Asianet Suvarna News Asianet Suvarna News

ಸಂಬಂಧ ವೃದ್ಧಿಯ ಹಾದಿ: ಭಾರತದಿಂದ ಮಾರಿಷಸ್‌ನಲ್ಲಿ ಅಭಿವೃದ್ಧಿ!

ಮಾರಿಷಸ್ ಎಂಬುದು ಮಾರಿಷಸ್ ಎನ್ನುವ ಒಂದು ಮುಖ್ಯ ದ್ವೀಪ, ಮತ್ತು ಹಲವು ಸಣ್ಣಪುಟ್ಟ ದ್ವೀಪಗಳು ಮತ್ತು ದ್ವೀಪ ಸಮೂಹಗಳಾಗಿದೆ. ಈ ದ್ವೀಪಗಳಲ್ಲಿ ರಾಡ್ರಿಗಸ್, ಅಗಲೇಗ ಮತ್ತಿತರ ದ್ವೀಪಗಳು ಪ್ರಮುಖವಾಗಿವೆ. 

Space Expert Girish Linganna Special Article over Development in Mauritius from India gvd
Author
First Published Mar 10, 2024, 7:01 PM IST

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಮಾರಿಷಸ್‌ನಲ್ಲಿ ಭಾರತೀಯ ಪರಂಪರೆ: ಮಾರಿಷಸ್ ಎಂಬುದು ಮಾರಿಷಸ್ ಎನ್ನುವ ಒಂದು ಮುಖ್ಯ ದ್ವೀಪ, ಮತ್ತು ಹಲವು ಸಣ್ಣಪುಟ್ಟ ದ್ವೀಪಗಳು ಮತ್ತು ದ್ವೀಪ ಸಮೂಹಗಳಾಗಿದೆ. ಈ ದ್ವೀಪಗಳಲ್ಲಿ ರಾಡ್ರಿಗಸ್, ಅಗಲೇಗ ಮತ್ತಿತರ ದ್ವೀಪಗಳು ಪ್ರಮುಖವಾಗಿವೆ. ಅತ್ಯಂತ ಮುಖ್ಯ ದ್ವೀಪವಾದ ಮಾರಿಷಸ್, ತನ್ನ ಹವಳ ದಿಬ್ಬಗಳು ಮತ್ತು ವ್ಯಾಪಕ ಜಲಚರಗಳಿಗೆ ಹೆಸರುವಾಸಿಯಾಗಿದೆ. ಇನ್ನು ಅಲ್ಲಿನ ಸೈಂಟ್ ಬ್ರಾಂಡನ್ (ಕಾರ್ಗಡೋಸ್ ಕರಾಜೊಸ್ ಶೋಲ್ ಎಂದೂ ಹೆಸರು ಹೊಂದಿದೆ) ಎನ್ನುವುದು ಮಾರಿಷಸ್‌ನಿಂದ 430 ಕಿಲೋಮೀಟರ್ ಈಶಾನ್ಯದಲ್ಲಿ ಇರುವ 50ಕ್ಕೂ ಹೆಚ್ಚು ಸಣ್ಣ ದ್ವೀಪಗಳ ಸಮೂಹವಾಗಿದೆ. 

