Asianet Suvarna News Asianet Suvarna News

13 ವರ್ಷ ಮುಖ್ಯಮಂತ್ರಿ, 7 ವರ್ಷ ಪ್ರಧಾನಿ ಆಗಿದ್ದರೂ ಕುಸಿಯದ ಮೋದಿ ಜನಪ್ರಿಯತೆ

  • 13 ವರ್ಷ ಮುಖ್ಯಮಂತ್ರಿ, 7 ವರ್ಷ ಪ್ರಧಾನಿ ಆಗಿದ್ದರೂ ಕುಸಿಯದ ಜನಪ್ರಿಯತೆ
  •  ಕಟ್ಟಾಮತದಾರರ ಬೆಂಬಲ, ಸ್ಪಷ್ಟವಿಚಾರ, ಖಡಕ್‌ ನಿರ್ಧಾರಗಳು ಪ್ರಮುಖ ಕಾರಣ
Prime minister Narendra Modi is Indias no 1 leader snr
Author
Bengaluru, First Published Sep 17, 2021, 1:10 PM IST
  • Facebook
  • Twitter
  • Whatsapp

 ಪ್ರಶಾಂತ್‌ ನಾತು

ಭಾರತದ ರಾಜಕಾರಣದಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಸತತವಾಗಿ 20 ವರ್ಷ ಚುನಾವಣೆ ಗೆಲ್ಲುತ್ತಾ ಅಧಿಕಾರದಲ್ಲಿದ್ದವರು ಕಡಿಮೆ ಜನ. ಪಂಡಿತ್‌ ನೆಹರು 1947ರಿಂದ 1964ರವರೆಗೆ 17 ವರ್ಷ ಅಧಿಕಾರದಲ್ಲಿದ್ದರೆ, ಇಂದಿರಾ ಗಾಂಧಿ 1967ರಿಂದ 1984ರವರೆಗೆ (77ರಿಂದ 79 ಬಿಟ್ಟು) 15 ವರ್ಷ ಅಧಿಕಾರದಲ್ಲಿದ್ದರು. ರಾಜ್ಯಗಳಲ್ಲಿ ಜ್ಯೋತಿ ಬಸು ಹೆಚ್ಚು ಕಡಿಮೆ 3 ದಶಕ ರಾಜ್ಯಭಾರ ನಡೆಸಿದರೆ, ತರುಣ್‌ ಗೊಗೋಯ್‌, ಶೀಲಾ ದೀಕ್ಷಿತ್‌ ಸತತ 15 ವರ್ಷ ರಾಜ್ಯಗಳಲ್ಲಿ ಅಧಿಕಾರ ನಡೆಸಿದ್ದಾರೆ. ಆದರೆ, ಮುಖ್ಯಮಂತ್ರಿ ಆದಾಗಿನಿಂದ ಒಂದು ಸಲವೂ ವಿಪಕ್ಷದ ಸಾಲಿನಲ್ಲಿ ಕೂರದೆ 20 ವರ್ಷ ರಾಜ್ಯ ಮತ್ತು ದಿಲ್ಲಿಯಲ್ಲಿ ಅವ್ಯಾಹತ ಅಧಿಕಾರದಲ್ಲಿ ಕೂತಿದ್ದು ನರೇಂದ್ರ ಮೋದಿ ಒಬ್ಬರೇ. ದಿಲ್ಲಿಯಲ್ಲಿ 7 ವರ್ಷ ಅಧಿಕಾರದಲ್ಲಿ ಇದ್ದರೂ ಕೋವಿಡ್‌ನಂತಹ ಮಹಾಮಾರಿ, ಅದರಿಂದಾದ ಆರ್ಥಿಕ ಸಂಕಷ್ಟದ ನಡುವೆ ಸ್ವಲ್ಪ ಮಟ್ಟಿಗೆ ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನಪ್ರಿಯತೆ ಇಳಿಮುಖ ಆಗಿದ್ದರೂ ಕೂಡ ಮೋದಿ ವೈಯಕ್ತಿಕ ವರ್ಚಸ್ಸು ಮತ್ತು ಜನಪ್ರಿಯತೆ ಇಳಿಮುಖ ಆಗಿಲ್ಲ ಎಂಬುದು ವಾಸ್ತವ. ಮೋದಿ ಎದುರು ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕ ವಿಪಕ್ಷಗಳಲ್ಲಿ, ಅದರಲ್ಲೂ ಕಾಂಗ್ರೆಸ್‌ ಬಳಿ ಇಲ್ಲ ಎಂಬುದು ಇದಕ್ಕೆ ಒಂದು ಕಾರಣ ಹೌದಾದರೂ ಮೋದಿ ಅವರ ಸ್ವಯಂ ಸಕ್ರಿಯತೆ ಮತ್ತು ವೈಯಕ್ತಿಕ ವಾಗಿ ಯಾವುದೇ ಕಳಂಕ ಇಲ್ಲ ಎನ್ನುವುದು ಕೂಡ ಇನ್ನೊಂದು ಪ್ರಮುಖ ಕಾರಣ.

