ಮಂಗಳೂರಲ್ಲಿ ಕಾರ್ಯಕರ್ತರ ಆಕ್ರೋಶ, ಸಿದ್ದರಾಮೋತ್ಸವದಿಂದ ವಿಚಲಿತಗೊಂಡಿತೇ ದಿಲ್ಲಿ ಬಿಜೆಪಿ?

India Gate Column by Prashant Natu

ಬೆಂಗಳೂರು(ಆ.19): ಹಿಂದೆ ಕೆಜೆಪಿಯಿಂದ ಬಿಎಸ್‌ವೈಯನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳುವಂತೆ ಸೂಚಿಸಿದ್ದು ಗುಜರಾತ್‌ ಸಿಎಂ ಆಗಿದ್ದ ಮೋದಿ. ನಂತರ ಪ್ರಹ್ಲಾದ್‌ ಜೋಶಿ ಅವಧಿ ಮುಗಿದಾಗ ಬಿಎಸ್‌ವೈಯನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೂ ಮೋದಿ. ಈಗ 2022ರಲ್ಲಿ ನಿವೃತ್ತಿಯಂಚಿಗೆ ಸರಿದಿದ್ದ ಅವರನ್ನು ಪಾರ್ಲಿಮೆಂಟರಿ ಬೋರ್ಡ್‌ಗೆ ಸೇರಿಸಿ ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದೂ ಮೋದಿಯೇ.

ಬಿಜೆಪಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಿರಿಯ ನಾಯಕರು ತೆರೆಯ ಮರೆಗೆ ಸರಿದ ಉದಾಹರಣೆಗಳೇ ಜಾಸ್ತಿ. ಅಡ್ವಾಣಿ, ಎಂ.ಎಂ.ಜೋಶಿ, ಉಮಾಭಾರತಿ ಅವರಿಂದ ಹಿಡಿದು ತೀರಾ ಇತ್ತೀಚೆಗೆ ಜಾವಡೇಕರ್‌, ರವಿಶಂಕರ ಪ್ರಸಾದ್‌, ಸುಶೀಲ್‌ ಮೋದಿವರೆಗೆ ಅನೇಕ ಹೆಸರು ಹೇಳಬಹುದು. ಬಹುತೇಕ 2021ರಲ್ಲಿ ಕರ್ನಾಟಕದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದಾಗ ಬಿಜೆಪಿ ಹೈಕಮಾಂಡ್‌ ಮತ್ತು ಸ್ಥಳೀಯ ಸಂಘದ ಮನಸ್ಸಿನಲ್ಲಿ ‘ಇನ್ನು ಸಾಕು, 77 ಆಯಿತು’ ಎಂಬ ಅಭಿಪ್ರಾಯವಿತ್ತಂತೆ. ಹೀಗಾಗಿ ಹೊಸ ತಲೆಮಾರಿನ ಬೊಮ್ಮಾಯಿ, ಸಿ.ಟಿ.ರವಿ, ಪ್ರಹ್ಲಾದ್‌ ಜೋಶಿ, ನಳಿನ್‌ ಕಟೀಲ್‌ರನ್ನು ಮುಂದಿಟ್ಟುಕೊಂಡು, ಮೋದಿ ಮುಖ ಮತ್ತು ಹಿಂದುತ್ವದ ಕ್ರೋಢೀಕರಣ ಮಾಡಿದರೆ ಸಾಕು ಎಂಬ ಯೋಚನೆಯಲ್ಲಿ ದಿಲ್ಲಿಯೂ ಇತ್ತು, ಸಂಘವೂ ಇತ್ತು. ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸ್ಥಳೀಯ ಸಂಘ ಮತ್ತು ದಿಲ್ಲಿಯಿಂದ ಪದೇ ಪದೇ ಬಂದು ಹೋಗುತ್ತಿರುವ ನಾಯಕರುಗಳಿಗೆ ಯಡಿಯೂರಪ್ಪ ಮನೆಯಲ್ಲಿ ಕುಳಿತರೆ ನಷ್ಟವೇ ಹೆಚ್ಚು, ಉಳಿದವರಿಗೆ ಗೆಲ್ಲಿಸುವ ಶಕ್ತಿ ಕಡಿಮೆ ಎಂದು ಮನವರಿಕೆ ಆಗತೊಡಗಿತ್ತು. ಹೀಗಾಗಿ ಸ್ವತಃ ಯಡಿಯೂರಪ್ಪನವರಿಗೂ ಆಶ್ಚರ್ಯ ಆಗುವಂತೆ ಬಿಜೆಪಿ ಹೈಕಮಾಂಡ್‌ ಸಂಸದೀಯ ಮಂಡಳಿ ಮತ್ತು ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಸ್ಥಾನ ನೀಡಿದೆ.

ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್‌ ಲೆಕ್ಕಾಚಾರ!

ಬಿಎಸ್‌ವೈಯಿಂದ ಲಾಭ ಏನು?

ಕಳೆದ ಒಂದು ವರ್ಷದ ಹಿಂದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದ ನಂತರ ಯಡಿಯೂರಪ್ಪ ಹೆಚ್ಚು ಮಾತನಾಡುತ್ತಿರಲಿಲ್ಲ. ಈ ಮಧ್ಯೆ ವಿಜಯೇಂದ್ರ ಅವರಿಗೆ ವಿಧಾನ ಪರಿಷತ್‌ ಟಿಕೆಟ್‌ ನೀಡಲು ಬಿಜೆಪಿ ವರಿಷ್ಠರು ಒಪ್ಪಲಿಲ್ಲ. ಸಂಪುಟ ವಿಸ್ತರಣೆ ಮಾಡಿ ಎಂದು ಯಡಿಯೂರಪ್ಪ ಹೇಳುತ್ತಿದ್ದರಾದರೂ ದಿಲ್ಲಿ ನಾಯಕರು ಮುಂದೂಡುತ್ತಲೇ ಇದ್ದರು. ಹೀಗಾಗಿ ಸಹಜವಾಗಿ ಯಡಿಯೂರಪ್ಪ ಯಾರನ್ನೂ ಕೇಳದೆ ಪುತ್ರ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧಿಸುತ್ತಾರೆ ಎಂದು ಘೋಷಣೆ ಮಾಡಿಬಿಟ್ಟರು. ಹಾಗೆ ನೋಡಿದರೆ 2023ಕ್ಕೆ ವಿಜಯೇಂದ್ರಗೆ ಶಿಕಾರಿಪುರದಿಂದ ಟಿಕೆಟ್‌ ಕೊಡುವ ಬಗ್ಗೆ ದಿಲ್ಲಿ ನಾಯಕರದು ತಕರಾರು ಏನೂ ಇರಲಿಲ್ಲ. ಆದರೆ ಘೋಷಣೆ ಬಗ್ಗೆ ನಿರ್ಧಾರ ಆಗಿರಲಿಲ್ಲ. ಆದರೆ ಕಳೆದ ತಿಂಗಳಲ್ಲಿ ನಡೆದ ಎರಡು ಘಟನೆಗಳು ಬಿಜೆಪಿ ಹೈಕಮಾಂಡ್‌ ಯೋಚಿಸುವಂತೆ ಮಾಡಿದವು. 1.ಮಂಗಳೂರಿನಲ್ಲಿ ನಡೆದ ಬಿಜೆಪಿಗನ ಹತ್ಯೆ ನಂತರ ಭುಗಿಲೆದ್ದ ಪಕ್ಷದ ಕಾರ್ಯಕರ್ತರ ಆಕ್ರೋಶ. 2.ಸಿದ್ದರಾಮೋತ್ಸವದ ಯಶಸ್ಸು. ಈ ಎರಡು ಘಟನೆಗಳು ಯಡಿಯೂರಪ್ಪನವರಿಗೆ ಅಲಂಕಾರಿಕ ಮಾತ್ರ ಅನ್ನಿಸದ, ರಾಜ್ಯದ ಬಿಜೆಪಿ ರಾಜಕಾರಣದಲ್ಲಿ ನಿರ್ಣಯ ಪ್ರಕ್ರಿಯೆಯ ಭಾಗ ಎನ್ನಿಸುವ ತೀರ್ಮಾನ ತೆಗೆದುಕೊಳ್ಳುವ ಸ್ಥಾನಮಾನವನ್ನು ನೀಡುವಂತೆ ಮಾಡಿದೆ. ಯಡಿಯೂರಪ್ಪನವರನ್ನು ಪ್ರಮುಖ ಹುದ್ದೆಯಲ್ಲಿ ಇಟ್ಟುಕೊಂಡರೆ ಈಗ ಎಷ್ಟುಲಾಭ ಅನ್ನುವುದಕ್ಕೆ ಭವಿಷ್ಯ ಮಾತ್ರ ಉತ್ತರ ನೀಡಬಲ್ಲದು. ಆದರೆ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ ಎಂಬುದನ್ನು ತೋರಿಸದೆ ಇದ್ದರೆ ನಷ್ಟಜಾಸ್ತಿ ಎಂದು ಬಿಜೆಪಿಗೆ ಬೇಗ ಅರ್ಥ ಆಗಿದೆ.

