ಮಾಜಿ ಕ್ರಿಕೆಟ್ ನಾಯಕ ಸೌರವ್ ಗಂಗೂಲಿ 2026ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಲಿದ್ದಾರಾ? ಈ ಬಗ್ಗೆ ಅವರು ಹೇಳಿದ್ದೇನು ಇಲ್ಲಿದೆ ನೋಡಿ

Sourav Ganguly Political Entry:ಸೌರವ್ ಗಂಗೂಲಿ ಭಾರತ ಕಂಡ ಶ್ರೇಷ್ಠ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್‌ಗಳಲ್ಲಿ ಒಬ್ಬರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಪಶ್ಚಿಮ ಬಂಗಾಳದಿಂದ ದೇಶಕ್ಕೆ ಸಿಕ್ಕಂತಹ ಶ್ರೇಷ್ಠ ಕ್ರೀಡಾಪಟು ಅವರು, ಕ್ರಿಕೆಟ್‌ನಿಂದ ನಿವೃತ್ತಿಯ ನಂತರವೂ ಅವರನ್ನು ದೇಶದ ಮಹಾನ್ ಗಣ್ಯರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತಿದೆ. ಪಶ್ಚಿಮ ಬಂಗಾಳ ಮಾತ್ರವಲ್ಲದೇ ಇಡೀ ದೇಶದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ.

ಸೌರವ್‌ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಾ

ಅವರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ​​(Cricket Association of Bengal) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಯಶಸ್ವಿ ಕ್ರಿಕೆಟ್ ಆಡಳಿತಗಾರ ಎನಿಸಿರುವ ಅಭಿಮಾನಿಗಳ ಪ್ರೀತಿಯ ದಾದಾ ರಾಜಕೀಯಕ್ಕೆ ಬರುತ್ತಾರೆ ಎಂಬ ಬಗ್ಗೆ ಪದೇ ಪದೇ ವದಂತಿಗಳು ಹಬ್ಬುತ್ತಿರುತ್ತವೆ. ಆದರೆ ಅವರು ಅದನ್ನು ಯಾವಾಗಲೂ ನಿರಾಕರಿಸುತ್ತ ಬಂದಿದ್ದಾರೆ. ಆದರೆ ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ(West Bengal Assembly Elections) ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಾಗಳು ದಟ್ಟವಾಗಿವೆ.

ವದಂತಿಗಳ ಬಗ್ಗೆ ಗಂಗೂಲಿ ಹೇಳಿದ್ದೇನು?

ಹೀಗಿರುವಾಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರನ್ನು ಮಾಧ್ಯಮಗಳು ಪ್ರಶ್ನಿಸಿದ್ದು, ಅವರು ಏನು ಹೇಳಿದ್ದಾರೆ ನೋಡೋಣ ಬನ್ನಿ. ಪಿಟಿಐ ಜೊತೆ ಅವರ ಮಾತುಕತೆ ವೇಳೆ ಗಂಗೂಲಿ ಅವರಿಗೆ 2026ರ ಚುನಾವಣೆಗೂ ಮೊದಲು ರಾಜಕೀಯ ಪ್ರವೇಶ ಮಾಡಲು ಆಸಕ್ತಿ ಇದೆಯಾ? ಪಶ್ಚಿಮ ಬಂಗಾಳದ (West Bengal CM) ಮುಂದಿನ ಸಿಎಂ ಆಗುವ ಅವಕಾಶ ಕೊಟ್ಟರೆ ತಾವು ಅವಕಾಶವನ್ನು ಬಳಸಿಕೊಂಡು ರಾಜಕೀಯಕ್ಕೆ ಬರಲು ಆಸಕ್ತಿ ಹೊಂದಿದ್ದೀರಾ ಎಂದು ಕೇಳಲಾಯ್ತು? ಇದಕ್ಕೆ ಕಟುವಾಗಿ ಉತ್ತರಿಸಿದ ಲೆಜೆಂಡರಿ ಕ್ರಿಕೆಟರ್, ರಾಜಕೀಯಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ಪಕ್ಷಗಳಿಂದ ಯಾವುದೇ ಆಫರ್‌ಗಳನ್ನು ಯಾವತ್ತಿಗೂ ಸ್ವೀಕರಿಸುವುದಿಲ್ಲ, ನನಗೆ ಅದರಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ರಾಜಕೀಯದಲ್ಲಿ ಆಸಕ್ತಿ ಇಲ್ಲ: ಸೌರವ್

