ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ತನ್ನ ವಿರೋಧ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಪ್ರತಿಭಟನೆ ಆಯೋಜಿಸುವುದಾಗಿ ತಿಳಿಸಿದ್ದಾರೆ.
ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಭಾರತ ಸರ್ಕಾರ ಅಧಿಸೂಚನೆ ಹೊರಡಿಸಿರುವ ಪೌರತ್ವ (ತಿದ್ದುಪಡಿ) ಕಾಯ್ದೆ, ಭಾರತಕ್ಕೆ ಡಿಸೆಂಬರ್ 31, 2014ಕ್ಕೆ ಮುನ್ನ ಧಾರ್ಮಿಕ ಹಿಂಸಾಚಾರಗಳಿಗೆ ತುತ್ತಾಗಿ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ವಲಸೆ ಬಂದ ನಿರ್ದಿಷ್ಟ ಅಲ್ಪಸಂಖ್ಯಾತ ಗುಂಪುಗಳಿಗೆ ಭಾರತೀಯ ಪೌರತ್ವ ಒದಗಿಸುತ್ತದೆ. ಈ ಕಾನೂನಿಗೆ ಲೋಕಸಭೆಯಲ್ಲಿ ಡಿಸೆಂಬರ್ 9, 2019ರಂದು ಅನುಮತಿ ದೊರೆತಿದ್ದು, ರಾಜ್ಯಸಭೆಯಲ್ಲಿ ಎರಡು ದಿನಗಳ ಬಳಿಕ ಲಭಿಸಿತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆಗೆ ತನ್ನ ವಿರೋಧ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಪ್ರತಿಭಟನೆ ಆಯೋಜಿಸುವುದಾಗಿ ತಿಳಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಇಷ್ಟು ಗಡಿಬಿಡಿಯಿಂದ, ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗ, ರಂಜಾನ್ ತಿಂಗಳ ಆರಂಭ ಸಮೀಪಿಸಿದಾಗ ಯಾಕೆ ಜಾರಿಗೆ ತರಬೇಕಾಯಿತು ಎಂದೂ ಅವರು ಪ್ರಶ್ನಿಸಿದ್ದಾರೆ. ಮಮತಾ ಬ್ಯಾನರ್ಜಿ ಎಲ್ಲ ಧಾರ್ಮಿಕ ಹಬ್ಬಗಳನ್ನೂ ಗೌರವಿಸಬೇಕೆಂದು ಆಗ್ರಹಿಸಿದ್ದು, ಧರ್ಮ, ಜಾತಿ, ಅಥವಾ ಭಾಷೆಯ ಆಧಾರದಲ್ಲಿ ಯಾವುದೇ ತಾರತಮ್ಯವನ್ನೂ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