ಲಿಂಗಾಯತರ ಅನಿವಾರ್ಯತೆ

ವಿಧಾನಸಭೆ ಚುನಾವಣೆಯಲ್ಲಿ 2004ರಲ್ಲಿ ಬಿಜೆಪಿ 79 ಸ್ಥಾನ ಗೆದ್ದು 2010ಕ್ಕೆ 110 ತಲುಪಿದ್ದು ಲಿಂಗಾಯತರ ಕ್ರೋಢೀಕರಣದ ಕಾರಣದಿಂದ. ಆದರೆ 2013ರಲ್ಲಿ 110ರಿಂದ 40ಕ್ಕೆ ಇಳಿದಿದ್ದು ಲಿಂಗಾಯತ ಮತಗಳ ವಿಘಟನೆಯ ಕಾರಣದಿಂದ. ಮರಳಿ 2018ರಲ್ಲಿ 104 ಸೀಟು ಪಡೆದಿದ್ದು ಲಿಂಗಾಯತರ ಒಗ್ಗಟ್ಟು ಮತ್ತು ಮೋದಿ ವರ್ಚಸ್ಸಿನ ಕಾರಣದಿಂದ. ಆದರೆ ಸತ್ಯ ಏನಪ್ಪ ಎಂದರೆ 2013ರಲ್ಲಿ ಬಿಜೆಪಿಗೆ ಲಿಂಗಾಯತರೇ ಆದ ಜಗದೀಶ್‌ ಶೆಟ್ಟರ್‌ ನಾಯಕತ್ವ ಇತ್ತು ಮತ್ತು ಈಗ 2022ರಲ್ಲಿ ಲಿಂಗಾಯತರೇ ಆದ ಬಸವರಾಜ ಬೊಮ್ಮಾಯಿ ನಾಯಕತ್ವ ಇದೆ. ಆದರೂ ಕೂಡ ಲಿಂಗಾಯತರು ಪೂರ್ಣ ಪ್ರಮಾಣದಲ್ಲಿ ತಮ್ಮ ಜೊತೆಗೆ ನಿಲ್ಲುತ್ತಾರೋ ಇಲ್ಲವೋ ಎಂಬ ಚಿಂತೆ ಬಿಜೆಪಿಗಿದೆ. ಅದನ್ನು ಅರಿತ ಡಿ.ಕೆ.ಶಿವಕುಮಾರ್‌ ಒಂದು ಅವಕಾಶ ಸಿಗುತ್ತದೆಯೇನೋ ಎಂದು ರಾಹುಲ್‌ ಗಾಂಧಿಯನ್ನು ಮುರುಘಾ ಮಠಕ್ಕೆ ಕರೆದುಕೊಂಡು ಹೋಗಿ ಲಿಂಗ ದೀಕ್ಷೆ ಕೊಡಿಸಿದರು. ಕಾಂಗ್ರೆಸ್‌ಗೂ ಗೊತ್ತಿದೆ ಕೆಲ ಐತಿಹಾಸಿಕ ಕಾರಣಗಳಿಂದ ಲಿಂಗಾಯತರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯಿಂದ ತಕ್ಷಣ ಗುಳೆ ಬರುವ ಸ್ಥಿತಿಯಲ್ಲಿಲ್ಲ. ಆದರೆ ಯಡಿಯೂರಪ್ಪ ಸಕ್ರಿಯವಾಗಿಲ್ಲ ಅನ್ನುವ ಕಾರಣಕ್ಕೆ 5ರಿಂದ 10 ಪ್ರತಿಶತ ಲಿಂಗಾಯತರು ಕಾಂಗ್ರೆಸ್‌ಗೆ ಸ್ಥಳೀಯವಾಗಿ ಬೆಂಬಲಿಸಿದರೂ ಸಾಕು, ಬಿಜೆಪಿ 20ರಿಂದ 30 ಸ್ಥಾನ ಕಳೆದುಕೊಳ್ಳುತ್ತದೆ. ಇವತ್ತಿನ ಸ್ಥಿತಿಯಲ್ಲಿ ಕಾಂಗ್ರೆಸ್‌ ಏಕಾಂಗಿ ಆಗಿ ಅಧಿಕಾರಕ್ಕೆ ಬರುವುದನ್ನು ತಡೆಯಬೇಕೆಂದರೆ ಲಿಂಗಾಯತರು ಮತ್ತು ಒಕ್ಕಲಿಗರು ಕಾಂಗ್ರೆಸ್‌ ಕಡೆ ವಾಲಬಾರದು. ಹೀಗಾಗಿಯೇ ಬಿಜೆಪಿ ಯಡಿಯೂರಪ್ಪನವರನ್ನು ಪುನರಪಿ ಪ್ರಮುಖ ಸ್ಥಾನದಲ್ಲಿರಿಸಿ ಪ್ರಯೋಗ ಮಾಡುವ ಯೋಜನೆ ರೂಪಿಸಿದೆ.

75+: ಅಲ್ಲಿ ಸಿದ್ದು, ಇಲ್ಲಿ ಬಿಎಸ್‌ವೈ

ಈಗ 75 ವರ್ಷವಾಗಿ ಮುಂದಿನ ವರ್ಷ 76 ವರ್ಷದವರಾಗುವ ಸಿದ್ದರಾಮಯ್ಯನವರ ಜನಪ್ರಿಯತೆಯನ್ನು ಕಾಂಗ್ರೆಸ್‌ ಬಳಸಿಕೊಳ್ಳುತ್ತಿರುವಾಗ ತಾನೂ ಯಡಿಯೂರಪ್ಪನವರ ಜನಪ್ರಿಯತೆಯನ್ನು ಏಕೆ ಬಳಸಿಕೊಳ್ಳಬಾರದು ಎಂದು ಬಿಜೆಪಿ ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ. ಚುನಾವಣೆಯ ಕೊನೆ ದಿನಗಳಲ್ಲಿ ಮೋದಿ ಬಂದು ಧೂಳು ಎಬ್ಬಿಸಿದರೂ ಅತಿ ಹಿಂದುಳಿದ ಜಾತಿಗಳು ಹತ್ತಿರಕ್ಕೆ ಬರಬಹುದೇ ಹೊರತು ಲಿಂಗಾಯತ ಪ್ರಬಲ ಜಾತಿ ಪೂರ್ತಿ ಉಳಿಯಬೇಕೆಂದರೆ ಯಡಿಯೂರಪ್ಪ ಅವರೇ ಬೇಕು. ಯಡಿಯೂರಪ್ಪನವರ ಅನಿವಾರ್ಯತೆ ಬಿಜೆಪಿಗೆ ಸಾಮರ್ಥ್ಯವೂ ಹೌದು ದೌರ್ಬಲ್ಯವೂ ಹೌದು. ಹೀಗಾಗಿ ಎಷ್ಟೇ ಪ್ರಯತ್ನಪಟ್ಟರೂ ಬಿಜೆಪಿಯ ರೈಲು ಯಡಿಯೂರಪ್ಪನವರ ನಿಲ್ದಾಣದಲ್ಲಿ ನಿಲ್ಲದೇ ಮುಂದೆ ಹೋಗುವ ಧೈರ್ಯ ತೋರುತ್ತಿಲ್ಲ.