ಡಿಯಾಗೋ ಗ್ರೇಸಿಯಾ ದ್ವೀಪವೂ ಸೇರಿದಂತೆ, ಚಾಗೋಸ್ ದ್ವೀಪಸಮೂಹ ಒಂದು ವಿವಾದಿತ ಪ್ರದೇಶವಾಗಿದ್ದು, ಇದನ್ನು ಮಾರಿಷಸ್ ತನ್ನದು ಎನ್ನುತ್ತಿದೆಯಾದರೂ, ಯುಕೆಯ ನಿಯಂತ್ರಣದಲ್ಲಿದೆ. ಮಡಗಾಸ್ಕರ್‌ನ ಉತ್ತರಕ್ಕಿರುವ ಟ್ರೊಮೆಲಿನ್ ದ್ವೀಪ ಫ್ರಾನ್ಸ್ ಆಡಳಿತಕ್ಕೆ ಒಳಪಟ್ಟಿದ್ದು, ಮಾರಿಷಸ್ ಅದರ ಮೇಲೆ ತನ್ನ ಹಕ್ಕನ್ನು ಮಂಡಿಸುತ್ತಿದೆ. ಈ ಬೆಳವಣಿಗೆಗಳು ಅಲ್ಲಿನ ಪ್ರಾದೇಶಿಕ ಸಾರ್ವಭೌಮತ್ವದ ವಿವಾದಗಳಿಗೆ ಬೆಳಕು ಚೆಲ್ಲಿವೆ. ಪೋರ್ಟ್ ಲೂಯಿಸ್ ಮಾರಿಷಸ್ ರಾಜಧಾನಿಯಾಗಿದ್ದು, ಎಪ್ರಿಲ್ 2023ರ ಅನುಸಾರ ಅದು 1,50,000 ನಿವಾಸಿಗಳನ್ನು ಹೊಂದಿತ್ತು. 

ಐಐಎಸ್‌ಸಿ ಸ್ಥಾಪನೆ ಮತ್ತು ಮಹಿಳಾ ಸಬಲೀಕರಣದ ಹಿಂದಿನ ಶಕ್ತಿ ಮಹಾರಾಣಿ ಕೆಂಪನಂಜಮ್ಮಣ್ಣಿ: ಲೇಖಕ ಗಿರೀಶ್ ಲಿಂಗಣ್ಣ ಬರಹ

ಪೋರ್ಟ್ ಲೂಯಿಸ್ ಭಾರತದಿಂದ 5,094 ಕಿಲೋಮೀಟರ್ ದೂರದಲ್ಲಿದ್ದು, ಆಫ್ರಿಕಾದ ಆಗ್ನೇಯ ಕರಾವಳಿಯಿಂದ 2,000 ಕಿಲೋಮೀಟರ್ ದೂರದಲ್ಲಿದೆ. ಮಾರಿಷಸ್ ಜನಸಂಖ್ಯೆಯಲ್ಲಿ ಬಹುದೊಡ್ಡ ಪಾಲು ಭಾರತೀಯ ಮೂಲದವರಾಗಿದ್ದು, ಅಲ್ಲಿನ ಜನಸಂಖ್ಯೆಯ ಮೂರನೇ ಎರಡರಷ್ಟು ಪಾಲು ಹೊಂದಿದ್ದಾರೆ. ಈ ಜನರು 19ನೇ ಶತಮಾನದಲ್ಲಿ ಮಾರಿಷಸ್‌ಗೆ ವಲಸೆ ಹೋದ ಕಾರ್ಮಿಕರ ಮುಂದಿನ ತಲೆಮಾರಿನವರಾಗಿದ್ದಾರೆ. ಮಾರಿಷಸ್‌ನಲ್ಲಿರುವ ಭಾರತೀಯ ಸಮುದಾಯ ಭಾರತದಂತೆಯೇ ವೈವಿಧ್ಯಮಯವಾಗಿದ್ದು, ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಜನರನ್ನು ಹೊಂದಿದೆ.

