'ನಾವು ಮರೆತಿಲ್ಲ, ನಾವು ಕ್ಷಮಿಸೋದೂ ಇಲ್ಲ': ಪುಲ್ವಾಮಾ ವೀರರಿಗೆ CRPF ಸೆಲ್ಯೂಟ್!
ಪುಲ್ವಾಮಾ ಭಯೋತ್ಪಾದಕ ದಾಳಿಯಾಗಿ ಇಂದಿಗೆ ಒಂದು ವರ್ಷ| ದಾಳಿಯಲ್ಲಿ ತನ್ನ 40 ವೀರ ಯೋಧರನ್ನು ಕಳೆದುಕೊಂಡ CRPF ಪಡೆ| ನಾವು ಮರೆತಿಲ್ಲ, ನಾವು ಕ್ಷಮಿಸಿಲ್ಲ: ಪುಲ್ವಾಮಾ ವೀರರಿಗೆ CRPF ಸೆಲ್ಯೂಟ್!
ನವದೆಹಲಿ[ಫೆ.14]: ಪುಲ್ವಾಮಾ ದಾಳಿಯಾಗಿ ಇಂದಿಗೆ ಒಂದು ವರ್ಷ, 2019ರ ಫೆಬ್ರವರಿ 14 ರಂದು ಉಗ್ರರು ನಡೆಸಿದ್ದ ಕಾರು ಸ್ಫೋಟದಿಂದ ಕೇಂದ್ರ ಮೀಸಲು ಪೊಲೀಸ್ ಪಡೆ(CRP) ತನ್ನ 40 ವೀರ ಯೋಧರನ್ನು ಕಳೆದುಕೊಂಡಿತ್ತು. ಈ ದಾಳಿಗೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಯೋಧರಿಗೆ ನಮನ ಸಲ್ಲಿಸಲಾಗುತ್ತಿದೆ. ಹೀಗಿರುವಾಗ ತನ್ನ ಪಡೆಯ ವೀರರನ್ನು ಕಳೆದುಕೊಂಡ CRPF ವಿಭಿನ್ನವಾಗಿ ಅವರಿಗೆ ಸೆಲ್ಯೂಟ್ ಕೊಟ್ಟಿದೆ.
ಹೌದು ಈ ಸಂಬಂಧ CRPF ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ಧೀರರಿಗೆ ವಿಭಿನ್ನವಾಗಿ ನಮನ ಸಲ್ಲಿಸಿದೆ. ಈ ಕುರಿತು ಟ್ವೀಟ್ ಮಾಡಿರುವ CRPF 'ನಿನ್ನ ಶೌರ್ಯದ ಗೀತೆ, ಕರ್ಕಶ ಗಲಾಟೆಯಲ್ಲಿ ಲೀನವಾಗಿಲ್ಲ. ಹೆಮ್ಮೆ ಎಷ್ಟಿತ್ತೆಂದರೆ ನಾವು ಅಳುತ್ತಾ ಕೂರಲಿಲ್ಲ. ನಾವು ಮರೆತಿಲ್ಲ, ನಾವು ಕ್ಷಮಿಸಿಲ್ಲ. ದೇಶದ ರಕ್ಷಣೆಗಾಗಿ ಪುಲ್ವಾಮಾ ತಮ್ಮ ಪ್ರಾಣ ತ್ಯಾಗ ಮಾಡಿದ ನಮ್ಮ ಸಹೋದರರಿಗೆ ನಮ್ಮ ಸೆಲ್ಯೂಟ್. ಅವರನ್ನು ಕಳೆದುಕೊಂಡ ಧೀರರ ಕುಟುಂಬದೊಂದಿಗೆ ನಾವಿದ್ದೇವೆ' ಎಂದು ಬರೆದಿದೆ.