ಬಿಎಸ್‌ವೈ ನೇಮಕ ಮೋದಿ ನಿರ್ಧಾರ

ಇನ್ನೇನು ವಿಧಾನಸಭೆಯಲ್ಲಿ ಬಿಜೆಪಿ ಕಥೆ ಮುಗಿಯಿತು, ಕಾಂಗ್ರೆಸ್‌ನ ವೇಗ ಅಪರಿಮಿತವಾಗಿದೆ ಎಂದು ರಾಜಕೀಯ ಪಂಡಿತರು ಅಲ್ಲಲ್ಲಿ ಮಾತನಾಡಲು ಆರಂಭಿಸಿದ ಬೆನ್ನಲ್ಲೇ ಬಿಜೆಪಿಯಲ್ಲಿ ಯಡಿಯೂರಪ್ಪಗೆ ನಿವೃತ್ತಿ ನಂತರ ಮತ್ತೆ ಹುದ್ದೆ ನೀಡಿರುವುದು ನಿಶ್ಚಿತವಾಗಿ ಪ್ರಧಾನಿ ಮೋದಿ ತೆಗೆದುಕೊಂಡ ವೈಯಕ್ತಿಕ ನಿರ್ಧಾರ. ಹಿಂದೆ 2013ರಲ್ಲಿ ಸ್ಥಳೀಯ ಸಂಘ ಮತ್ತು ರಾಜನಾಥ್‌ ಸಿಂಗ್‌ ಕೆಜೆಪಿಯಲ್ಲಿದ್ದ ಯಡಿಯೂರಪ್ಪನವರನ್ನು ಮರಳಿ ತೆಗೆದುಕೊಳ್ಳುವುದಕ್ಕೆ ಮೀನಮೇಷ ಎಣಿಸುತ್ತಿದ್ದಾಗ ಆಗಿನ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿ ಅವರನ್ನು ಗಾಂಧಿನಗರಕ್ಕೆ ಕರೆಸಿಕೊಂಡಿದ್ದ ನರೇಂದ್ರ ಮೋದಿ, ‘ಕೇಶುಭಾಯಿ ಪಟೇಲ್‌ ಬೇಕು ಅನ್ನಿಸಿದ್ದರಿಂದ ನಾವು ನಿರ್ಣಯ ತೆಗೆದುಕೊಂಡೆವು. ಕರ್ನಾಟಕದಲ್ಲೂ ಬಿಎಸ್‌ವೈರನ್ನು ಬೇಗ ಸೇರಿಸಿಕೊಳ್ಳಿ, ದಿಲ್ಲಿಯನ್ನು ಕೇಳುತ್ತ ಕಾಯುತ್ತ ಕೂರಬೇಡಿ’ ಎಂದಿದ್ದರು. ನಂತರ 2016ರಲ್ಲಿ ಪ್ರಹ್ಲಾದ್‌ ಜೋಶಿ ಅವಧಿ ಮುಕ್ತಾಯ ಆಗಲು ಬಂದಾಗ ಯಡಿಯೂರಪ್ಪನವರನ್ನು ಮರಳಿ ರಾಜ್ಯ ಅಧ್ಯಕ್ಷ ಮಾಡಲು ಕೆಲ ಪ್ರಮುಖರ ವಿರೋಧವನ್ನೂ ಲೆಕ್ಕಿಸದೆ ಪ್ರಧಾನಿ ಮೋದಿಯೇ ನಿರ್ಧಾರ ತೆಗೆದುಕೊಂಡರು. ಈಗ 2022ರಲ್ಲಿ ಮೋದಿಯೇ ಮುತುವರ್ಜಿ ವಹಿಸಿ ಪಾರ್ಲಿಮೆಂಟರಿ ಬೋರ್ಡ್‌ನಲ್ಲಿ ಸ್ಥಾನ ಕೊಟ್ಟು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ.

