ದೆಹಲಿಯಲ್ಲಿ ಶಿಕ್ಷಕಿಯೊಬ್ಬರು ಕೆಲ ವಿದ್ಯಾರ್ಥಿಗಳಿಗೆ ನೀವ್ಯಾಕೆ ಪಾಕಿಸ್ತಾನಕ್ಕೆ ಹೋಗ್ಲಿಲ್ಲ ಎಂದು ಕೇಳಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಕೇಸ್‌ ದಾಖಲಿಸಲಾಗಿದೆ. 

ನವದೆಹಲಿ (ಆಗಸ್ಟ್‌ 29, 2023): ದೆಹಲಿಯ ಶಾಲೆಯೊಂದರ ನಾಲ್ವರು ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಕೋಮುವಾದಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದು, ವಿಭಜನೆಯ ಸಮಯದಲ್ಲಿ ತಮ್ಮ ಕುಟುಂಬಗಳು ಪಾಕಿಸ್ತಾನಕ್ಕೆ ಏಕೆ ಹೋಗಲಿಲ್ಲ ಎಂದು ಕೇಳಿದ್ದಾರೆ. ಉತ್ತರ ಪ್ರದೇಶದ ಮುಜಾಫರ್‌ನಗರದಿಂದ ವೈರಲ್ ಆಗಿರುವ ವಿಡಿಯೋದಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈ ಆರೋಪ ಕೇಳಿಬಂದಿದೆ.

ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಆದೇಶದ ಮೇರೆಗೆ ಮುಸ್ಲಿಂ ಸಹಪಾಠಿಯನ್ನು ಕಪಾಳಮೋಕ್ಷ ಮಾಡಿದ ಘಟನೆ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಅಲ್ಲದೆ, ಮುಝಾಫರ್‌ನಗರದ ತ್ರಿಪ್ತ ತ್ಯಾಗಿ ಎಂಬ ಶಿಕ್ಷಕಿ ಕೋಮುವಾದಿ ಹೇಳಿಕೆ ನೀಡಿದ್ದರು ಎಂದೂ ವರದಿಯಾಗಿತ್ತು. ಈ ಬೆನ್ನಲ್ಲೇ ದೆಹಲಿಯಲ್ಲಿ ಶಿಕ್ಷಕಿಯೊಬ್ಬರು ಕೆಲ ವಿದ್ಯಾರ್ಥಿಗಳಿಗೆ ನೀವ್ಯಾಕೆ ಪಾಕಿಸ್ತಾನಕ್ಕೆ ಹೋಗ್ಲಿಲ್ಲ ಎಂದು ಕೇಳಿದ್ದಾರೆ. 

ಇದನ್ನು ಓದಿ: ಡ್ಯೂಟಿಲೂ ಫುಲ್‌ ಟೈಟ್‌: ಸರ್ಕಾರಿ ಕಚೇರಿಯಲ್ಲೇ ಮದ್ಯ ಸೇವಿಸಿದ ಉದ್ಯೋಗಿ; ವಿಡಿಯೋ ವೈರಲ್‌

