ಪುಣೆ(ಜೂ.23): ಲಾಕ್‌ಡೌನ್‌ ವೇಳೆ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಮಹಾರಾಷ್ಟ್ರದ ಪುಣೆಯ ವೇಶ್ಯೆಯರು ಈಗ ಲಾಕ್‌ಡೌನ್‌ ಸಡಿಲವಾಗುತ್ತಿದ್ದಂತೆ ಮತ್ತೆ ತಮ್ಮ ವೃತ್ತಿಗೆ ಚಾಲನೆ ನೀಡಿದ್ದಾರೆ. ಇಲ್ಲಿನ ಬುಧವಾರ್‌ ಪೇಟೆಯಲ್ಲಿರುವ ರೆಡ್‌ಲೈಟ್‌ ಪ್ರದೇಶದಲ್ಲಿ ಸುಮಾರು 3000 ವೇಶ್ಯೆಯರಿದ್ದು, ಸಹೇಲಿ ಸಂಘ ಎಂಬ ಎನ್‌ಜಿಒ ನೆರವಿನಿಂದ ತಮ್ಮ ವೃತ್ತಿಯನ್ನು ಪುನಾರಂಭಿಸಿದ್ದಾರೆ.

ಇಲ್ಲಿನ ವೇಶ್ಯಾಗೃಹಗಳಲ್ಲಿ ಲೈಂಗಿಕ ಕ್ರಿಯೆ ನಡೆಸಲು ಸಹೇಲಿ ಸಂಘ ಕೆಲ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿದೆ. ವಿಡಿಯೋ ಕ್ಲಿಪ್‌ ಮತ್ತು ಆಡಿಯೋ ಕ್ಲಿಪ್‌ಗಳ ಮೂಲಕ ಈ ಕುರಿತು ವೇಶ್ಯೆಯರಿಗೆ ತರಬೇತಿ ನೀಡಲಾಗಿದೆ. ಅದರ ಪ್ರಕಾರ, ಗ್ರಾಹಕರು ವೇಶ್ಯಾಗೃಹಕ್ಕೆ ಬಂದ ತಕ್ಷಣ ಮೊದಲು ಸ್ನಾನ ಮಾಡಬೇಕು. ನಂತರ ಮುಖಕ್ಕೆ ಮಾಸ್ಕ್‌ ಮತ್ತು ಕೈಗೆ ಹ್ಯಾಂಡ್‌ಗ್ಲೌವ್‌್ಸ ಧರಿಸಿ ಕೋಣೆಗೆ ಹೋಗಬೇಕು. ವೇಶ್ಯೆಯರೂ ಮಾಸ್ಕ್‌ ಮತ್ತು ಹ್ಯಾಂಡ್‌ಗ್ಲೌವ್‌್ಸ ಧರಿಸಿಯೇ ಇವರ ಜೊತೆ ಲೈಂಗಿಕ ಕ್ರಿಯೆ ನಡೆಸಬೇಕು. ಕಾಂಡೋಂ ಕಡ್ಡಾಯ. ಎಲ್ಲ ವೇಶ್ಯಾಗೃಹಗಳ ಹೊರಗೆ ದೇಹದ ಉಷ್ಣತೆ ಪರೀಕ್ಷಿಸುವ ಉಪಕರಣ ಹಾಗೂ ಸ್ಯಾನಿಟೈಸರ್‌ ಇರಿಸಬೇಕು. ಜ್ವರ, ಕೆಮ್ಮು ಅಥವಾ ಕೋವಿಡ್‌ನ ಇನ್ನಿತರ ಲಕ್ಷಣಗಳಿರುವ ರೋಗಿಗಳಿಗೆ ಪ್ರವೇಶವಿಲ್ಲ.

ಈ ಮಾರ್ಗದರ್ಶಿ ಸೂತ್ರಗಳನ್ನು ದೇಶದ ಎಲ್ಲಾ ವೇಶ್ಯಾಗೃಹಗಳೂ ಪಾಲಿಸುವುದು ಒಳ್ಳೆಯದು ಎಂದು ಸಹೇಲಿ ಸಂಘ ಸಲಹೆ ನೀಡಿದೆ. ‘ಸಾಧ್ಯವಾದರೆ ವೇಶ್ಯೆಯರು ಫೋನ್‌ ಸೆಕ್ಸ್‌ ಮೂಲಕ ಗ್ರಾಹಕರನ್ನು ತೃಪ್ತಿಪಡಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ಗರಿಷ್ಠ ಮುನ್ನೆಚ್ಚರಿಕೆ ತೆಗೆದುಕೊಂಡು ಲೈಂಗಿಕ ಕ್ರಿಯೆ ನಡೆಸಬೇಕು’ ಎಂದು ಸಂಘ ಮನವಿ ಮಾಡಿದೆ.

ಪುಣೆಯ ರೆಡ್‌ಲೈಟ್‌ ಪ್ರದೇಶದಲ್ಲಿ ಲಾಕ್‌ಡೌನ್‌ ವೇಳೆ ಊರಿಗೆ ಮರಳಿದ್ದ ವೇಶ್ಯೆಯರು ಇನ್ನೂ ಪೂರ್ಣ ಪ್ರಮಾಣದಲ್ಲಿ ಮರಳಿ ಬಂದಿಲ್ಲ. ಮರಳಿ ಬಂದವರಲ್ಲೂ ಕೂಡ ಅನೇಕರು ಸೋಂಕಿನ ಭೀತಿಯಿಂದ ವೃತ್ತಿ ಪುನಾರಂಭ ಮಾಡಿಲ್ಲ. ಜೀವನ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಕೆಲವರು ಮಾತ್ರ ವೃತ್ತಿ ಆರಂಭಿಸಿದ್ದಾರೆ.