13 ವರ್ಷ ಮುಖ್ಯಮಂತ್ರಿ, 7 ವರ್ಷ ಪ್ರಧಾನಿ ಆಗಿದ್ದರೂ ಕುಸಿಯದ ಮೋದಿ ಜನಪ್ರಿಯತೆ

ಯೋಗಿ ಇಲ್ಲ, ಗಡ್ಕರಿಯೂ ಇಲ್ಲ

ಇಲ್ಲಿಯವರೆಗೆ ಸಂಸದೀಯ ಮಂಡಳಿಯಲ್ಲಿ ರಾಷ್ಟ್ರೀಯ ಪ್ರಭಾವ ಇರುವ ನಾಯಕರು ಮತ್ತು ಕೆಲ ಪ್ರಭಾವಿ ಮುಖ್ಯಮಂತ್ರಿಗಳನ್ನು ಮಾತ್ರ ಕೂರಿಸಲಾಗುತ್ತಿತ್ತು. ಜಾತಿಗಳ ಮತ್ತು ಪ್ರಾದೇಶಿಕ ಕೋಟಾ ಮೇಲೆ ಪಾರ್ಲಿಮೆಂಟರಿ ಬೋರ್ಡ್‌ಗೆ ಆಯ್ಕೆ ನಡೆಯುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿ ಬಿಜೆಪಿ ದಿಲ್ಲಿಯಿಂದ ನೋಡಿದಾಗ ರಾಷ್ಟ್ರೀಯ ಬಿಜೆಪಿಯ ವ್ಯವಹಾರಗಳಲ್ಲಿ ಆಸಕ್ತಿ ತೋರದ ಹಾಗೂ ತಮ್ಮ ರಾಜ್ಯ ಬಿಟ್ಟು ಹೊರಗೆ ಹೋಗಲಿಚ್ಛಿಸದ ಲಿಂಗಾಯತ ಸಮುದಾಯದ ಯಡಿಯೂರಪ್ಪ, 2004ರ ನಂತರ ಚುನಾವಣೆ ಗೆಲ್ಲದ ಹರ್ಯಾಣದ ಸುಧಾ ಯಾದವ್‌, ಹಿಂದುಳಿದ ವರ್ಗದ ನೇತಾರನಾಗಿದ್ದರೂ ಪ್ರಭಾವಿ ಅಲ್ಲದ ಕೆ.ಲಕ್ಷ್ಮಣ್‌, 2012ರಲ್ಲಿ ಪಾರ್ಟಿ ಸೇರಿರುವ ಸಿಖ್‌ ಸಮುದಾಯದ ಇಕ್ಬಾಲ್‌ ಸಿಂಗ್‌ ಲಾಲ್‌ ಪುರಾರನ್ನು ಸಂಸದೀಯ ಮಂಡಳಿಗೆ ಆಯ್ಕೆ ಮಾಡಲಾಗಿದೆ. ಅದೇ ಬಿಜೆಪಿಯ ಮತದಾರರು ಮತ್ತು ಸಂಘಟನೆಯಲ್ಲಿ ಛಾಪು ಇರುವ ಯೋಗಿ ಆದಿತ್ಯನಾಥ್‌, ನಿತಿನ್‌ ಗಡ್ಕರಿ ಮತ್ತು ಶಿವರಾಜ್‌ ಸಿಂಗ್‌ ಚೌಹಾಣ್‌ರನ್ನು ಹೊರಗೆ ಇಡಲಾಗಿದೆ. ಸಂಸದೀಯ ಮಂಡಳಿ ಪಟ್ಟಿನೋಡಿದಾಗ ಅನ್ನಿಸುವ ಮಹತ್ವದ ಅಂಶವೆಂದರೆ ರಾಷ್ಟ್ರೀಯ ರಾಜಕಾರಣದ ಯಾವುದೇ ನಿರ್ಣಯ ಇರಲಿ, ಆರ್‌ಎಸ್‌ಎಸ್‌ ಪ್ರತಿನಿಧಿ ಆಗಿರುವ ಬಿ.ಎಲ್‌.ಸಂತೋಷ್‌ರ ಅಭಿಪ್ರಾಯ ಪಡೆದು ಮೋದಿ ಮತ್ತು ಅಮಿತ್‌ ಶಾ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ರಾಜನಾಥ್‌ ಸಿಂಗ್‌ ಅನುಮೋದಿಸುತ್ತಾರೆ. ಕೊನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಕಟಿಸುತ್ತಾರೆ ಅಷ್ಟೆ.