ಪ್ರಧಾನಿ ಮೋದಿ ರೀತಿ ನಾವೂ ದುಡಿಯೋಣ : ಸಿಎಂ ಬಸವರಾಜ ಬೊಮ್ಮಾಯಿ

1967ರಿಂದ 84ರವರೆಗೆ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿ ಬಿಟ್ಟರೆ ಫಟಾಫಟ್‌ ನಿರ್ಣಯ ತೆಗೆದುಕೊಳ್ಳುವ ಪ್ರಧಾನಿಯನ್ನು ಭಾರತ ನೋಡಿರಲಿಲ್ಲ. ಸಮ್ಮಿಶ್ರ ಸರ್ಕಾರಗಳ ಅನಿವಾರ್ಯತೆಯೋ ಏನೋ, ಸುದೀರ್ಘ ಕಾಲ ಪ್ರಧಾನಿ ಆದರೂ ಕೂಡ ವಾಜಪೇಯಿ ಮತ್ತು ಡಾ.ಮನಮೋಹನ ಸಿಂಗ್‌ ಮೈ ಚಳಿ ಬಿಟ್ಟು ನಿರ್ಣಯ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಮೋದಿಯದು ಹಾಗಲ್ಲ. ನಿರ್ಣಯ ತೆಗೆದುಕೊಳ್ಳುತ್ತಾರೆ. ಜೊತೆಗೆ, ಪರವೋ ವಿರೋಧವೋ ಅದನ್ನು ಎದುರಿಸುವ ರಾಜಕೀಯ ಸಂಘಟನಾ ಶಕ್ತಿ ಪ್ರದರ್ಶಿಸುತ್ತಾರೆ. ಹೀಗಾಗಿ ಅಧಿಕಾರಕ್ಕೆ ಬಂದು 7 ವರ್ಷದ ನಂತರವೂ ಬಿಜೆಪಿಯ ಕಟ್ಟಾಕಾರ್ಯಕರ್ತರು ಮತ್ತು ಮತದಾರರಲ್ಲಿ ಮೋದಿ ವೈಯಕ್ತಿಕ ಜನಪ್ರಿಯತೆ ಕಡಿಮೆ ಆಗಿಲ್ಲ. ಹೀಗಾಗಿ ಇವತ್ತು ಬಿಜೆಪಿ ಪಾಲಿಕೆ ಚುನಾವಣೆಗಳಲ್ಲೂ ಮೋದಿ ಫೋಟೋ ತೋರಿಸಿ ವೋಟು ಕೇಳುವ ಸ್ಥಿತಿಯಲ್ಲಿದೆ. ಇದು ಒಂದು ರೀತಿ ಮೋದಿ ಸಾಮರ್ಥ್ಯ ಹೌದಾದರೂ ಒಂದು ಪಕ್ಷವಾಗಿ ಬಿಜೆಪಿಯ ದೌರ್ಬಲ್ಯ.