ಮಾರಿಷಸ್ ಸಂಸ್ಕೃತಿಯಲ್ಲಿ ಭಾರತದ ಪ್ರಭಾವ ಹಾಸುಹೊಕ್ಕಾಗಿದ್ದು, ದ್ವೀಪದಾದ್ಯಂತ ಭಾರತೀಯ ಹಬ್ಬಗಳಾದ ದೀಪಾವಳಿ, ಹೋಳಿ, ಮತ್ತು ಮಹಾ ಶಿವರಾತ್ರಿಗಳನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಭಾರತೀಯ ಆಹಾರ, ಸಂಗೀತ, ನೃತ್ಯ, ಮತ್ತು ವಸ್ತ್ರಗಳು ಮಾರಿಷಸ್‌ನ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಭೌಗೋಳಿಕವಾಗಿ ಗಮನಿಸುವುದಾದರೆ, ಮಾರಿಷಸ್ ಹಿಂದೂ ಮಹಾಸಾಗರದಲ್ಲಿ ಕಾರ್ಯತಂತ್ರದ ಮಹತ್ವ ಹೊಂದಿರುವ ಪ್ರದೇಶದಲ್ಲಿದೆ. ಆದ್ದರಿಂದಲೇ ಮಾರಿಷಸ್ ಭಾರತಕ್ಕೆ ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ಆಸಕ್ತಿಯ ತಾಣವಾಗಿದೆ. ಮಾರಿಷಸ್ ಸಮುದ್ರ ಮಾರ್ಗಗಳಿಗೆ ಮುಖ್ಯ ಬಿಂದುವಾಗಿದ್ದು, ಇಂಡಿಯನ್ ಓಷನ್ ರಿಮ್ ಅಸೋಸಿಯೇಷನ್ ಕಾರ್ಯಗಳು ಸೇರಿದಂತೆ, ಭಾರತದ ಸಾಗರ ಭದ್ರತಾ ಕಾರ್ಯತಂತ್ರದ ಭಾಗವಾಗಿದೆ.

ಭಾರತ - ಮಾರಿಷಸ್ ಸಂಬಂಧ ವೃದ್ಧಿ: ಮಹತ್ವದ ಸಾಗರ ಯೋಜನೆಗಳು: 1997ರಲ್ಲಿ ಸ್ಥಾಪನೆಯಾದ ಇಂಡಿಯನ್ ಓಷನ್ ರಿಮ್ ಅಸೋಸಿಯೇಷನ್ (ಐಒಆರ್‌ಎ) ಒಂದು ಅಂತರಾಷ್ಟ್ರೀಯ ಸಂಘಟನೆಯಾಗಿದ್ದು, ಹಿಂದೂ ಮಹಾಸಾಗರದೊಡನೆ ಗಡಿ ಹಂಚಿಕೊಳ್ಳುವ ಕರಾವಳಿ ರಾಷ್ಟ್ರಗಳನ್ನು ಒಳಗೊಂಡಿದೆ. ಈ ಸಂಘಟನೆ ಪ್ರಾದೇಶಿಕ ಸಹಕಾರವನ್ನು ಹೆಚ್ಚಿಸುವ, ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಫೆಬ್ರವರಿ 29, 2024ರಂದು ಆನ್‌ಲೈನ್ ಮೂಲಕ ಅಗಲೇಗ ದ್ವೀಪದಲ್ಲಿ ಒಂದು ಏರ್ ಸ್ಟ್ರಿಪ್ ಮತ್ತು ಜೆಟ್ಟಿಯ ಉದ್ಘಾಟನೆ ನಡೆಸುವ ಮೂಲಕ, ಭಾರತ ಮತ್ತು ಮಾರಿಷಸ್‌ಗಳ ಸಂಬಂಧ ಇನ್ನಷ್ಟು ವೃದ್ಧಿಸಿತು.

ಜೆಟ್ಟಿ ಎಂದರೆ ನೀರಿನೊಳಗೆ ವಿಸ್ತಿರಣೆ ಹೊಂದಿ ಸಾಗುವಂತಹ ಒಂದು ನಿರ್ಮಾಣವಾಗಿದ್ದು, ಸಾಮಾನ್ಯವಾಗಿ ಹಡಗುಗಳನ್ನು ನಿಲ್ಲಿಸಲು, ಕರಾವಳಿ ತೀರಗಳನ್ನು ರಕ್ಷಿಸಲು, ಸರಕು ಮತ್ತು ಪ್ರಯಾಣಿಕರನ್ನು ಹತ್ತಿಸಿ ಇಳಿಸಲು ಬಳಕೆಯಾಗುತ್ತದೆ. ಜೆಟ್ಟಿಯನ್ನು ಸಾಮಾನ್ಯವಾಗಿ ಮರ, ಕಾಂಕ್ರೀಟ್, ಅಥವಾ ಲೋಹವನ್ನು ಬಳಸಿ ನಿರ್ಮಿಸಲಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವಿಂದ್ ಜಗನ್ನಾಥ್ ಅವರು ಇಂತಹ ಸಂಪರ್ಕ ಯೋಜನೆಗಳನ್ನು ಉದ್ಘಾಟಿಸಿರುವುದು ಒಂದು ಮಹತ್ವದ ಕ್ಷಣವಾಗಿದ್ದು, ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಯ ಸಂಕೇತವಾಗಿದೆ.

