* ಗುಜರಾತ್‌ಗೆ ಭೇಟಿ ನೀಡಿದ್ದ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ.ಟೆಡ್ರೊಸ್ * ಭಾರತದೊಂದಿಗೆ ನನಗೆ ವಿಶೇಷ ಸಂಬಂಧವಿದೆ * ಉದ್ಘಾಟನಾ ಸಮಾರಂಭದಲ್ಲಿ ಗುಜರಾತಿ ಭಾಷೆಯಲ್ಲಿ ಮಾತು
ಅಹಮದಾಬಾದ್(ಏ.20): ಗುಜರಾತ್‌ಗೆ ಭೇಟಿ ನೀಡಿದ್ದ ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಡಾ.ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಮಂಗಳವಾರ ಭಾರತವನ್ನು ಹೊಗಳಿದ್ದಾರೆ. ಭಾರತದೊಂದಿಗೆ ನನಗೆ ವಿಶೇಷ ಸಂಬಂಧವಿದೆ ಎಂದು ಹೇಳಿದರು. ನಂತರ ಮಾತನಾಡಿದ ಅವರು, ನಾನು ಭಾರತದಿಂದ ಸಾಂಪ್ರದಾಯಿಕ ಔಷಧಗಳ ಬಗ್ಗೆ ಕಲಿತಿದ್ದೇನೆ. ನನ್ನ ಶಿಕ್ಷಕರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇನ್ನು ಜಾಮ್‌ನಗರದಲ್ಲಿ ಡಬ್ಲ್ಯುಎಚ್‌ಒ-ಗ್ಲೋಬಲ್ ಸೆಂಟರ್ ಫಾರ್ ಟ್ರೆಡಿಷನಲ್ ಮೆಡಿಸಿನ್ ಉದ್ಘಾಟನಾ ಸಮಾರಂಭದಲ್ಲಿ ಡಬ್ಲ್ಯುಎಚ್‌ಒ ಮಹಾನಿರ್ದೇಶಕರು ಗುಜರಾತಿ ಭಾಷೆಯಲ್ಲಿ ಸಾರ್ವಜನಿಕರಿಗೆ ಶುಭಾಶಯ ಕೋರಿದ್ದಾರೆ ಎಂಬುವುದು ಉಲ್ಲೇಖನೀಯ.
ಈ ಮಹತ್ವದ ಕ್ರಮವನ್ನು ಬೆಂಬಲಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರಕ್ಕೆ ನಾನು ಕೃತಜ್ಞನಾಗಿದ್ದೇನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ ಘೆಬ್ರೆಯೆಸಸ್ ಹೇಳಿದ್ದಾರೆ. ಇಂದು ನಾವು WHO-Global Centre for Traditional Medicine ಉದ್ಘಾಟನೆ ಮಾಡುತ್ತಿರುವುದು ಪುರಾವೆ ಆಧಾರಿತ ಸಾಂಪ್ರದಾಯಿಕ ಔಷಧವನ್ನು ಬಲಪಡಿಸಲು ವಿಜ್ಞಾನದ ಶಕ್ತಿಯನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಮಧ್ಯಂತರ ಕಚೇರಿಯೊಂದಿಗೆ ಈ ಕೇಂದ್ರವನ್ನು ಸ್ಥಾಪಿಸಲು 250 ಮಿಲಿಯನ್ ಯುಎಸ್‌ಡಿ ಹೂಡಿಕೆ ಮಾಡಿದ ಪ್ರಧಾನಿ ಮೋದಿಯವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದು ಡಬ್ಲ್ಯುಎಚ್‌ಒ ಮಹಾನಿರ್ದೇಶಕರು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರ ಉಪಸ್ಥಿತಿಯಲ್ಲಿ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಾಂಪ್ರದಾಯಿಕ ಔಷಧದ ಜಾಗತಿಕ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಉಪಸ್ಥಿತರಿದ್ದರು.
ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮತ್ತು ಸಾಮರ್ಥ್ಯಕ್ಕೆ ಗೌರವ - ಪ್ರಧಾನಿ ಮೋದಿ
ಉದ್ಘಾಟನೆಯ ವೇಳೆ ಪ್ರಧಾನಿ ಮೋದಿ ಅವರು, ಇಂದು ಪ್ರಪಂಚದಾದ್ಯಂತ ಆರೋಗ್ಯ ಮತ್ತು ಕ್ಷೇಮಕ್ಕಾಗಿ ನಾವೆಲ್ಲರೂ ಬಹಳ ದೊಡ್ಡ ಘಟನೆಯನ್ನು ನೋಡುತ್ತಿದ್ದೇವೆ ಎಂದು ಹೇಳಿದರು. ನಾನು ವಿಶೇಷವಾಗಿ WHO ನ ಡೈರೆಕ್ಟರ್ ಜನರಲ್ ಡಾ. ಟೆಡ್ರೊಸ್ ಅವರಿಗೆ ಕೃತಜ್ಞನಾಗಿದ್ದೇನೆ. ಇದೀಗ ಭಾರತವನ್ನು ಹೊಗಳಿ ಹೇಳಿದ ಮಾತುಗಳಿಗೆ ಪ್ರತಿಯೊಬ್ಬ ಭಾರತೀಯನ ಪರವಾಗಿ ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. WHO ಭಾರತದೊಂದಿಗೆ ಸಾಂಪ್ರದಾಯಿಕ ಔಷಧ ಕೇಂದ್ರದ ರೂಪದಲ್ಲಿ ಹೊಸ ಪಾಲುದಾರಿಕೆಯನ್ನು ಮಾಡಿದೆ ಎಂದು ಅವರು ಹೇಳಿದರು. ಇದು ಸಾಂಪ್ರದಾಯಿಕ ಔಷಧ ಕ್ಷೇತ್ರದಲ್ಲಿ ಭಾರತದ ಕೊಡುಗೆ ಮತ್ತು ಭಾರತದ ಸಾಮರ್ಥ್ಯ ಎರಡಕ್ಕೂ ಮನ್ನಣೆಯಾಗಿದೆ. ಇಡೀ ಮಾನವಕುಲಕ್ಕೆ ಸೇವೆ ಸಲ್ಲಿಸಲು ಭಾರತವು ಈ ಪಾಲುದಾರಿಕೆಯನ್ನು ಒಂದು ದೊಡ್ಡ ಜವಾಬ್ದಾರಿಯಾಗಿ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
