ಒಂದು ಕಾಲದ ಪ್ರಬಲ ಬಿಜೆಪಿ ನಾಯಕ ಅವರು ಅನಾರೋಗ್ಯ ಮತ್ತು ಆರ್ಥಿಕ ಸಂಕಷ್ಟದಿಂದಾಗಿ ಸ್ಮಶಾನದ ಬಳಿ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದ್ದಾರೆ. ಭಿಕ್ಷೆ ಬೇಡುತ್ತಿದ್ದ ಬಿಜೆಪಿ ನಾಯಕನ ಫೋಟೋಗಳು ವೈರಲ್ ಆಗಿವೆ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ತಮ್ಮದೇ ಪಾರುಪತ್ಯ ಹೊಂದಿದ್ದ ಬಿಜೆಪಿ ನಾಯಕ ಇಂದ್ರಜಿತ್ ಸಿನ್ಹಾ ಎಂಬವರು ಭಿಕ್ಷೆ ಬೇಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಪಶ್ಚಿಮ ಬಂಗಾಳದ ವೀರಭೂಮಿ ಜಲ್ಲೆಯ ತಾರಾಪೀಠ ಸ್ಮಶಾನ ಘಾಟ್ ಬಳಿ ಇಂದ್ರಜಿತ್ ಸಿನ್ಹಾ ಅವರು ಭಿಕ್ಷುಕರೊಂದಿಗೆ ಕುಳಿತು ಭಿಕ್ಷೆ ಬೇಡುತ್ತಿರೋದು ಕಂಡು ಬಂದಿದೆ. ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಇಂದ್ರಜಿತ್ ಸಿನ್ಹಾ 'ಬುಲೆಟ್ ದಾದಾ' ಎಂದೇ ಫೇಮಸ್ ಆಗಿದ್ದರು. ಇದೀಗ ವೈರಲ್ ಆಗಿರುವ ಫೋಟೋಗಳನ್ನು ಕಂಡು ಪಶ್ಚಿಮ ಬಂಗಾಳದ ಜನತೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಾ ಭಿಕ್ಷೆ ಬೇಡುತ್ತಿದ್ದ ಇಂದ್ರಜಿತ್ ಸಿನ್ಹಾ ಅವರ ಫೋಟೋಗಳು ಹೊರ ಬರುತ್ತಿದ್ದಂತೆ ಅಲರ್ಟ್ ಆದ ಪಶ್ಚಿಮ ಬಂಗಾಳದ ರಾಜ್ಯ ಬಿಜೆಪಿ ಅಧ್ಯಕ್ಷ, ಕೇಂದ್ರ ಶಿಕ್ಷಣ ಸಚಿವ ಡಾ.ಸುಕಾಂತ್ ಮಜೂಮದಾರ್, ವೀರಭೂಮಿಯ ಬಿಜೆಪಿ ಜಿಲ್ಲಾಧ್ಯಕ್ಷ ಸಂಪರ್ಕಿಸಿದ್ದಾರೆ. ಕೂಡಲೇ ಅನಾರೋಗ್ಯದಿಂದ ಬಳಲುತ್ತಿರುವ ಇಂದ್ರಜಿತ್ ಸಿನ್ಹಾ ಅವರನ್ನು ಭೇಟಿಯಾಗಿ ಚಿಕಿತ್ಸೆ ಕೊಡಿಸಬೇಕು ಎಂದು ಸೂಚನೆ ನೀಡಿದ್ದರು.
ಶಾಸಕ ಪ್ರತಿಪಕ್ಷ ಸುವೇಂದು ನೇರವಾಗಿ ಇಂದ್ರಜಿತ್ ಸಿನ್ಹಾ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಇಂದ್ರಜಿತ್ ಸಿನ್ಹಾ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಇಂದ್ರಜಿತ್ ಸಿನ್ಹಾ ಬಂಗಾಳ ಬಿಜೆಪಿಯ ಆರೋಗ್ಯ ಸೇವಾ ಕೋಶದ ಸಂಚಾಲಕರಾಗಿದ್ದರು. ಈ ಸಮಯದಲ್ಲಿ ಆರೋಗ್ಯ ಸಮಸ್ಯೆಯಲ್ಲಿರೋ ಬಿಜೆಪಿ ಕಾರ್ಯಕರ್ತರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದ್ದರು. ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಆರೋಗ್ಯದ ಬಗ್ಗೆ ಅತ್ಯಂತ ಕಾಳಜಿಯನ್ನು ಹೊಂದಿದ್ದರು.
