ಕೇಂದ್ರ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಅಮಿತ್ ಷಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಸಿಟ್ಟೇಕೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಚೆನ್ನೈ: ಕೇಂದ್ರ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಅಮಿತ್ ಷಾ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಸಿಟ್ಟೇಕೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ನಾಯಕ ಅಮಿತ್ ಷಾ ಮುಂದಿನ ದಿನಗಳಲ್ಲಿ ತಮಿಳುನಾಡಿನ ವ್ಯಕ್ತಿಯನ್ನು ಪ್ರಧಾನಿ ಮಾಡಲಾಗುವುದು ಎಂದು ಹೇಳಿದ್ದರು. ಇದಕ್ಕೆ ವ್ಯಂಗ್ಯವಾಗಿ ತಿರುಗೇಟು ನೀಡಿರುವ ಸ್ಟಾಲಿನ್, ಅಮಿತ್ ಷಾ ಅವರ ಸಲಹೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ ಮೋದಿ ಮೇಲೆ ಅಮಿತ್ ಷಾಗೆ ಸಿಟ್ಟು ಏಕೆ ಎಂದು ತಿಳಿಯುತ್ತಿಲ್ಲ ಎಂದು ಕಟಕಿಯಾಡಿದ್ದಾರೆ.

ಅಮಿತ್ ಶಾ ಭಾನುವಾರ ತಮಿಳುನಾಡಿನ ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ತಮಿಳುನಾಡಿನ ಯಾರಾದರೂ ಮುಂದೆ ಪ್ರಧಾನಿಯಾಗುವುದಕ್ಕಾಗಿ ಕಾರ್ಯಕರ್ತರು ಕಠಿಣವಾಗಿ ಶ್ರಮಪಡಬೇಕು ಎಂದು ಹೇಳಿದ್ದಾರೆ ಎಂದು ವರದಿಯಾಗಿತ್ತು. ಆ ಹೇಳಿಕೆಗೆ ತಮಿಳುನಾಡು ಸಿಎಂ ಸ್ಟಾಲಿನ್ ಪ್ರತಿಕ್ರಿಯಿಸಿದ್ದು, "ತಮಿಳಿಗನೊಬ್ಬ ಪ್ರಧಾನಿಯಾಗಬೇಕು ಎಂಬ ಆಲೋಚನೆ ಬಿಜೆಪಿಗೆ ಇದ್ದರೆ, ತೆಲಂಗಾಣ ರಾಜ್ಯಪಾಲರಾಗಿರುವ ತಮಿಳಿಸೈ ಸೌಂದರರಾಜನ್ ಮತ್ತು ಕೇಂದ್ರ ಸಚಿವರಾಗಿರುವ ಎಲ್ ಮುರುಗನ್ ಅವರಿಗೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗುವ ಅವಕಾಶ ಸಿಗಬಹುದು ಎಂದು ನಾನು ಭಾವಿಸುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ಕಾಲೆಳೆದಿದ್ದಾರೆ. 

ಕರ್ನಾಟಕದ ಬಳಿಕ ತಮಿಳ್ನಾಡಲ್ಲಿ ಅಮುಲ್‌ ಕ್ಯಾತೆ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

ಬಿಜೆಪಿಯ ಕೆಲವು ಹಿರಿಯ ನಾಯಕರ ಪ್ರಕಾರ, ಈ ಹಿಂದೆ ಇಬ್ಬರು ಹಿರಿಯ ರಾಜ್ಯ ನಾಯಕರು ಪ್ರಧಾನಿಯಾಗುವುದನ್ನು ಡಿಎಂಕೆ ತಡೆದಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ಮಾತ್ರ ನಡೆದ ರಹಸ್ಯ ಸಭೆಯ ಸಂದರ್ಭದಲ್ಲಿ ಅಮಿತ್ ಷಾ ಅವರು, ತಮಿಳುನಾಡಿನವರಾಗಿದ್ದ ಕೆ ಕಾಮರಾಜ್ (K Kamaraj) ಮತ್ತು ಜಿಕೆ ಮೂಪನಾರ್ (GK Moopanar) ಅವರನ್ನು ಈಗ ತಮಿಳುನಾಡಿನಲ್ಲಿ ಆಡಳಿತದಲ್ಲಿರುವ ಡಿಎಂಕೆ ಪಕ್ಷವೂ ಪ್ರಧಾನಿಯಾಗದಂತೆ ಈ ಹಿಂದೆ ತಡೆದಿತ್ತು ಎಂದು ಆರೋಪಿಸಿದ್ದಾರೆ.

ಅಮಿತ್ ಷಾ (Amit Shah) ಈ ಹೇಳಿಕೆ ಬಹಿರಂಗವಾಗುತ್ತಿದ್ದಂತೆ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂ.ಕೆ. ಸ್ಟಾಲಿನ್(MK Stalin), ಈ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡುವಂತೆ ಆಗ್ರಹಿಸಿದ್ದಾರೆ. ಒಂದು ವೇಳೆ ಸಾರ್ವಜನಿಕವಾಗಿ ಈ ಹೇಳಿಕೆ ನೀಡಿದಲ್ಲಿ ಅಮಿತ್ ಷಾ ಆರೋಪಕ್ಕೆ ವಿವರವಾದ ವಿವರಣೆ ನೀಡಲು ಸಾಧ್ಯ ಎಂದು ಹೇಳಿದ್ದಾರೆ. 

MOTN Survey : ಬಿಜೆಪಿಯಲ್ಲಿ ಮೋದಿ ನಂತರ ಯಾರು? ಮೂಡ್ ಆಫ್ ದ ನೇಷನ್ ಸರ್ವೇಯ ಸ್ಪೆಷಲ್ ಜನಾಭಿಪ್ರಾಯ!

ತಮಿಳುನಾಡಿಗೆ ಕೇಂದ್ರದ ಯೋಜನೆಗಳ ಬಗ್ಗೆ ಅಮಿತ್ ಷಾ ನೀಡಿದ ಹೇಳಿಕೆಯನ್ನು ಡಿಎಂಕೆ ಟೀಕಿಸಿದ್ದು, ಅವರು ಹೇಳಿದಂತೆ ಹಣ ಹಂಚಿಕೆಯು ಸರ್ಕಾರದ ಸಾಂವಿಧಾನಿಕ ಕರ್ತವ್ಯದ ಭಾಗವಾಗಿದೆ ಎಂದು ಹೇಳಿದ್ದಾರೆ. ಡಿಎಂಕೆ ಸಂಸದೀಯ ಪಕ್ಷದ ನಾಯಕ ಟಿಆರ್ ಬಾಲು (TR Baalu) ಅವರು ಸಹ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿದ್ದು, ಅಮಿತ್ ಶಾ ಅವರು ಯಾವುದೇ ವಿಶೇಷ ಯೋಜನೆಗಳನ್ನು ತಮಿಳುನಾಡಿಗೆ ಸೂಚಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.