"ಭಾರತೀಯ ಪೌರತ್ವವನ್ನು ಯಾಕೆ ಧರ್ಮಾಧಾರಿತವಾಗಿಸಬೇಕು? ಚುನಾವಣೆಗೆ ಇನ್ನು ಎರಡು - ಮೂರು ದಿನಗಳಿವೆ ಎನ್ನುವಾಗ ಸರ್ಕಾರ ಯಾರಿಗಾದರೂ ಪೌರತ್ವ ನೀಡಲು ಸಾಧ್ಯವಿಲ್ಲ. ಸಿಎಎ ಅಥವಾ ಎನ್ಆರ್‌ಸಿ ಮೂಲಕ ಯಾರಾದರೂ ಭಾರತೀಯರ ಪೌರತ್ವ ರದ್ದಾದರೆ, ಆಗ ನಾವು ಮೌನವಾಗಿ ಕುಳಿತಿರಲು ಸಾಧ್ಯವೇ ಇಲ್ಲ. ಅಂತಹ ಸಂದರ್ಭದಲ್ಲಿ ನಾವು ಅತ್ಯಂತ ಬಲವಾಗಿ ಪ್ರತಿಭಟಿಸಲಿದ್ದೇವೆ. ಯಾವುದೇ ಪರಿಸ್ಥಿತಿಯಲ್ಲೂ ನಾವು ಎನ್ಆರ್‌ಸಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾಗರಿಕರನ್ನು ಬಂಧಿಸಲು ಸಿಎಎಯನ್ನು ಬಳಸಿಕೊಳ್ಳುವುದನ್ನೂ ನಾವು ಸಹಿಸುವುದಿಲ್ಲ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಮಮತಾ ಸಿಎಎ ಮತ್ತು ಎನ್ಆರ್‌ಸಿ ಎಂಬ ಎರಡು ಪ್ರತ್ಯೇಕ ವಿಚಾರಗಳನ್ನು ಒಗ್ಗೂಡಿಸಿಕೊಂಡು, ತನ್ನದೇ ಆವೃತ್ತಿಯೊಂದನ್ನು ಹರಿಬಿಡುತ್ತಿದ್ದಾರೆ. ಅವರು ಆಲ್ ಇಂಡಿಯಾ ಮಜ್ಲಿಸ್ ಇ ಇತ್ತಿಹಾದಿಲ್ ಮುಸ್ಲಿಮೀನ್ ಪಕ್ಷದ ಮುಖಂಡ, ಅಸಾದುದ್ದೀನ್ ಓವೈಸಿಯೂ ಮಾತನಾಡದ ರೀತಿಯಲ್ಲಿ ಮಾತನಾಡುತ್ತಾ, ಸಂಭಾವ್ಯ 'ಬಂಧನ ಶಿಬಿರ'ಗಳ ಕುರಿತೂ ಮಾತನಾಡಿದ್ದಾರೆ.
ಸಂಬಂಧ ವೃದ್ಧಿಯ ಹಾದಿ: ಭಾರತದಿಂದ ಮಾರಿಷಸ್‌ನಲ್ಲಿ ಅಭಿವೃದ್ಧಿ!
ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಬಂಧನ ಶಿಬಿರಗಳಂತಹ ಯಾವುದೇ ವಿಚಾರ ಪ್ರಸ್ತಾಪಿತವಾಗಿಲ್ಲ. ಮಮತಾ ಬ್ಯಾನರ್ಜಿಯವರು ಈ ರೀತಿ ಮಾತನಾಡುತ್ತಾ, ತನ್ನನ್ನು ಬೆಂಬಲಿಸುವ ಮತದಾರ ಸಮುದಾಯದಲ್ಲಿ, ಅದರಲ್ಲೂ ಬೆಂಗಾಲಿ ಮುಸ್ಲಿಂ ಸಮುದಾಯದಲ್ಲಿ ಧಾರ್ಮಿಕ ಕಳವಳಗಳನ್ನು ಮೂಡಿಸಲು ಪ್ರಯತ್ನಿಸುತ್ತಿರುವಂತೆ ತೋರುತ್ತಿದೆ.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳು ಇಸ್ಲಾಮಿಕ್ ರಾಷ್ಟ್ರಗಳಾಗಿರುವುದರಿಂದ, ಅಲ್ಲಿ ಮುಸ್ಲಿಮರಿಗೆ ಧಾರ್ಮಿಕ ಹಿಂಸೆಗಳಾಗುತ್ತಿವೆ ಎನ್ನಲು ಸಾಧ್ಯವಿಲ್ಲ ಎಂದು ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ವಾದಿಸುತ್ತಿದೆ. ಈ ದೇಶಗಳಲ್ಲಿ ಧಾರ್ಮಿಕ ಹಿಂಸೆ ಎದುರಿಸಿ, ವಲಸೆ ಬರುತ್ತಿರುವ ಜನರಿಗೆ ಸುರಕ್ಷಿತವಾದ ನೆಲೆ ಒದಗಿಸುವುದು ಈ ಕಾಯ್ದೆಯ ಉದ್ದೇಶವಾಗಿದೆ.
