* ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್* ಪಕ್ಷ ಬಿಟ್ಟ ಹಾರ್ದಿಕ್‌ರಿಂದ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ* ಹಿಂದೂಗಳೆಂದರೆ ನಿಮಗ್ಯಾಕೆ ಇಷ್ಟೊಂದು ದ್ವೇಷ ಎಂದ ಹಾರ್ದಿಕ್

ಅಹಮದಾಬಾದ್(ಮೇ.24): ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷ ತೊರೆದಿರುವ ರಾಜಕಾರಣಿ ಹಾಗೂ ಸಮಾಜ ಸೇವಕ ಹಾರ್ದಿಕ್ ಪಟೇಲ್ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಜನರ ಭಾವನೆಗಳನ್ನು ನೋಯಿಸುತ್ತದೆ ಮತ್ತು ಹಿಂದೂ ಧರ್ಮದ ನಂಬಿಕೆಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಗುಜರಾತ್ ಕಾಂಗ್ರೆಸ್ ನಾಯಕರೊಬ್ಬರ ಹೇಳಿಕೆ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದ್ದಾರೆ.

Scroll to load tweet…

ಹೌದು ಗುಜರಾತ್ ನಲ್ಲಿ ಕಾಂಗ್ರೆಸ್ ನ ಕಾರ್ಯಾಧ್ಯಕ್ಷರಾಗಿದ್ದ ಹಾರ್ದಿಕ್ ಪಟೇಲ್ ಇದೀಗ ಕಾಂಗ್ರೆಸ್ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ. ಹಾರ್ದಿಕ್ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಮಾಜಿ ಕೇಂದ್ರ ಸಚಿವರಾಗಿದ್ದ ಗುಜರಾತ್ ಕಾಂಗ್ರೆಸ್ ನಾಯಕ ರಾಮಮಂದಿರದ ಇಟ್ಟಿಗೆಗಳ ಮೇಲೆ ನಾಯಿಗಳು ಮೂತ್ರ ವಿಸರ್ಜನೆ ಮಾಡುತ್ತವೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಹಾರ್ದಿಕ್ ಹೇಳಿದ್ದಾರೆ, ಹಾಗಾಗಿ ನೀವು ಶ್ರೀಗಳನ್ನು ಪೂಜಿಸಬೇಕೆಂದು ನಾನು ಕಾಂಗ್ರೆಸ್ ಮತ್ತು ಅದರ ನಾಯಕರನ್ನು ಕೇಳಲು ಬಯಸುತ್ತೇನೆ. ಶ್ರೀರಾಮನ ಮೇಲೆ ನಿಮಗ್ಯಾಕೆ ದ್ವೇಷ? ಹಿಂದೂಗಳ ಮೇಲೆ ಯಾಕೆ ಇಷ್ಟೊಂದು ಕೋಪ?" ಎಂದು ಪ್ರಶ್ನಿಸಿದ್ದಾರೆ.

ಅಯೋಧ್ಯೆಯಲ್ಲಿ ಶತಮಾನಗಳ ನಂತರ ಭಗವಾನ್ ಶ್ರೀರಾಮನ ಮಂದಿರ ನಿರ್ಮಾಣವಾಗುತ್ತಿರುವುದಕ್ಕೆ ನಾವು ಹೆಮ್ಮೆ ಪಡಬೇಕು, ಆದರೂ ಕಾಂಗ್ರೆಸ್ ನಾಯಕರು ಭಗವಾನ್ ಶ್ರೀರಾಮನ ವಿರುದ್ಧ ಕೀಳು ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಲ್ಲದೇ ಶ್ರೀರಾಮ ಮತ್ತು ಹಿಂದೂಗಳು ಮೇಲೆ ಕಾಂಗ್ರೆಸ್‌ಗೆ ಯಾಕಿಷ್ಟು ಕೋಪ ಎಂದೂ ಕೇಳಿದ್ದಾರೆ. 

