ಲೈಂಗಿಕ ಕಿರುಕುಳದ ಆರೋಪ ಬೆನ್ನಲ್ಲೇ ಪೊಲೀಸರನ್ನು ರಾಜಭವನ ಒಳಗೆ ಬಿಡದಂತೆ ಬಂಗಾಳ ರಾಜ್ಯಪಾಲ ಸೂಚನೆ
ತಮ್ಮ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಪೊಲೀಸರು ತನಿಖೆ ಹೆಸರಲ್ಲಿ ಬರಬಹುದು. ಅವರನ್ನು ಒಳಕ್ಕೆ ಬಿಡಬೇಡಿ. ನನಗೆ ತನಿಖೆ ವಿನಾಯಿತಿ ಇದೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಆನಂದಬೋಸ್ ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ.
ಕೋಲ್ಕತಾ (ಮೇ.6): ತಮ್ಮ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳದ ಆರೋಪದ ಪ್ರಕರಣದಲ್ಲಿ ಯಾವುದೇ ಪೊಲೀಸರು ತನಿಖೆಯ ಹೆಸರಲ್ಲಿ ಬಂದರೆ ಅವರನ್ನು ರಾಜಭವನದ ಒಳಗೆ ಬಿಡಬೇಡಿ ಎಂದು ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ್ ಬೋಸ್ ಸೂಚಿಸಿದ್ದಾರೆ.
ಈ ಕುರಿತು ರಾಜಭವನದ ಸಿಬ್ಬಂದಿಗೆ ಸೂಚನೆ ನೀಡಿರುವ ಬೋಸ್, ‘ರಾಜ್ಯಪಾಲನಾಗಿ ನನಗೆ ತನಿಖೆಯಿಂದ ವಿನಾಯ್ತಿ ಇದೆ. ಪೊಲೀಸರಿಗೆ ನನ್ನ ವಿರುದ್ಧ ಎಫ್‌ಐಆರ್ ಹಾಕಲು ಪ್ರಾಥಮಿಕ ತನಿಖೆ ನಡೆಸಲು ಅಧಿಕಾರ ಇಲ್ಲ. ಹೀಗಾಗಿ ಯಾವುದೇ ಪೊಲೀಸರು ತನಿಖೆ ಹೆಸರಲ್ಲಿ ಬಂದರೆ ಅವರನ್ನು ಒಳಗೆ ಬಿಡಬೇಡಿ. ಅವರ ಯಾವುದೇ ಸಂವಹನವನ್ನು ತಿರಸ್ಕರಿಸಿ ಮತ್ತು ಹೇಳಿಕೆ ನೀಡುವುದರಿಂದಲೂ ದೂರ ಉಳಿಯಿರಿ’ ಎಂದು ಸೂಚಿಸಿದ್ದಾರೆ. ಇತ್ತೀಚೆಗಷ್ಟೇ ರಾಜಭವನದ ಮಹಿಳಾ ಸಿಬ್ಬಂದಿಯೊಬ್ಬರು, ರಾಜ್ಯಪಾಲ ಬೋಸ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು.
ಮಹಿಳೆಯನ್ನು ರೇವಣ್ಣನೇ ಕಿಡ್ನಾಪ್ ಮಾಡಿಸಿದ್ದು ಎಸ್‌ಐಟಿ ಮುಂದೆ ಬಾಯಿಬಿಟ್ಟ A2 ಆರೋಪಿ
ಮಮತಾ ಬ್ಯಾನರ್ಜಿ -ಬೋಸ್ ವಾಕ್ಸಮರ: ರಾಜಭವನದಲ್ಲಿ ಪ.ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ತನಗೆ ಲೈಂಗಿಕ ಕಿರುಕುಳ ನೀಡಿದರು ಹಾಗೂ ಕಾಮಚೇಷ್ಟೆ ಮಾಡುತ್ತಿದ್ದರು ಎಂದು ಭವನದ ಮಹಿಳಾ ನೌಕರಳೊಬ್ಬಳು ಮಾಡಿದ ಆರೋಪವು ಬೋಸ್ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ.