ಆದರೂ ಈ ಕುರಿತ ವಿಚಾರಣೆಗಳು ಮುಂದುವರಿದಿದ್ದು, ಟಿವಿ ನಿರೂಪಕರಾದ ಸುಮನ್ ದೇ ಅವರು ತನ್ನ 'ಏಕ್ ಘೊಂಟಾ ಶೊಂಗೇ ಸುಮನ್' ಕಾರ್ಯಕ್ರಮದಲ್ಲಿ, '2019ರಲ್ಲೇ ಮಂಡಿಸಿ, ಅಂಗೀಕಾರ ಪಡೆದುಕೊಂಡ ಮಸೂದೆಯನ್ನು ಜಾರಿಗೆ ತರಲು ನಾಕೂವರೆ ವರ್ಷಗಳ ಅವಧಿ ಯಾಕೆ ತೆಗೆದುಕೊಂಡಿತು? ಇದನ್ನು ಜಾರಿಗೆ ತರಲು ಇಷ್ಟು ವರ್ಷಗಳು ಯಾಕೆ ಬೇಕಾದವು?' ಎಂದು ಪ್ರಶ್ನಿಸಿದ್ದಾರೆ.
ಮತುವಾ ಸಮುದಾಯದ ಅಂಶ
ಮತುವಾ ಸಮುದಾಯದ ಜನರು ಸ್ವಾತಂತ್ರ್ಯ ಪಡೆದ ಬಳಿಕ, ಭಾರತ ಮತ್ತು ಪಾಕಿಸ್ತಾನದ ಪ್ರತ್ಯೇಕತೆಯಾಗಿ, ಪೂರ್ವ ಬಂಗಾಳದಿಂದ ವಲಸೆ ಹೋಗಿದ್ದರು.
ಪೂರ್ವ ಮತ್ತು ಪಶ್ಚಿಮ ಬಂಗಾಳ: ಸ್ವಾತಂತ್ರ್ಯಾನಂತರ ಬಂಗಾಳದ ಪಶ್ಚಿಮ ಭಾಗ ಭಾರತದ ಆಡಳಿತಕ್ಕೆ ಒಳಪಟ್ಟು, ಪಶ್ಚಿಮ ಬಂಗಾಖ ಎಂದು ನಾಮಕರಣಗೊಂಡಿತು. ಇನ್ನು ಪೂರ್ವ ಭಾಗ ಪಾಕಿಸ್ತಾನಕ್ಕೆ ಸೇರ್ಪಡೆಗೊಂಡು, ಪೂರ್ವ ಬಂಗಾಳ ಎಂದು ಕತೆಯಲ್ಪಟ್ಟು (ಬಳಿಕ 1956ರಲ್ಲಿ ಇದನ್ನು ಪೂರ್ವ ಪಾಕಿಸ್ತಾನ ಎಂದು ಮರುನಾಮಕರಣ ಮಾಡಲಾಯಿತು), 1971ರಲ್ಲಿ ಬಾಂಗ್ಲಾದೇಶ ಎಂಬ ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಿತು.
ಇವರಲ್ಲಿ ಬಹುಪಾಲು ನಿರಾಶ್ರಿತರು ಬೆಂಗಾಲಿ ಹಿಂದುಗಳಾಗಿದ್ದರು. 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಬಹುತೇಕ 1 ಕೋಟಿ ಪೂರ್ವ ಪಾಕಿಸ್ತಾನಿಯರು ಭಾರತದಲ್ಲಿ, ಅದರಲ್ಲೂ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಾದ ತ್ರಿಪುರ ಮತ್ತು ಅಸ್ಸಾಂಗಳಲ್ಲಿ ಆಶ್ರಯ ಪಡೆದುಕೊಂಡರು. ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದುಕೊಂಡ ಬಳಿಕವೂ, 15 ಲಕ್ಷ ನಿರಾಶ್ರಿತರು ಭಾರತದಲ್ಲೇ ಉಳಿದುಕೊಂಡರು.
ಪಶ್ಚಿಮ ಬಂಗಾಳದಲ್ಲಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಜವಾಬ್ದಾರಿಯಲ್ಲಿರುವ 23 ಜಿಲ್ಲೆಗಳ ಪೈಕಿ, 10 ಜಿಲ್ಲೆಗಳು ಬಾಂಗ್ಲಾದೇಶದೊಡನೆ ಗಡಿ ಹಂಚಿಕೊಳ್ಳುತ್ತಿವೆ. ಈ ಗಡಿ ಪ್ರದೇಶಗಳಲ್ಲಿ ಎನ್‌ಕ್ಲೇವ್‌ಗಳು ಎಂದು ಕರೆಯಲ್ಪಡುವ ವಿಭಿನ್ನ ಭೂಹಿಡುವಳಿಗಳನ್ನು ಹೊಂದಿದೆ.