"ಕಾಂಗ್ರೆಸ್ ಪಕ್ಷವು ಜನರ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ನಾನು ಈ ಹಿಂದೆಯೂ ಹೇಳಿದ್ದೆ. ಯಾವಾಗಲೂ ಹಿಂದೂಗಳ ನಂಬಿಕೆಗೆ ಧಕ್ಕೆ ತರಲು ಪ್ರಯತ್ನಿಸುತ್ತದೆ. ಆದರೆ ರಾಮಮಂದಿರವನ್ನು ಶೀಘ್ರವಾಗಿ ನಿರ್ಮಿಸಬೇಕೆಂದು ನಾನು ಬಯಸುತ್ತೇನೆ" ಎಂದು ಹಾರ್ದಿಕ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಟಾರ್ಗೆಟ್‌

ಆದರೆ ಇಂತಹುದ್ದೊಂದು ಕಾಮೆಂಟ್ ಮಾಡಿದ ಹಾರ್ದಿಕ್ ಪಟೇಲ್ ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಜಕೀಯ ಕಾಮೆಂಟ್‌ ಮಾಡುವ ಪ್ರಯಾಗ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಹಾರ್ದಿಕ್ ಅವರ ಚಿತ್ರವನ್ನು ಹಂಚಿಕೊಂಡು "ಹೇಳಲು ಏನೂ ಉಳಿದಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ, ಅದೇ ರೀತಿ ಇನ್ನೊಬ್ಬ ಬಳಕೆದಾರ ರಾಜೇಶ್ ಸಾಹು ಈ ಬಗ್ಗೆ ಬರೆದಿದ್ದು, "ಹಾರ್ದಿಕ್ ಭಾಯ್, ತುಂಬಾ ವೇಗವಾಗಿ ಬದಲಾಗುತ್ತೀರೆಂದು ಅಂದುಕೊಂಡಿರಲಿಲ್ಲ. ನೀವು ಕಪಿಲ್ ಮಿಶ್ರಾ ಆಗಲು ಬಯಸುತ್ತೀರಿ ಎಂದು ನಾನು ಒಪ್ಪುತ್ತೇನೆ. ಆದರೆ ಸ್ವಲ್ಪ ತಡೆದುಕೊಳ್ಳಿ. ಇಲ್ಲದಿದ್ದರೆ ಜನರು ಬಹಳಷ್ಟು ಮೀಮ್‌ಗಳನ್ನು ಮಾಡುತ್ತಾರೆ. ಅಲ್ಪೇಶ್ ಠಾಕೋರ್‌ನಂತೆ!" ಎಂದು ಹಾಸ್ಯ ಮಾಡಿದ್ದಾರೆ.

Scroll to load tweet…

ಮೇ 18 ರಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಹಾರ್ದಿಕ್ 

ಹಾರ್ದಿಕ್ ಪಟೇಲ್ ಅವರು ಮೇ 18 ರಂದು ಕಾಂಗ್ರೆಸ್ ಪಕ್ಷದ ಸ್ಥಾನ ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಪಕ್ಷವು ಕೇವಲ ಪ್ರತಿಭಟನೆಯ ರಾಜಕೀಯಕ್ಕೆ ಸೀಮಿತವಾಗಿದೆ ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. ಆದರೆ ದೇಶದ ಜನರಿಗೆ ವಿರೋಧವಲ್ಲ, ಆದರೆ ಅವರ ಭವಿಷ್ಯದ ಬಗ್ಗೆ ಯೋಚಿಸುವ ಮತ್ತು ನಮ್ಮ ದೇಶವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಪರ್ಯಾಯ ಬೇಕಿದೆ ಎಂದಿದ್ದಾರೆ.

ಅಯೋಧ್ಯೆಯ ರಾಮ ಮಂದಿರವಾಗಲಿ, ಸಿಎಎ-ಎನ್‌ಆರ್‌ಸಿ ಸಮಸ್ಯೆಯಾಗಲಿ, ಜಮ್ಮು ಮತ್ತು ಕಾಶ್ಮೀರದಿಂದ ಆರ್ಟಿಕಲ್ 370 ರದ್ದತಿಯಾಗಲಿ ಅಥವಾ ಜಿಎಸ್‌ಟಿ ಜಾರಿಯಾಗಲಿ, ದೇಶವು ದೀರ್ಘಕಾಲದಿಂದ ಪರಿಹಾರವನ್ನು ಬಯಸುತ್ತದೆ. ಆದರೆ, ಕಾಂಗ್ರೆಸ್ ಮಾತ್ರ ಇದಕ್ಕೆ ಅಡ್ಡಿಯಾಗಿ ವರ್ತಿಸುತ್ತಲೇ ಇತ್ತು. ಕಾಂಗ್ರೆಸ್‌ನ ನಿಲುವು ಕೇಂದ್ರವನ್ನು ವಿರೋಧಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು ಎಂದೂ ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.