2014ರಲ್ಲಿ ಮೋದಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ ಮೇಲಿನ ಭ್ರಷ್ಟಾಚಾರದ ಆರೋಪಗಳು, ಬೆಲೆ ಏರಿಕೆ, ನಾಯಕತ್ವದ ಅಸಾಮರ್ಥ್ಯ ಕಾರಣ ಹೌದಾದರೂ, 30 ವರ್ಷಗಳ ನಂತರ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೀಟು ಬರಲು ಕಾರಣ ಆಗಿದ್ದು ಹಿಂದುತ್ವ ಮತ್ತು ಮೋದಿ ಬಿತ್ತಿದ ಗುಜರಾತ್‌ ಮಾದರಿಯ ಆರ್ಥಿಕ ಸಮೃದ್ಧಿಯ ಜೊತೆಗೆ ಸೌಕರ್ಯ ಅಭಿವೃದ್ಧಿಯ ಕನಸು. 7 ವರ್ಷಗಳ ನಂತರ ತಿರುಗಿ ನೋಡಿದರೆ ಬಿಜೆಪಿಗೆ ವೋಟು ಹಾಕುವ ಪರಂಪರಾಗತ ಮತದಾರನ ಆಶಯದಂತೆ ಆರ್ಟಿಕಲ… 370ರ ರದ್ಧತಿ, ಕೋರ್ಟ್‌ ಮೂಲಕ ಆದೇಶ ಪಡೆದು ರಾಮಮಂದಿರ ನಿರ್ಮಾಣ, ನಾಗರಿಕ ಕಾನೂನಿನಲ್ಲಿ ತಿದ್ದುಪಡಿ, ಮುಸ್ಲಿಮರಲ್ಲಿ ತ್ರಿವಳಿ ತಲಾಖ್‌ ಪದ್ಧತಿಯ ರದ್ಧತಿಯಂಥ ಪ್ರಮುಖ ಕಠಿಣ ನಿರ್ಣಯಗಳನ್ನು ತೆಗೆದುಕೊಂಡಿದ್ದು ಬಿಜೆಪಿ ಮತದಾರರು ಕಾರ್ಯಕರ್ತರು ಮತ್ತು ಸಂಘ ಪರಿವಾರದವರಲ್ಲಿ ಮೋದಿ ಜನಪ್ರಿಯತೆ ಇಳಿಮುಖ ಆಗದೇ ಇರಲು ಪ್ರಮುಖ ಕಾರಣ. ಈ ಹಿಂದುತ್ವದ ನಿರ್ಣಯಗಳಿಂದ ಮೋದಿ ವಿರೋಧಿ ದನಿ ಉಚ್ಛ್ರಾಯ ತಲುಪಿದ್ದು ಹೌದಾದರೂ, ಪರವಾಗಿರುವವರು ಇನ್ನೂ ಜೋರಾಗಿ, ಆಕ್ರಮಣಕಾರಿಯಾಗಿ ಬಂದು ಹಿಂದೆ ನಿಂತಿರುವುದು ರಾಜಕೀಯವಾಗಿ ಬಿಜೆಪಿಗೆ ದೊಡ್ಡ ಲಾಭ. ಆರ್ಥಿಕವಾಗಿ ಮೋದಿ ತೆಗೆದುಕೊಂಡ ನೋಟು ರದ್ದತಿ, ಜಿಎಸ್‌ಟಿಯಂಥ ನಿರ್ಣಯಗಳ ಬಗ್ಗೆ ಮೋದಿ ಮತದಾರರಲ್ಲಿ ಬೇಸರ ಇದೆ. ಆದರೂ, ಹಿಂದುತ್ವದ ಕಾರಣದಿಂದ ಈ ಕಟ್ಟಾವೋಟ್‌ಬ್ಯಾಂಕ್‌ ಮೋದಿಯಿಂದ ದೂರ ಸರಿಯುತ್ತಿಲ್ಲ.

ಆದರೆ, ಮೋದಿ ಮುಖ ನೋಡಿ ಕೇಂದ್ರದ ಚುನಾವಣೆಗೆ ವೋಟು ಹಾಕುತ್ತೇವೆ. ರಾಜ್ಯ ವಿಧಾನಸಭೆಗಳ ಚುನಾವಣೆಗಳಲ್ಲಿ ವೋಟು ಯಾಕೆ ಕೊಡಬೇಕು? ಎನ್ನುವ ಅಭಿಪ್ರಾಯ ಹೆಚ್ಚಾಗುತ್ತಿರುವುದು ಮೋದಿ ಸಾಹೇಬರ ದೃಷ್ಟಿಯಿಂದ ಆತಂಕದ ವಿಷಯ. ಹೀಗಾಗಿಯೇ ಮಹಾರಾಷ್ಟ್ರ ಮತ್ತು ಹರಿಯಾಣಗಳಲ್ಲಿ ಬಿಜೆಪಿ ಸಂಖ್ಯೆ ಕಡಿಮೆ ಆದರೆ ಜಾರ್ಖಂಡ್‌ನಲ್ಲಿ ಬಿಜೆಪಿ ಸೋತೇ ಬಿಟ್ಟಿತು. ಈಗ ಅದರ ಡ್ಯಾಮೇಜ್‌ ಕಂಟ್ರೋಲ್‌ಗೆ ತೊಡಗಿರುವ ಮೋದಿ ಮತ್ತು ಬಿಜೆಪಿ, ಕರ್ನಾಟಕ ಮತ್ತು ಗುಜರಾತ್‌ ನಲ್ಲಿ ಪ್ರಬಲ ಲಿಂಗಾಯತ ಹಾಗೂ ಪಾಟಿದಾರ ಪಟೇಲ… ಸಮುದಾಯಕ್ಕೆ ಕುರ್ಚಿ ನೀಡಿರುವುದು ಇದೇ ಕಾರಣದಿಂದ.

ಸೆ.26ರ ಮನ್‌ ಕಿ ಬಾತ್‌ಗೆ ನಿಮ್ಮ ಸಲಹೆ, ಸೂಚನೆ ಆಹ್ವಾನಿಸಿದ ಪಿಎಂ ಮೋದಿ!