ರಾಜ್ಯಪಾಲ ಬೋಸ್ ಶುಕ್ರವಾರ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ‘ಚುನಾವಣೆ ವೇಳೆ ರಾಜಕೀಯ ಲಾಭಕ್ಕೋಸ್ಕರ ಇಂಥ ಸುಳ್ಳು ಆರೋಪಗಳನ್ನು ಮಾಡಿಸಲಾಗುತ್ತಿದೆ. ರಾಜಭವನದಲ್ಲಿ ಇನ್ನಷ್ಟು ಸಿಬ್ಬಂದಿಗಳಿಂದ ಇಂಥ ಆರೋಪಗಳನ್ನು ಮಾಡಿಸುವ ಸಂಚು ನಡೆದಿದೆ ಎಂದು ನನಗೆ ಗೊತ್ತಾಗಿದೆ. ಇಂಥದ್ದಕ್ಕೆಲ್ಲ ನಾನು ಬಗ್ಗಲ್ಲ. ಮಮತಾ ಸರ್ಕಾರದ ಭ್ರಷ್ಟಾಚಾರ ಹಾಗೂ ಹಿಂಸಾ ಕೃತ್ಯಗಳ ವಿರುದ್ಧ ನನ್ನ ಸಮರ ಮುಂದುವರಿಯಲಿದೆ’ ಎಂದಿದ್ದಾರೆ.
ಮುಂಬೈನ ಹೈ ಪ್ರೊಫೈಲ್ ಕ್ಷೇತ್ರಕ್ಕೆ ಬಿಜೆಪಿಯಿಂದ ಉಗ್ರ ಕಸಬ್ ಗಲ್ಲಿಗೆ ಕಾರಣವಾದ ವಕೀಲ ನಿಕಂ ಅಭ್ಯರ್ಥಿ
ಮಮತಾ ತಿರುಗೇಟು:
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಮಾತನಾಡಿ, ‘ಬೋಸ್ ಮೇಲೆ ರಾಜಭವನ ನೌಕರಳು ಮಾಡಿದ ಆರೋಪಗಳನ್ನು ನೋಡಿ ನನ್ನ ಹೃದಯ ಕಿತ್ತು ಬಂತು. ಬಿಜೆಪಿಯವರು ಸಂದೇಶಖಾಲಿ ಮಹಿಳಾ ದೌರ್ಜನ್ಯದ ಬಗ್ಗೆ ಆರೋಪ ಮಾಡುವುದನ್ನು ನಿಲ್ಲಿಸಿ, ಬೋಸ್ ಕೃತ್ಯಗಳ ಬಗ್ಗೆ ಮಾತನಾಡಲಿ. ಇನ್ನು ಶುಕ್ರವಾರ ಬಂಗಾಳದಲ್ಲೇ ಇದ್ದ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಏಕೆ ಚಕಾರ ಎತ್ತಿಲ್ಲ?’ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಪಾಲ ವಿರುದ್ಧ ತನಿಖೆಗೆ ಎಸ್ಐಟಿ:
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ವಿರುದ್ಧ ರಾಜಭವನದ ಸಿಬ್ಬಂದಿ ಸಲ್ಲಿಸಿದ್ದ ಕಿರುಕುಳದ ದೂರಿಗೆ ಸಂಬಂಧಿಸಿದಂತೆ ಕೋಲ್ಕತಾ ಡಿಸಿಪಿ ಸೆಂಟ್ರಲ್ ನೇತೃತ್ವದಲ್ಲಿ 8 ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಪೊಲೀಸರು ರಚಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಶುಕ್ರವಾರ ರಾಜಭವನಕ್ಕೆ ಭೇಟಿ ನೀಡಿದ್ದು, ದೂರುದಾರ ಮಹಿಳೆಯೊಂದಿಗೆ ಮಾತುಕತೆ ನಡೆಸಿದೆ.