ಐಐಎಸ್‌ಸಿ ಸ್ಥಾಪನೆ ಮತ್ತು ಮಹಿಳಾ ಸಬಲೀಕರಣದ ಹಿಂದಿನ ಶಕ್ತಿ ಮಹಾರಾಣಿ ಕೆಂಪನಂಜಮ್ಮಣ್ಣಿ: ಲೇಖಕ ಗಿರೀಶ್ ಲಿಂಗಣ್ಣ ಬರಹ
ವಿವಿಧ ಐತಿಹ್ಯಗಳ ಪ್ರಕಾರ, ಶತಮಾನಗಳ ಹಿಂದೆ, ಕೋಚ್ ಬಿಹಾರ್‌ನ ಮಹಾರಾಜ ಮತ್ತು ರಂಗಪುರದ ಮಹಾರಾಜ ತಮ್ಮ ಚದುರಂಗದ ಆಟದಲ್ಲಿ ಈ ಎನ್‌ಕ್ಲೇವ್‌ಗಳನ್ನು ಪಣವಾಗಿ ಇಡುತ್ತಿದ್ದರು.
ಎನ್‌ಕ್ಲೇವ್‌ಗಳು: ಒಂದು ರಾಷ್ಟ್ರದ ಸಣ್ಣ ಪ್ರದೇಶಗಳನ್ನು ಇನ್ನೊಂದು ರಾಷ್ಟ್ರದ ಪ್ರದೇಶಗಳು ಸುತ್ತುವರಿದಿರುವುದನ್ನು ಊಹಿಸಿ. ಇದು ಭಾರತ ಮತ್ತು ಬಾಂಗ್ಲಾದೇಶದ ಎನ್‌ಕ್ಲೇವ್‌ಗಳ ಚಿತ್ರಣವೂ ಹೌದು. ಇವುಗಳನ್ನು ಚಿತ್‌ಮಹಲ್‌ಗಳು ಎಂದೂ ಕರೆಯಲಾಗುತ್ತದೆ.
ಭಾರತ - ಬಾಂಗ್ಲಾದೇಶದ ಎನ್‌ಕ್ಲೇವ್‌ಗಳನ್ನು ಈ ರೀತಿ ಯೋಚಿಸಬಹುದು:
ಚೆಸ್ ಬೋರ್ಡ್: ಭಾರತ ಮತ್ತು ಬಾಂಗ್ಲಾದೇಶಗಳನ್ನು ಒಂದು ಬೃಹತ್ ಚೆಸ್ ಬೋರ್ಡಿನ ಎರಡು ಬದಿಗಳೆಂದು ಕಲ್ಪಿಸಿಕೊಳ್ಳಿ. ಇವೆರಡನ್ನೂ ವಿಭಜಿಸುವ ರೇಖೆ ಗಡಿ ರೇಖೆ.
ಆಟದ ಕಾಯಿಗಳು: ಈ ಎನ್‌ಕ್ಲೇವ್‌ಗಳು ಚೆಸ್ ಬೋರ್ಡಿನಲ್ಲಿ ಎದುರಾಳಿಯ ಬದಿಯಲ್ಲಿರುವ ಕಾಯಿಗಳೆಂದು ಪರಿಗಣಿಸಬಹುದು. ಇಲ್ಲಿ ಬಾಂಗ್ಲಾದೇಶದ ಭಾಗಗಳು ಭಾರತದೊಳಗೆಯೂ, ಭಾರತದ ಭಾಗಗಳು ಬಾಂಗ್ಲಾದೇಶದ ಒಳಗೂ ಇರಬಹುದು.
