯಿಸಲು ಬಿಡಬಾರದು ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾನೆ. ಆದರೆ ಅಧಿಕಾರಿಗಳು ನಿರಾಕರಿಸಿದ ಕಾರಣ, ಅವರೆಲ್ಲರಿಗೆ ಶಾಪ ಹಾಕುತ್ತಾ ಸ್ಥಳದಿಂದ ನಿರ್ಗಮಿಸಿದ್ದಾನೆ. ಪತ್ನಿಯೂ ಮತ ಚಲಾಯಿಸಿ ತೆರಳಿದ್ದಾಳೆ.

ಇದನ್ನೂ ಓದಿ: ಶ್ವೇತಭವನದಲ್ಲಿ ಗುಂಡಿನ ಸದ್ದು: ಡೊನಾಲ್ಡ್ ಟ್ರಂಪ್ ಔತಣಕೂಟದಲ್ಲಿ ಫೈರಿಂಗ್? ವಿಡಿಯೋ