ಈಗಲೂ ಕೆಂಪು ಸಮುದ್ರದಲ್ಲಿನ ಸನ್ನಿವೇಶ ಪರಿಹಾರ ಕಾಣದೆ ಮುಂದುವರಿದಿದ್ದು, ಪಶ್ಚಿಮ ಹಿಂದೂ ಮಹಾಸಾಗರದಲ್ಲಿ (ಡಬ್ಲ್ಯುಐಒ) ಸರಕು ಸಾಗಾಣಿಕೆ ನಡೆಸುವ ವ್ಯಾಪಾರಿ ಹಡಗುಗಳ ಮೇಲೆ ದಾಳಿಗಳು, ಸಾಗರದಾಳದ ಕೇಬಲ್‌ಗಳನ್ನು ಹಾಳುಗೆಡವುವುದು, ಕಡಲ್ಗಳ್ಳತನದ ಪ್ರಕರಣಗಳು ಮುಂದುವರೆದಿವೆ. ಇದೇ ಸಮಯದಲ್ಲಿ, ಚೀನಾದ ಮಿಲಿಟರಿ ಮತ್ತು ಮಿಲಿಟರೇತರ ಉದ್ದೇಶಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದೇ ಕಷ್ಟಕರವಾಗಿದ್ದು, ಹಿಂದೂ ಮಹಾಸಾಗರದಲ್ಲಿ ಸಂಶೋಧನಾ ನೌಕೆಗಳು ಎನ್ನಲಾಗುವ ಚೀನಾದ ಹಡಗುಗಳ ಉಪಸ್ಥಿತಿ ಹೆಚ್ಚಾಗುತ್ತಿದೆ. ಇದು ಅವುಗಳ ಮೂಲ ಉದ್ದೇಶಕ್ಕೆ ಸಂಬಂಧಿಸಿದಂತೆ ಬಹಳಷ್ಟು ಗೊಂದಲಗಳನ್ನು ಉಂಟುಮಾಡುತ್ತಿದೆ. ಹಿಂದೂ ಮಹಾಸಾಗರ ಪ್ರಾಂತ್ಯದ ಇತರ ದ್ವೀಪ ರಾಷ್ಟ್ರಗಳಲ್ಲೂ ಚೀನಾದ ಉಪಸ್ಥಿತಿ ದಿನೇ ದಿನೇ ಹೆಚ್ಚುತ್ತಿದೆ.

ಈ ಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಭಾರತ ನಿರಂತರವಾಗಿ ನೆರವು ನೀಡುತ್ತಿದ್ದು, ಇದು ಭಾರತ ತನ್ನ ನೆರೆಹೊರೆಯ ರಾಷ್ಟ್ರಗಳಿಗೆ ಆದ್ಯತೆ ನೀಡುವುದನ್ನು ಮತ್ತು ಅವುಗಳ ಭದ್ರತೆ ಹಾಗೂ ಅಭಿವೃದ್ಧಿಗೆ ನೆರವಾಗುವಲ್ಲಿ ಭಾರತದ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಭಾರತದ 'ನೆಯ್ಬರ್‌ಹುಡ್ ಫಸ್ಟ್' ಮತ್ತು 'ಸೆಕ್ಯುರಿಟಿ ಆ್ಯಂಡ್ ಗ್ರೋತ್ ಫಾರ್ ಆಲ್ ಇನ್ ದ ರೀಜನ್' (SAGAR) ಸಾಗರ್ ಸಿದ್ಧಾಂತ ಇದನ್ನು ಪುಷ್ಟೀಕರಿಸುತ್ತದೆ.