ಹೆಚ್ಚಿನ ಮೌಲ್ಯದ ಆಟ: ದಂತಕತೆಗಳ ಪ್ರಕಾರ, ಶತಮಾನಗಳ ಹಿಂದೆ, ಈ ಪ್ರದೇಶದ ರಾಜರು ತಮ್ಮ ಚದುರಂಗದ ಆಟದಲ್ಲಿ ಈ ಭೂಮಿಯನ್ನು ಪಣವಾಗಿಟ್ಟು ಆಡುತ್ತಿದ್ದರು (ಪಾಶ ಎಂದು ಕರೆಯಲಾಗುವ ಆಟದ ಭಾಗವನ್ನು ಹೊಂದಿತ್ತು). ಇದರಿಂದಾಗಿ, ಯಾರಾದರೂ ಆಟವನ್ನು ಗೆದ್ದಾಗ, ಎದುರಾಳಿಗಳಿಂದ ಭೂಮಿಯನ್ನು ಗೆಲ್ಲುತ್ತಿದ್ದರು.
ಮತುವಾ ಸಮುದಾಯದ ಜನರು ಈಗಿನ ಬಾಂಗ್ಲಾದೇಶದಿಂದ ದೇಶ ವಿಭಜನೆ ಮತ್ತು ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಂದರ್ಭದಲ್ಲಿ ಸುರಕ್ಷತೆಗಾಗಿ ಬಂಗಾಳಕ್ಕೆ ವಲಸೆ ಬಂದ ಬಡ ಹಿಂದೂ ಸಮುದಾಯದವರು.
ಬಹುತೇಕ 30 ಲಕ್ಷ ಮತುವಾ ಸಮುದಾಯದವರು ಪಶ್ಚಿಮ ಬಂಗಾಳಕ್ಕೆ ವಲಸೆ ಬಂದಿದ್ದು, ಅವರು ಬಾಂಗ್ಲಾದೇಶದ ಗಡಿಯ ಬಳಿ ಇರುವ ನಾದಿಯಾ, ಉತ್ತರ 24 ಪರಗಣ, ದಕ್ಷಿಣ 24 ಪರಗಣ ಜಿಲ್ಲೆಗಳ 30ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.
ಬಂಗಾಳದಲ್ಲಿರುವ ಎರಡು ಪ್ರಮುಖ ವಲಸಿಗ ಸಮುದಾಯದವರಾದ ನಾಮಶೂದ್ರರು (ಮತುವಾ) ಮತ್ತು ರಾಜಬನ್ಶಿಗಳು ಲೋಕಸಭೆ ಮತ್ತು ವಿಧಾನಸಭಾ ಚುನಾವಣಾ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
2011ರ ಜನಗಣತಿಯ ಪ್ರಕಾರ, ಪಶ್ಚಿಮ ಬಂಗಾಳದ 23.51% ಮತದಾರರು ಎಸ್‌ಸಿ ಸಮುದಾಯಕ್ಕೆ ಸೇರಿದ್ದಾರೆ. ಒಂದು ಅಂದಾಜಿನ ಪ್ರಕಾರ, ಈ ಸಂಖ್ಯೆ ದಶಕದ ಬಳಿಕ 25% ದಾಟಿರಬಹುದು ಎನ್ನಲಾಗಿದೆ. ಈ ಮತದಾರರ ಪೈಕಿ, 35.8% ಮತುವಾಗಳು ಮತ್ತು 32% ರಾಜಬನ್ಶಿಗಳಾಗಿದ್ದಾರೆ.
ಮತುವಾಗಳು ಮೂಲತಃ ಉತ್ತರ 24 ಪರಗಣ ಜಿಲ್ಲೆ ಮತ್ತು ನಾದಿಯಾ ಜಿಲ್ಲೆಗಳಲ್ಲಿ ನೆಲೆಸಿದ್ದು, ಪೂರ್ವ ಬುರ್ದ್ವಾನ್, ಕೂಚ್ ಬಿಹಾರ್, ಜಲಪೈಗುರಿ ಜಿಲ್ಲೆಗಳು ಮತ್ತು ಇತರ ಪ್ರದೇಶಗಳಲ್ಲಿಯೂ ನೆಲೆಸಿದ್ದಾರೆ.
ಆದ್ದರಿಂದ, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪ್ರಭಾವ ಸಾಧಿಸಲು ಮತುವಾಗಳ ಬೆಂಬಲ ಅತ್ಯವಶ್ಯಕವಾಗಿದೆ.