ಮೋದಿ ಜನಪ್ರಿಯತೆ ಹೆಚ್ಚು ಕಡಿಮೆ ತಟಸ್ಥ ಮತದಾರರಲ್ಲಿ ಕಡಿಮೆ ಆಗದೇ ಇರಲು ಪ್ರಮುಖ ಕಾರಣ ವಿಪಕ್ಷಗಳ ಅಸಮರ್ಥತೆ. ಮಮತಾ ಬ್ಯಾನರ್ಜಿ, ಶರದ್‌ ಪವಾರ, ಜಗನ್‌ಮೋಹನ ರೆಡ್ಡಿ, ಅರವಿಂದ್‌ ಕೇಜರಿವಾಲ… ತಮ್ಮ ತಮ್ಮ ರಾಜ್ಯಗಳಲ್ಲಿ ಜನಪ್ರಿಯರೇ ಹೊರತು ಕೇಂದ್ರದಲ್ಲಿ ಅಲ್ಲ. ಸೋನಿಯಾರಿಗೆ ವಯಸ್ಸಾಗಿದೆ. ಪುತ್ರ ರಾಹುಲ… ಮತ್ತು ಪ್ರಿಯಾಂಕಾ ಇನ್ನು ಕೂಡ ಯುದ್ಧದಲ್ಲಿ ಸರಿಸಮನಾದ ಪೈಪೋಟಿ ನೀಡುವ ಹಂತಕ್ಕೂ ಬರುತ್ತಿಲ್ಲ. ಗಲ್ಲಿಯಿಂದ ದಿಲ್ಲಿಯವರೆಗೆ ಮೋದಿ ಮತ್ತು ಬಿಜೆಪಿಗಿರುವ ದೊಡ್ಡ ಲಾಭ ಎಂದರೆ ಹಿಂದುತ್ವ ದ ಕಾರಣದಿಂದ ಕಟ್ಟಾಮತದಾರ ಪೈಪೋಟಿಯೇ ಇಲ್ಲ ಅನ್ನುವ ಕಾರಣಕ್ಕಾಗಿ ದೂರ ಹೋಗುತ್ತಿಲ್ಲ. ಆರೆಸ್ಸೆಸ್‌ ಹಿನ್ನೆಲೆಯಲ್ಲಿ ಇರುವುದರಿಂದ ತಯಾರಾಗಿರುವ ಸಂಘಟನೆ ಕೂಡ ಬಿಜೆಪಿಗಿರುವ ದೊಡ್ಡ ಸಾಮರ್ಥ್ಯ. ಆದರೆ ಸಂಘಟನೆ ಮಜಬೂತ್‌ ಆಗದೆ ಇರುವುದು ಕಾಂಗ್ರೆಸ್‌ನ ಅತಿ ದೊಡ್ಡ ದೌರ್ಬಲ್ಯ. ಹೀಗಾಗಿ ಹತ್ತಿರ ಹತ್ತಿರ ಬಂದರೂ ಕಾಂಗ್ರೆಸ್‌ಗೆ ಜಯದ ಗುರಿಯೊಡನೆ ಗೆರೆ ತಲುಪಲು ಆಗುತ್ತಿಲ್ಲ.

21ನೇ ಶತಮಾನದಲ್ಲಿ ವಿಶ್ವಾದ್ಯಂತ ನಾಯಕತ್ವದ ವ್ಯಾಖ್ಯೆ ಬದಲಾಗುತ್ತಿದೆ. ಉದಾರವಾದಿ ನಾಯಕರುಗಳಿಗಿಂತ ಕಟುವಾಗಿ ಮಾತನಾಡುವ, ಸ್ಪಷ್ಟವಾಗಿ ತಮ್ಮ ವಿಚಾರಗಳನ್ನು ಪ್ರಸ್ತುತ ಮಾಡುವ ನಾಯಕರುಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ಪ್ರತಿ 5 ವರ್ಷಕ್ಕೊಮ್ಮೆ ಸರ್ಕಾರಗಳ ವಿರುದ್ಧ ಆಡಳಿತ ವಿರೋಧಿ ಅಲೆ ಏಳುವ ಭಾರತದಲ್ಲಿ ಮೋದಿ 13 ವರ್ಷ ಮುಖ್ಯಮಂತ್ರಿ ಆದ ಮೇಲೂ, 7 ವರ್ಷ ಪ್ರಧಾನಿ ಆದ ಮೇಲೂ ಜನಪ್ರಿಯತೆ ಮತ್ತು ವರ್ಚಸ್ಸು ಕಟ್ಟಾಮತ್ತು ತಟಸ್ಥ ಮತದಾರರಲ್ಲಿ ದೊಡ್ಡ ದಾಗಿ ಇಳಿಮುಖ ಆಗದೇ ಇರಲು ಮುಖ್ಯ ಕಾರಣ ಕಠೋರ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ. ಹಾಗಾಗಿಯೇ ಅವರು ಸದ್ಯದ ಮಟ್ಟಿದೆ ದೇಶದ ನಂ.1 ನಾಯಕ.

Follow Us:
Download App:
  • android
  • ios