ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ದಿನಾಂಕ ಹತ್ತಿರ| ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಭೇರಿಯಾದರೂ ಅಧಿಕಾರ ಇಲ್ಲ| ಸಮೀಕ್ಷೆಯಲ್ಲಿ ಬಹಿರಂಗ
ನವದೆಹಲಿ(ಮಾ.09): ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ದಿನಾಂಕ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಟೈಮ್ಸ್ ನೌ, ಸಿ- ವೋಟರ್ ಚುನಾವಣಾ ಪೂರ್ವ ಸಮೀಕ್ಷೆಯೊಂದನ್ನು ನಡೆಸಿವೆ. ಸಮೀಕ್ಷೆ ಅನ್ವಯ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಶತಾಯಗತಾಯ ಯತ್ನಿಸುತ್ತಿರುವ ಬಿಜೆಪಿಯು ಒಟ್ಟು 294 ವಿಧಾನಸಭೆ ಕ್ಷೇತ್ರಗಳ ಪೈಕಿ ಭರ್ಜರಿ 107 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ.
ಇನ್ನು ಯಾವುದೇ ಕಾರಣಕ್ಕೂ ಕೇಸರಿಯ ಅಲೆ ಬಂಗಾಳಕ್ಕೆ ಸುಳಿಯಲು ಬಿಡಲ್ಲ ಎಂಬ ಪಣತೊಟ್ಟಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 154 ಸ್ಥಾನಗಳನ್ನು ಗೆದ್ದು, ಅಧಿಕಾರದಲ್ಲಿ ಮುಂದುವರಿಯಲಿದೆ. ತನ್ಮೂಲಕ ಟಿಎಂಸಿ ಸರಳ ಬಹುಮತ ಗಳಿಸಲಿದೆ. 2016ರಲ್ಲಿ ಕೇವಲ 3 ವಿಧಾನಸಭೆ ಕ್ಷೇತ್ರಗಳಲ್ಲಿ ಮಾತ್ರವೇ ಜಯಿಸಲು ಶಕ್ತವಾಗಿದ್ದ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಚುನಾವಣಾ ಚಾಣಾಕ್ಷ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ ನಡ್ಡಾ ಅವರ ಕಾರ್ಯತಂತ್ರದ ಫಲವಾಗಿ 107 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ತನ್ಮೂಲಕ ತನ್ನ ಮತ ಪ್ರಮಾಣವನ್ನು ಶೇ.37.5ರಷ್ಟುವಿಸ್ತರಿಸಿಕೊಳ್ಳಲಿದೆ. ಇನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಯು 33 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಲಿವೆ.
ತಮಿಳುನಾಡಿನಲ್ಲಿ ಡಿಎಂಕೆ- ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದ ಗದ್ದುಗೆಗೇರಲಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ಡಿಎಫ್ 140 ವಿಧಾನಸಭೆ ಕ್ಷೇತ್ರಗಳ ಪೈಕಿ 78-86 ಕ್ಷೇತ್ರಗಳಲ್ಲಿ ಭರ್ಜರಿ ಜಯ ಸಾಧಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕೇವಲ 52-60 ಕ್ಷೇತ್ರಗಳನ್ನು ಗೆಲ್ಲಲಷ್ಟೇ ಶಕ್ತವಾಗಲಿದೆ. ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಈ ಸಲ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. 126 ಕ್ಷೇತ್ರಗಳನ್ನು ಹೊಂದಿದ ಅಸ್ಸಾಂನಲ್ಲಿ ಎನ್‌ಡಿಎ ಕೂಟವು 67 ಕ್ಷೇತ್ರಗಳಲ್ಲಿ ಜಯ ಸಾಧಿಸಿ ಸರಳ ಬಹುಮತ ಗಳಿಸಲಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ 57 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ತಿಳಿಸಿದೆ.
ಪುದುಚೇರಿ ಒಟ್ಟು ಕ್ಷೇತ್ರಗಳು 30 ಬಹುಮತಕ್ಕೆ 16
ಎನ್‌ಡಿಎ 18
ಯುಪಿಎ 12
ಇತರೆ 1
ಕೇರಳ ಒಟ್ಟು ಕ್ಷೇತ್ರಗಳು 140 ಬಹುಮತಕ್ಕೆ 71
ಎಲ್ಡಿಎಫ್ 76-82
ಯುಡಿಎಫ್ 52-60
ಬಿಜೆಪಿ 0-2
ತಮಿಳುನಾಡು ಒಟ್ಟು ಕ್ಷೇತ್ರಗಳು 234 ಬಹುಮತಕ್ಕೆ 118
ಡಿಎಂಕೆ, ಕಾಂಗ್ರೆಸ್ 158
ಎಐಎಡಿಎಂಕೆ, ಬಿಜೆಪಿ 65
ಪಶ್ಚಿಮ ಬಂಗಾಳ ಬಹುಮತಕ್ಕೆ 148
ಬಿಜೆಪಿ 107
ಟಿಎಂಸಿ 154
ಕಾಂಗ್ರೆಸ್ ಪ್ಲಸ್ 33
Last Updated Mar 9, 2021, 7:44 AM IST