ರಾಜಕೀಯಕ್ಕೆ ಸೇರುವ ಅವಕಾಶ ಸಿಕ್ಕರೆ ಯಾವ ಪಕ್ಷವನ್ನು ಆಯ್ಕೆ ಮಾಡುವಿರಿ ಎಂದು ಇದೇ ವೇಳೆ ಸೌರವ್ ಗಂಗೂಲಿ(Sourav Ganguly) ಅವರನ್ನು ಪತ್ರಕರ್ತರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಅವರು ನನಗೆ ರಾಜಕೀಯದಲ್ಲಿ ಸ್ವಲ್ಪವೂ ಆಸಕ್ತಿ ಇಲ್ಲ, ಈ ರಾಜಕೀಯ ಪ್ರಕ್ರಿಯೆಗಳನ್ನು ನೋಡುವುದಕ್ಕೆ ಗಮನಿಸುವುದಕ್ಕೆ ಮಾತ್ರ ನಾನು ಇಷ್ಟಪಡುತ್ತೇನೆ ಎಂದು ಅವರು ಹೇಳಿದ್ದಾರೆ. ಇದು ನೀವು ಹೇಳಿದಷ್ಟು ಸುಲಭ ಅಲ್ಲ, ನನಗೆ ರಾಜಕೀಯ ಪ್ರವೇಶಿಸಿಸುವುದಕ್ಕೆ ಪ್ರತಿವರ್ಷವೂ ಅವಕಾಶ ಸಿಗುತ್ತದೆ. ಆದರೆ ಅದು ನನ್ನ ಪಾಲಿಗೆ ಸೂಕ್ತವಲ್ಲ ಎಂದು ಅನಿಸುತ್ತಿದೆ. ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ನಾನು ಕೇವಲ ರಾಜಕೀಯ ಚಟುವಟಿಕೆಗಳನ್ನು ಗಮನಿಸಲು ಇಷ್ಟಪಡುತ್ತೇನೆ ಏಕೆಂದರೆ ಒಂದು ದೇಶ ಹಾಗೂ ರಾಜ್ಯದ ಬೆಳವಣಿಗೆಯೂ ನೇರವಾಗಿ ಸರ್ಕಾರವನ್ನು ಯಾರು ನಡೆಸುತ್ತಾರೋ ಅವರನ್ನು ಅವಲಂಬಿಸಿದೆ ಎಂದು ಹೇಳಿದ್ದಾರೆ.

ತೆರೆಗೆ ಬರುತ್ತಿದೆ ಗಂಗೂಲಿ ಬಯೋಪಿಕ್

ಸೌರವ್‌ ಗಂಗೂಲಿ(Sourav Ganguly) ಅವರ ಜೀವನಾಧಾರಿತ ಸಿನಿಮಾ ತೆರೆಗೆ ಬರುತ್ತಿದ್ದು, ರಾಜ್‌ಕುಮಾರ್ ರಾವ್(actor Rajkummar Rao) ಅವರು ಸೌರವ್‌ ಗಂಗೂಲಿ ಅವರ ಪಾತ್ರವನ್ನು ನಿಭಾಯಿಸಲಿದ್ದಾರೆ. ಈ ವಿಚಾರವನ್ನು ಸ್ವತಃ ಸೌರವ್ ಗಂಗೂಲಿ ಖಚಿತಪಡಿಸಿದ್ದಾರೆ. 2026ರ ಜನವರಿಯಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಗಂಗೂಲಿ ಹೇಳಿದ್ದಾರೆ. ಶೂಟಿಂಗ್ ಜನವರಿಯಿಂದ ಆರಂಭವಾಗಲಿದೆ. ಪ್ರಿ ಪ್ರೊಡಕ್ಷನ್, ಸ್ಕ್ರಿಪ್ಟ್‌ ಹಾಗೂ ಕತೆ ಬರೆಯುವುದಕ್ಕೆ ಬಹಳ ಸಮಯ ಹಿಡಿಯುತ್ತದೆ. ಶೂಟಿಂಗ್‌ಗೆ ಹೆಚ್ಚಿನ ಸಮಯ ಬೇಕಾಗಲ್ಲ ಎಂದು ಸೌರವ್ ಗಂಗೂಲಿ ಅವರು ತಮ್ಮ ಬಯೋಪಿಕ್ ಬಗ್ಗೆ ಮಾತನಾಡಿದ್ದಾರೆ.