ಅದೇ ರೀತಿ, ರಾಜಬನ್ಶಿಗಳು ಜಲಪೈಗುರಿ ಮತ್ತು ಕೂಚ್ ಬಿಹಾರ್ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದು, ಉತ್ತರ ಬಂಗಾಳದ 8ರಲ್ಲಿ 7 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ಇವರು ಆ ಪ್ರದೇಶದ ಮತದಾರರಲ್ಲಿ 30% ಪಾಲು ಹೊಂದಿದ್ದಾರೆ.
ಭಾರತದ ಪೌರತ್ವ ಪಡೆಯುವುದು ಅವರಿಗೆ ಬಹುಕಾಲದ ಬಯಕೆಯಾಗಿತ್ತು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತುವಾ ಮತ್ತು ರಾಜಬನ್ಶಿಗಳ ಪಾಲಿಗೆ ಹೆಚ್ಚಿನ ಮಹತ್ವ ಹೊಂದಿದೆ. ಮತುವಾಗಳು ಈ ನಿರ್ಧಾರವನ್ನು ನಗಾರಿಗಳನ್ನು ಬಾರಿಸಿ ಸ್ವಾಗತಿಸಿದ್ದು, ಭಾರತದ ಪೌರತ್ವ ಲಭಿಸುವುದನ್ನು ಸಂಭ್ರಮಿಸಿದ್ದಾರೆ.
ಮತುವಾಗಳು ಈ ಮೊದಲು ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷವನ್ನು ಬಲವಾಗಿ ಬೆಂಬಲಿಸುತ್ತಾ ಬಂದಿದ್ದರು. ಆದರೆ 2019ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಬೆಂಬಲಿಸಿದರು. ಆದರೆ, ಟಿಎಂಸಿ ಬೆಂಬಲಿಗರೊಬ್ಬರು, ಟಿಎಂಸಿ ಅವಧಿಯಲ್ಲಿ ತಮಗೆ ಮತದಾರರ ಗುರುತು ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್ ಲಭಿಸಿತ್ತಾದರೂ, ಕೆಲವು ತಿಂಗಳುಗಳ ಹಿಂದೆ ಬಿಜೆಪಿ ಅದನ್ನು ರದ್ದುಪಡಿಸಿತ್ತು ಎಂದಿದ್ದಾರೆ.
"ಒಂದು ವೇಳೆ ಸಿಎಎ ಜಾರಿಯ ಬಳಿಕವೇ ಅವರನ್ನು ಪ್ರಜೆಗಳು ಎಂದು ಬಿಜೆಪಿ ಪರಿಗಣಿಸುತ್ತದಾದರೆ, ಅವರು ಈ ಮೊದಲು ಭಾರತದ ಪ್ರಜೆಗಳಾಗಿರಲಿಲ್ಲವೇ? ಮತ್ತೆ ಯಾಕೆ ಅವರ ಆಧಾರ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಯಿತು? ಅಂದರೆ ಹಿಂದಿನ ಕಾನೂನುಗಳನ್ನು ಬದಲಾಯಿಸಲು ಸರ್ಕಾರ ಯೋಚಿಸುತ್ತಿದೆಯೇ? ಪ್ರಧಾನಿ ಮೋದಿಯವರು ಈ ಜನರ ಮತದಿಂದಲೇ ಆಯ್ಕೆಯಾಗಿದ್ದಾರೆ. ಹಾಗಿರುವಾಗ, ಅವರನ್ನು ಹೇಗೆ ನಾಗರಿಕರಲ್ಲ ಎನ್ನಲಾಗುತ್ತದೆ?" ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ತಾನು ಮರಳಿ ಅಧಿಕಾರಕ್ಕೆ ಬಂದರೆ ಬಿಜೆಪಿ ಸಿಎಎ ಅನ್ನು ಜಾರಿಗೆ ತರುವುದಾಗಿ ಭರವಸೆ ನೀಡಿತ್ತು. ಈ ಕಾರಣದಿಂದ ಎರಡೂ ಸಮುದಾಯಗಳು ಬಿಜೆಪಿಯನ್ನು ಬೆಂಬಲಿಸಿ, ಬಂಗಾಳದ 42 ಲೋಕಸಭಾ ಸ್ಥಾನಗಳ ಪೈಕಿ, 18 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಟಿಎಂಸಿ ಪಕ್ಷ ಕಷ್ಟಪಟ್ಟು 22 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ 1 ಸ್ಥಾನ ಪಡೆದುಕೊಂಡಿತು. ಬಂಗಾಳವನ್ನು ಜ್ಯೋತಿ ಬಸು ಅವರ ಆಡಳಿತದಡಿ ನಿರಂತರವಾಗಿ 34 ವರ್ಷಗಳ ಕಾಲ ಆಳಿದ ಸಿಪಿಐ(ಎಂ) ಒಂದು ಸ್ಥಾನವನ್ನೂ ಪಡೆದುಕೊಳ್ಳಲು ವಿಫಲವಾಯಿತು.