CRPFನ ಈ ಟ್ವೀಟ್ ದೇಶಪ್ರೇಮಿಗಳನ್ನು ಭಾವುಕರನ್ನಾಗಿಸಿದೆ. ಭಾರತಕ್ಕಿಂದು ಕರಾಳ ದಿನವಾಗಿದ್ದು, ಹುತಾತ್ಮ ಯೋಧರ ಸ್ಮರಣಾರ್ಥ ಶುಕ್ರವಾರ ವಿವಿಧೆಡೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶ್ರೀನಗರದಲ್ಲಿರುವ ಸ್ಮಾರಕದಲ್ಲಿ ಯೋಧರಿಗೆ ಸಿಆರ್‌ಪಿಎಫ್ ಶ್ರದ್ಧಾಂಜಲಿ ಸಲ್ಲಿಸಲಿದೆ. ಪುಲ್ವಾಮಾದ ಲೆತ್ ಪೋರಾದಲ್ಲಿರುವ ಸಿಆರ್‌ಪಿಎಫ್ ತರಬೇತಿ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು ಮತ್ತು ಸೇನಾ ಸಿಬ್ಬಂದಿ ಹುತಾತ್ಮಯೋಧರನ್ನು ಸ್ಮರಿಸಲಿದ್ದಾರೆ.
ಏನಿದು ಘಟನೆ
2019 ಫೆ.14ರಂದು ಪುಲ್ವಾಮಾ ಜಿಲ್ಲೆಯ ಜಮ್ಮು- ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಸಾಗಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ಆತ್ಮಾಹುತಿ ಬಾಂಬರ್ ಇದ್ದ ವಾಹನವನ್ನು ಡಿಕ್ಕಿ ಹೊಡೆಸಿ ಸ್ಫೋಟ ನಡೆಸಲಾಗಿತ್ತು. ಪಾಕಿಸ್ತಾನ ಮೂಲದ ಜೈಷ್ ಎ- ಮೊಹಮ್ಮದ್ ಉಗ್ರಗಾಮಿ ಸಂಘಟನೆ ಈ ದಾಳಿಯಲ್ಲಿ ಭಾಗಿಯಾಗಿತ್ತು. 1989ರ ಬಳಿಕ ಭದ್ರತಾ ಪಡೆಗಳ ಮೇಲೆ ನಡೆದ ಅತಿ ದೊಡ್ಡ ದಾಳಿ ಇದಾಗಿತ್ತು. ಈ ದಾಳಿಗೆ ದೇಶದೆಲ್ಲೆಡೆ ವ್ಯಪಕ ಆಕ್ರೋಶ ವ್ಯಕ್ತವಾಗಿತ್ತು. ಈ ದಾಳಿಯಲ್ಲಿ ಹುತಾತ್ಮರಾದವರ ಪೈಕಿ ಕರ್ನಾಟಕದ ಯೋಧ ಎಚ್. ಗುರು ಕೂಡ ಒಬ್ಬರಾಗಿದ್ದಾರೆ.
ಹುತಾತ್ಮರಿಗೆ ಮೋದಿ ನಮನ
ಪ್ರಧಾನಿ ನರೇಂದ್ರ ಮೋದಿ ಕೂಡಾ ಪುಲ್ವಾಮಾ ವೀರರಿಗೆ ಟ್ವೀಟ್ ಮೂಲಕ ಸ್ಮರಿಸಿ, ನಮನ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪಿಎಂ ಮೋದಿ 'ಕಳೆದ ವರ್ಷ ಪುಲ್ವಾಮಾದಲ್ಲಿ ನಡೆದ ಘೋರ ದಾಳಿಯಲ್ಲಿ ಪ್ರಾಣತೆತ್ತ ಹುತಾತ್ಮರಿಗೆ ನಮನಗಳು. ಅವರು ನಮ್ಮ ರಾಷ್ಟ್ರದ ಸೇವೆ ಮತ್ತು ರಕ್ಷಣೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು. ಅವರ ಹುತಾತ್ಮತೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ' ಎಂದು ಬರೆದಿದ್ದಾರೆ.
'