ಟ್ರಾಮೆಲಿನ್ ಮತ್ತು ಅಗಲೇಗಾ ದ್ವೀಪಗಳು ಹಿಂದೂ ಮಹಾಸಾಗರದ ಪಶ್ಚಿಮ ಭಾಗದಲ್ಲಿದ್ದು, ಯಾವುದೇ ಮುಖ್ಯಭೂಮಿಗೆ ಸಂಪರ್ಕಿತವಾಗಿಲ್ಲ. ಅಗಲೇಗಾ ದ್ವೀಪ ಮೊಜಾಂಬಿಕ್ ಕಾಲುವೆಗೆ ಬಹಳಷ್ಟು ಸಮೀಪದಲ್ಲಿದ್ದು, ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವದ್ದಾಗಿದೆ. ಅಗಲೇಗಾ ದ್ವೀಪ ಪೋರ್ಟ್ ಲೂಯಿಸ್‌ನಿಂದ ಉತ್ತರಕ್ಕೆ ಅಂದಾಜು 1,060 ಕಿಲೋಮೀಟರ್ ದೂರದಲ್ಲಿದ್ದು, ಮೊಜಾಂಬಿಕ್ ಕಾಲುವೆಯಿಂದ 1,880 ಕಿಲೋಮೀಟರ್ ಈಶಾನ್ಯದಲ್ಲೂ, ಭಾರತದ ದಕ್ಷಿಣದ ನೌಕಾನೆಲೆಗಳಲ್ಲಿ ಒಂದಾದ ಕೊಚ್ಚಿಯಿಂದ 3,134 ಕಿಲೋಮೀಟರ್ ನೈಋತ್ಯದಲ್ಲಿದೆ.

ಮೊಜಾಂಬಿಕ್ ಕಾಲುವೆ ಒಂದು ಪ್ರಮುಖ ವಾಣಿಜ್ಯ ಮಾರ್ಗವಾಗಿದ್ದು, ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಸೂಯೆಜ್ ಕಾಲುವೆಯ ಅಸ್ಥಿರತೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಮೊಜಾಂಬಿಕ್ ಕಾಲುವೆ ಬಿಲಿಯನ್‌ಗಟ್ಟಲೆ ಡಾಲರ್ ಮೌಲ್ಯದ ಸರಕುಗಳ ಸಾಗಾಣಿಕೆಗೆ ಮುಖ್ಯವಾಗಿದೆ. ಅದರೊಡನೆ, ಕರಾವಳಿ ದೇಶಗಳಾದ ಮೊಜಾಂಬಿಕ್, ಟಾಂಜಾನಿಯಾ, ಮತ್ತು ಮಡಗಾಸ್ಕರ್‌ಗಳಲ್ಲಿ ಮಾತ್ರವೇ ಸಿಗುವ ವಿವಿಧ ಲೋಹ, ಅಲೋಹ ಮತ್ತು ಅಪರೂಪದ ಭೂ ಖನಿಜಗಳಿಗೆ ಈ ಕಾಲುವೆ ಮೂಲವಾಗಿದೆ. ಇವುಗಳಲ್ಲಿ ನೈಸರ್ಗಿಕ ಅನಿಲ, ಕಬ್ಬಿಣದ ಅದಿರು, ಗ್ರಾಫೈಟ್, ಚಿನ್ನ, ರೂಬಿ, ಕೊಲಂಬೋ ಟ್ಯಾಂಟಲೈಟ್ ಪ್ರಮುಖವಾಗಿವೆ. ಪ್ರಸ್ತುತ, ಭಾರತ, ಚೀನಾ, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ಜಪಾನ್ ಮತ್ತು ಇತರ ಅಭಿವೃದ್ಧಿ ಹೊಂದಿದ ಮತ್ತು ಬೆಳೆಯುತ್ತಿರುವ ದೇಶಗಳು ಇಲ್ಲಿನ ಉತ್ಪಾದನೆ ಮತ್ತು ಪೂರೈಕೆ ಸರಪಳಿಯ ವಿವಿಧ ಹಂತಗಳ ಮೇಲೆ ಹೂಡಿಕೆ ಮಾಡಿವೆ.