ಆದರೆ, ಮೂಲತಃ ಸಿಎಎ ವಿರೋಧಿ ಪ್ರತಿಭಟನಾಕಾರರು ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿ, ಐದು ರೈಲುಗಳಿಗೆ ಬೆಂಕಿ ಹಚ್ಚಿ, ಆಸ್ತಿಪಾಸ್ತಿಗಳನ್ನು ನಾಶಪಡಿಸಿದರು. ಅದರೊಡನೆ, ಬಹುತೇಕ ಎರಡು ವರ್ಷಗಳ ಕಾಲ ಜಾರಿಯಲ್ಲಿದ್ದ ಕೋವಿಡ್ ಲಾಕ್‌ಡೌನ್ ಸಿಎಎ ಅಧಿಸೂಚನೆಯ ಪ್ರಕಟಣೆಯನ್ನು ಮುಂದೂಡಿತು.
ಸಿಎಎ ಜಾರಿಯ ವಿಳಂಬದ ಕಾರಣದಿಂದ, ಬಂಗಾಳದ ಎರಡೂ ಸಮುದಾಯಗಳಲ್ಲಿ ಅಸಮಾಧಾನ ಮೂಡಿತು. 2021ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ತಾನು ಅಧಿಕಾರಕ್ಕೆ ಬಂದರೆ ತಾನು ಸಿಎಎ ಅಧಿಸೂಚನೆ ಹೊರಡಿಸುವುದಾಗಿ ಬಿಜೆಪಿ ಮರಳಿ ಘೋಷಿಸಿತ್ತು. ಆದರೆ, ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಊಹಿಸಿದ ರೀತಿಯಲ್ಲೇ, ಬಿಜೆಪಿಗೆ ಅವಕಾಶ ಲಭಿಸಲಿಲ್ಲ.
ಆದ್ದರಿಂದ, ಮತುವಾ ಮತಗಳು ಚದುರಿ ಹೋಗಿ, ಮತುವಾ ಪ್ರಾಬಲ್ಯದ 26 ಕ್ಷೇತ್ರಗಳ ಪೈಕಿ 14ರಲ್ಲಿ ಆಡಳಿತಾರೂಢ ಟಿಎಂಸಿಗೆ ಬೆಂಬಲ ನೀಡಿದವು. ಆ ಮೂಲಕ, ಮತುವಾ ಮತ್ತು ರಾಜಬನ್ಶಿ ಸಮುದಾಯಗಳ ಮತಗಳು ವಿವಿಧ ಪಕ್ಷಗಳ ನಡುವೆ ಹಂಚಿ ಹೋದವು.
ಪ್ರಸ್ತುತ, 2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಸಿಎಎ ಅಧಿಸೂಚನೆ ಹೊರಡಿಸಿರುವುದರಿಂದ, ಬಿಜೆಪಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸಿದ್ದು, ಪಕ್ಷಕ್ಕೆ ಮತುವಾ ಮತ್ತು ರಾಜಬನ್ಶಿಗಳ ಬೆಂಬಲ ಲಭಿಸುವ ಸಾಧ್ಯತೆಗಳು ದಟ್ಟವಾಗಿವೆ. ಇದರ ಪರಿಣಾಮವಾಗಿ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಕನಿಷ್ಠ 15 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳಿವೆ.