ರಾಜ್ಯ ಸಂಪುಟ ವಿಸ್ತರಣೆ ಮಾಡ್ತಾರಾ?

ಮಂಗಳೂರಿನಲ್ಲಿ ಪ್ರವೀಣ್‌ ನೆಟ್ಟಾರು ಹತ್ಯೆಯಿಂದ ಭುಗಿಲೆದ್ದ ಆಕ್ರೋಶದ ನಂತರ ರಾಜ್ಯ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರ ಜೊತೆ ನೇರ ಸಂವಾದ ಸಾಧಿಸಿ ಡ್ಯಾಮೇಜ್‌ ಕಂಟ್ರೋಲ್‌ ಮಾಡುವ ಪ್ರಯತ್ನ ನಡೆದಿದೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂಘದ ಹಿರಿಯ ಪ್ರಚಾರಕರು ಮತ್ತು ಬಿಜೆಪಿ ರಾಜ್ಯ ನಾಯಕರು ಹೋಗಿ ಮಾತನಾಡಿಸಿ ಆಕ್ರೋಶದ ಕಾರಣ ಅರಿಯುವ ಪ್ರಯತ್ನ ಮಾಡಿದ್ದಾರೆ. ಇನ್ನು ಹೊಸದಾಗಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಆಗಿರುವ ರಾಜೇಶ್‌ ಅವರು ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಶಿವಮೊಗ್ಗಕ್ಕೆ ಹೋಗಿ ನೇರವಾಗಿ ತಳ ಮಟ್ಟದ ಕಾರ್ಯಕರ್ತರ ದೂರು ದುಮ್ಮಾನ ಆಲಿಸಿ ಮುಕ್ತ ಸಂವಾದ ನಡೆಸಿ ಬಂದಿದ್ದಾರೆ. ಕೊನೆಗೆ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಿದ್ದಾರೆ. ಇದನ್ನೆಲ್ಲ ನೋಡಿದರೆ ಇನ್ನು 15 ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡಿದರೂ ಆಶ್ಚರ್ಯವಿಲ್ಲ ಅನ್ನುತ್ತಿವೆ ಬಿಜೆಪಿ ಮೂಲಗಳು.

- ಪ್ರಶಾಂತ್‌ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ದೆಹಲಿಯಿಂದ ಕಂಡ ರಾಜಕರಾಣ