ಜಾಗತಿಕ ರಾಜಕಾರಣದ ಚಿತ್ರಣದಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬಂದಿದ್ದು, ಇದರಿಂದಾಗಿ ಶಕ್ತಿ ಮೂಲಗಳು ಮತ್ತು ಕಚ್ಚಾವಸ್ತುಗಳ ಪೂರೈಕೆಯನ್ನು ವೈವಿಧ್ಯಮಯಗೊಳಿಸುವ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ವಿವಿಧ ದೇಶಗಳ ಮಧ್ಯೆ ಆರ್ಥಿಕ ಸ್ಥಿರತೆಗಾಗಿ ಸ್ಪರ್ಧೆ ಏರ್ಪಡಲಿದೆ. ಇದೆಲ್ಲದರ ಮಧ್ಯೆ, ಈ ಪ್ರದೇಶದ ಮೂಲಕ ಒಂದು ನಂಬಿಕಾರ್ಹ, ಭದ್ರತೆ ಹೊಂದಿರುವ ಆಮದು ಮತ್ತು ರಫ್ತು ಮಾರ್ಗದ ಅನಿವಾರ್ಯತೆ ಇದ್ದೇ ಇದೆ. ಚದುರಿ ಹೋಗಿರುವ ಭೌಗೋಳಿಕ ಚಿತ್ರಣವನ್ನು ಹೊಂದಿರುವ ಮಾರಿಷಸ್, ಬಹುತೇಕ 2.3 ಮಿಲಿಯನ್ ಚದರ ಕಿಲೋಮೀಟರ್‌ಗಳ ವಿಶೇಷ ಆರ್ಥಿಕ ವಲಯವನ್ನು (ಎಕ್ಸ್‌ಕ್ಲೂಸಿವ್ ಎಕನಾಮಿಕ್ ಜೋನ್ - EEZ) ಹೊಂದಿದೆ. 

ಇದು ಮಾರಿಷಸ್‌ಗೆ ಸಂಭಾವ್ಯ ಸಾಂಪ್ರದಾಯಿಕ ಮತ್ತು ನೂತನ ಅಪಾಯಗಳಿಂದ ವ್ಯಾಪಾರ ಮಾರ್ಗವನ್ನು ರಕ್ಷಿಸಲು ಅವಶ್ಯಕವಾದ ನಿರಂತರ ಕಣ್ಗಾವಲಿನ ನೆರವು ಒದಗಿಸುತ್ತದೆ. ಇನ್ನು ವಿಸ್ತರಿಸಲಾಗಿರುವ ಮೂರು ಕಿಲೋಮೀಟರ್‌ಗಳ ಏರ್ ಸ್ಟ್ರಿಪ್ (ರನ್‌ವೇ) ಪಿ8ಐ ಪೋಸ್‌ಡನ್ ನಂತಹ ದೊಡ್ಡ ವಿಮಾನಗಳ ಕಾರ್ಯಾಚರಣೆಗೆ ಪೂರಕವಾಗಿದೆ. ಈ ಏರ್ ಸ್ಟ್ರಿಪ್ ಶಾಂತಿಯ ಸಮಯದಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ ಹೆಚ್ಚಿನ ಕಾರ್ಯಾಚರಣಾ ಸಾಮರ್ಥ್ಯ ಒದಗಿಸಲಿದ್ದು, ಭಾರತದ ಸುತ್ತಮುತ್ತಲಿನ ಪ್ರದೇಶಗಳನ್ನು ಸೂಕ್ಷ್ಮವಾಗಿ ಗಮನಿಸಲು ಪೂರಕವಾಗಿದೆ.