ಇದನ್ನೂ ಓದಿ: ಗರೀಬಿ ಹಠಾವೋ ಘೋಷಣೆ ಕೇಳಿದ್ದೆವು, ಇದೀಗ 25 ಕೋಟಿ ಬಡನತದಿಂದ ಮುಕ್ತ, ಕಾಂಗ್ರೆಸ್ ತಿವಿದ ಮೋದಿ
ಒಂದು ಕಾಲದಲ್ಲಿ ಬಿಜೆಪಿಯ ಪ್ರಬಲ ಮುಖಂಡರಾಗಿದ್ದ ಇಂದ್ರಜಿತ್ ಸಿನ್ಹಾ, ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ಗೆ ತುತ್ತಾಗಿದ್ದರಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಆರಂಭದಲ್ಲಿ ಗಡ್ಡೆ ಎಂದು ತಿಳಿದಿತ್ತು. ನಂತರ ಅದು ಕ್ಯಾನ್ಸರ್ ಆಗಿ ಬದಲಾಗಿತ್ತು. 40 ವರ್ಷದ ಇಂದ್ರಜಿತ್ ಸಿನ್ಹಾ ಅವಿವಾಹಿತರಾಗಿದ್ದು, ಉಳಿದುಕೊಳ್ಳಲು ಸಹ ಯಾವುದೇ ಸೂಕ್ತ ವ್ಯವಸ್ಥೆಯೂ ಇರಲಿಲ್ಲ. ಈ ಹಿನ್ನೆಲೆ ಕಳೆದ ಎರಡು ತಿಂಗಳಿನಿಂದ ವೀರಭೂಮಿ ಜಲ್ಲೆಯ ತಾರಾಪೀಠ ಸ್ಮಶಾನ ಘಾಟ್ ಬಳಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದರು. ಇಂದ್ರಜಿತ್ ಸಿನ್ಹಾ ತಂದೆ ಮತ್ತು ತಾಯಿ ಹಲವು ವರ್ಷಗಳ ಹಿಂದೆಯೇ ಮೃತರಾಗಿದ್ದಾರೆ.
ಆರಂಭದ ರಾಜಕಾರಣದಲ್ಲಿ ಸುಮಾರು 10 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ಕೇಸರಿ ಮನೆ ಸೇರಿದ ಇಂದ್ರಜಿತ್ ಸಿನ್ಹಾ ಬಿಜೆಪಿಯಲ್ಲಿ ಪಕ್ಷ ಸಂಘಟನೆ ಕೆಲಸ ಮಾಡಿದ್ದರು. ಇಂದ್ರಜಿತ್ ಸಿನ್ಹಾ ಕೆಲಸ ಗುರುತಿಸಿದ್ದ ಬಿಜೆಪಿ, ರಾಜ್ಯ ಘಟಕದಲ್ಲಿ ಜವಬ್ದಾರಿಯುತ ಸ್ಥಾನವನ್ನು ನೀಡಿ ಗೌರವಿಸಿತ್ತು. ಅನಾರೋಗ್ಯದ ಕಾರಣದಿಂದ ಪಕ್ಷದ ಕೆಲಸಗಳನ್ನು ಮಾಡಲು ಇಂದ್ರಜಿತ್ ಸಿನ್ಹಾ ರಾಜಕೀಯ ಚಟುವಟಿಕೆಗಳಿಂದ ದೂರವಾಗಿದ್ದರು. ಅನಾರೋಗ್ಯ ಮತ್ತು ಹಣಕಾಸಿನ ಸಮಸ್ಯೆಯಿಂದಾಗಿ ಭಿಕ್ಷೆ ಬೇಡಲು ಆರಂಭಿಸಿದ್ದರು.
ಇದನ್ನೂ ಓದಿ: 205 ಅಕ್ರಮ ವಲಸಿಗರನ್ನು ಭಾರತಕ್ಕೆ ಕಳಿಸಿದ ಅಮೆರಿಕ: ನಮ್ಮ ವಿರೋಧವಿಲ್ಲ ಎಂದ ಇಂಡಿಯಾ!