9ನೇ ತರಗತಿ ವಿದ್ಯಾರ್ಥಿಗಳ ಕುಟುಂಬದವರು ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಗಾಂಧಿನಗರದ ಸರ್ಕಾರಿ ಸರ್ವೋದಯ ಬಾಲ ವಿದ್ಯಾಲಯದ ಶಿಕ್ಷಕಿ ಹೇಮಾ ಗುಲಾಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು, ಈ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಮಾ ಗುಲಾಟಿ ಅವರು ಬುಧವಾರ ಕೋಮುವಾದಿ ಹೇಳಿಕೆ ನೀಡಿದ್ದಾರೆ. ಮೆಕ್ಕಾದಲ್ಲಿನ ಪವಿತ್ರ ಕಲ್ಲಿನ ಕಟ್ಟಡ ಕಾಬಾ ಮತ್ತು ಕುರಾನ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ವಿದ್ಯಾರ್ಥಿನಿಯರೊಬ್ಬರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. "ವಿಭಜನೆಯ ಸಮಯದಲ್ಲಿ, ನೀವು ಪಾಕಿಸ್ತಾನಕ್ಕೆ ಹೋಗಲಿಲ್ಲ, ನೀವು ಭಾರತದಲ್ಲಿಯೇ ಇದ್ದೀರಿ, ಭಾರತದ ಸ್ವಾತಂತ್ರ್ಯದಲ್ಲಿ ನಿಮ್ಮ ಕೊಡುಗೆ ಇಲ್ಲ’’ ಎಂದು ಶಿಕ್ಷಕಿ ಹೇಳಿದ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶುಕ್ರವಾರ ಸಂಜೆ ದೂರು ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Gadar - 2 ಮೂವಿ ನೋಡಲು ಹೋದವನಿಗೆ ಮಾಲ್‌ನಲ್ಲೇ ಹೃದಯಾಘಾತ; ಯುವಕ ಬಲಿ: ವಿಡಿಯೋ ವೈರಲ್‌

ಇಂತಹ ಹೇಳಿಕೆಗಳು ಶಾಲೆಯಲ್ಲಿ ವೈಷಮ್ಯಕ್ಕೆ ಕಾರಣವಾಗುತ್ತವೆ. ಈ ಹಿನ್ನೆಲೆ ಶಿಕ್ಷಕರನ್ನು ವಜಾಗೊಳಿಸಬೇಕೆಂದು ವಿದ್ಯಾರ್ಥಿಗಳ ಕುಟುಂಬಗಳು ಒತ್ತಾಯಿಸಿವೆ. ಇಂತಹ ಹೇಳಿಕೆಗಳು ಶಾಲೆಯಲ್ಲಿ ವೈಷಮ್ಯಕ್ಕೆ ಕಾರಣವಾಗುತ್ತವೆ ಎಂದು ಶಾಲೆಯಲ್ಲಿ ಇಬ್ಬರು ಮಕ್ಕಳು ಓದುತ್ತಿರುವ ಪೋಷಕಿಯೊಬ್ಬರು ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದರು. 

"ಈ ಶಿಕ್ಷಕನನ್ನು ಶಿಕ್ಷಿಸದೆ ಹೋದರೆ, ಇತರರು ಧೈರ್ಯಶಾಲಿಯಾಗುತ್ತಾರೆ. ಅವರಿಗೆ ಕೇವಲ ಕಲಿಸಲು ಹೇಳಬೇಕು ಮತ್ತು ಅವರಿಗೆ ತಿಳಿದಿಲ್ಲದ ವಿಷಯಗಳ ಬಗ್ಗೆ ಮಾತನಾಡಬೇಡಿ ಎನ್ನಬೇಕು. ವಿದ್ಯಾರ್ಥಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಶಿಕ್ಷಕರಿಂದ ಯಾವುದೇ ಪ್ರಯೋಜನವಿಲ್ಲ. ಶಿಕ್ಷಕಿಯನ್ನು ಶಾಲೆಯಿಂದ ತೆಗೆದುಹಾಕಬೇಕು, ಅವರು ಯಾವುದೇ ಶಾಲೆಯಲ್ಲಿ ಪಾಠ ಮಾಡಬಾರದು ಎಂದು ನಾವು ಒತ್ತಾಯಿಸುತ್ತೇವೆ’’ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಂದ ತೆರಳಿದ ವಿಮಾನದಲ್ಲಿ 2 ವರ್ಷದ ಮಗುವಿಗೆ ಹೃದಯ ಸ್ತಂಭನ, ಉಸಿರಾಟ ಸ್ಥಗಿತ: ಮುಂದಾಗಿದ್ದು ದೊಡ್ಡ ಪವಾಡ!

ಸ್ಥಳೀಯ ಶಾಸಕ ಹಾಗೂ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಅನಿಲ್ ಕುಮಾರ್ ಬಾಜಪೇಯಿ ಸಹ ಈ ಸಂಬಂಧ ಶಿಕ್ಷಕಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.