ಕೋಲ್ಕತ್ತಾ(ಏ.05): ಕೊರೋನಾತಂಕದ ನಡುವೆಯೇ ನಡೆಯುತ್ತಿರುವ ಪಂಚರಾಜ್ಯ ಚುನಾವಣೆ ಮೇಲೆ ಸದ್ಯ ಇಡೀ ದೇಶದ ಗಮನವಿದೆ. ಯಾರು ಗೆಲ್ಲುತ್ತಾರೆ? ಜನರ ಒಲವು ಯಾರ ಕಡೆಗಿದೆ ಎಂಬುವುದು ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿದೆ. ಅದರಲ್ಲೂ ವಿಶೇಷವಾಗಿ ಪಶ್ಚಿಮ ಬಂಗಾಳ ಚುನಾವಣಾ ಕಣ ಈ ಬಾರಿ ಭಾರೀ ಕಾವು ಪಡೆದಿದೆ. ಬಿಜೆಪಿ ಹಾಗೂ ಟಿಎಂಸಿ ನಡುವಿನ ಪೈಪೋಟಿಯಲ್ಲಿ ಗೆಲುವು ಯಾರ ಪಾಲಾಗುತ್ತದೆ ಎಂಬುವುದೇ ಸದ್ಯದ ಕುತೂಹಲ. ಹೀಗಿರುವಾಗಲೇ ಸದ್ಯ ಚುನಾವಣಾ ಪ್ರಚಾರದಲ್ಲಿ ಸಿಎಂ ಮಮತಾ ಬ್ಯಾನರ್ಜಿ, ಪಿಎಂ ಮೋದಿಗೆ ಮಾತಿನ ಗುದ್ದು ನೀಡಿದ್ದಾರೆ.

ಹೌದು ಈ ಬಾರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೂಗ್ಲಿಯ ದೇಬಾನಂದಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ದೀದೀ, ನಾನು ಒಂದು ಕಾಲಿನಲ್ಲಿ ಬಂಗಾಳವನ್ನು ಗೆಲ್ಲುತ್ತೇನೆ. ಭವಿಷ್ಯದಲ್ಲಿ ದೆಹಲಿಯಲ್ಲಿ ಎರಡು ಕಾಲುಗಳ ಮೇಲೆ ಗೆಲುವು ಪಡೆಯುತ್ತೇನೆ ಎಂದು ಸವಾಲೆಸೆದಿದ್ದಾರೆ. ಈ ಮೂಲಕ ದೀದಿ ಮುಂದಿನ ಲೋಕಸಭಾ ಚುನಾವಣೆ ದೆಹಲಿ ಗದ್ದುಗೆ ಬಗ್ಗೆ ಪ್ರಸ್ತಾಪಿಸಿ ನೇರವಾಗಿ ಮೋದಿಗೆ ಟಕ್ಕರ್ ನೀಡಿದ್ದಾರೆ. 

ಇನ್ನು ಇದೇ ವೇಳೆ ಕೋವಿಡ್ ವಿಚಾರ ಪ್ರಸ್ತಾಪಿಸಿದ ಮಮತಾ ಬ್ಯಾನರ್ಜಿ ಸದ್ಯ ಕೋವಿಡ್ ಪರಿಸ್ಥಿತಿ ಇದೆ, ಇಂತಹ ಸಂದರ್ಭದಲ್ಲಿ ಎಂಟು ಹಂತದ ಮತದಾನ ಬೇಕಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ನನಗೆ ಚುನಾವಣೆಕ್ಕಿಂತ ರಾಜ್ಯದ ಜನರ ಆರೋಗ್ಯ ಮುಖ್ಯ ಎನ್ನುವ ಸಂದೇಶ ರವಾನಿಸಿ ಭಾವನಾತ್ಮಕವಾಗಿ ಜನರ ಮನಗೆಲ್ಲಲು ದೀದಿ ಯತ್ನಿಸಿದ್ದಾರೆ.