ಪೂರ್ಣವಾಗಿ ಅಭಿವೃದ್ಧಿ ಹೊಂದಿರುವ ಜೆಟ್ಟಿಯ ನಿರ್ಮಾಣದಿಂದಾಗಿ, ಹಿಂದೂ ಮಹಾಸಾಗರದಲ್ಲಿ ಶೋಧ ಮತ್ತು ರಕ್ಷಣೆಗೆ ನೆರವಾಗುವ, ಮಾನವೀಯ ಸಹಾಯ ಒದಗಿಸುವ ದೊಡ್ಡ ಹಡಗುಗಳೂ ತಂಗಲು ಅನುಕೂಲವಾಗುತ್ತದೆ. ಅದರೊಡನೆ, ಇದು ಜೀವನಮಟ್ಟವನ್ನು ಸುಧಾರಿಸಲಿದೆ. ಮುಖ್ಯ ಭೂಮಿಯಿಂದ ದೂರವಾಗಿ, ಅವಶ್ಯಕ ವಸ್ತುಗಳ ಪೂರೈಕೆಯಲ್ಲಿ ವಿಳಂಬ ಎದುರಿಸುತ್ತಿರುವ ದ್ವೀಪವಾಸಿಗಳಿಗೆ ಇದು ಬಹಳಷ್ಟು ನೆರವು ನೀಡಲಿದೆ. ಈ ಗುರಿಯ ಸಾಧನೆಯ ಜೊತೆಗೆ, ಸಾಮುದಾಯಿಕ ಅಭಿವೃದ್ಧಿ ಯೋಜನೆಗಳು ಶೈಕ್ಷಣಿಕ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿರುವ ದ್ವೀಪಕ್ಕೆ ಅನುಕೂಲ ಕಲ್ಪಿಸಲಿದೆ.

ತುಮಕೂರಲ್ಲಿ ವಿ.ಸೋಮಣ್ಣ ಸ್ಪರ್ಧೆಗೆ ವಿರೋಧ ಇಲ್ವೇನ್ರಿ?: ಸಚಿವ ರಾಮಲಿಂಗಾರೆಡ್ಡಿ

ಈ ಬೆಳವಣಿಗೆ, ಮಾರಿಷಸ್ ರಕ್ಷಣಾ ಪಡೆಗಳ ಸಾಮರ್ಥ್ಯಗಳನ್ನು ಹೆಚ್ಚಿಸಿ, ನವದೆಹಲಿ ಮತ್ತು ಪೋರ್ಟ್ ಲೂಯಿಸ್ ನಡುವಿನ ರಕ್ಷಣಾ ಸಹಯೋಗವನ್ನು ವಿಸ್ತರಿಸಲಿದೆ. ಅದರೊಡನೆ, ಅಭಿವೃದ್ಧಿ ಮತ್ತು ಬೆಳವಣಿಗೆಯ ಹಾದಿಯಲ್ಲಿ ದ್ವೀಪ ರಾಷ್ಟ್ರಗಳನ್ನು ತನ್ನೊಡನೆ ಮುಂದಕ್ಕೆ ಕರೆದೊಯ್ಯುವ ಭಾರತದ ಸಾಮರ್ಥ್ಯವನ್ನೂ ಅನಾವರಣಗೊಳಿಸಲಿದೆ. ಭಾರತ ಈಗ ಸಾಗರ ಸಂಬಂಧಿ ವಿಚಾರಗಳಲ್ಲಿ ಹೆಚ್ಚು ಹೆಚ್ಚು ಒಳಗೊಳ್ಳುತ್ತಿರುವುದರಿಂದ, ಪಶ್ಚಿಮ ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಕಣ್ಗಾವಲು ವ್ಯವಸ್ಥೆಗಳ ಅಭಿವೃದ್ಧಿಯೂ ಭಾರತದ ಗುರಿಗಳಿಗೆ ಪೂರಕವಾಗಿದೆ. ಇದು ಸಾಗರ ಭದ್ರತೆಗೆ ಸಂಬಂಧಿಸಿದಂತೆ ಭಾರತದ ಬದ್ಧತೆಯನ್ನೂ ಪ್ರತಿನಿಧಿಸುತ್ತದೆ.

Follow Us:
Download App:
  • android
  • ios