ನವದೆಹಲಿ[ಜ.05]: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ಕಾಲೆಳೆಯಲು ನಕಲಿ ವಿಡಿಯೋ ಅಪ್ಲೋಡ್ ಮಾಡಿ ಟ್ರೋಲ್ ಆಗಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಛಾಟಿ ಬೀಸಿದ್ದಾರೆ. ಇಮ್ರಾನ್ ಖಾನ್ ಭಾರತೀಯ ಮುಸಲ್ಮಾನರ ಬಗ್ಗೆ ಚಿಂತಿಸುವುದನ್ನು ಬಿಟ್ಟು, ತನ್ನ ದೇಶದ ಮುಸಲ್ಮಾನರ ಬಗ್ಗೆ ಯೋಚಿಸಲಿ. ನಮಗೆ ನಾವು ಭಾರತೀಯ ಮುಸಲ್ಮಾನರು ಎನ್ನಲು ಹೆಮ್ಮೆ ಇದೆ ಎಂದಿದ್ದಾರೆ.

ಪೌರತ್ವ ತಿದ್ದುಪಡಿ ಜಾರಿಯ ಅಸಲಿಯತ್ತು(?) ಹೇಳಿದ ಇಮ್ರಾನ್!

ಹೌದು ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದ ಕಾಲೆಳೆಯಲು ಬಾಂಗ್ಲಾ ದೇಶದ ವಿಡಿಯೋ ಒಂದನ್ನು ಪಾಕಿಸ್ತಾನ ಪ್ರಧಾನಿ ಟ್ವೀಟ್ ಮಾಡಿದ್ದರು. ಅಲ್ಲದೇ ಉತ್ತರಪ್ರದೇಶದ ಮುಸ್ಲಿಮರ ಮೇಲೆ ಭಾರತದ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಬರೆದಿದ್ದರು. ಆದರೆ ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ವಿಡಿಯೋ ಭಾರತದ್ದಾಗಿರದೇ 2013ರಲ್ಲಿ ಬಾಂಗ್ಲಾದೇಶದಲ್ಲಿ ಅಲ್ಲಿನ Rapid Action Force ನಡೆಸಿದ್ದ ಕಾರ್ಯಾಚರಣೆಯ ವಿಡಿಯೋ ಎಂಬುವುದು ಸ್ಪಷ್ಟವಾಗಿತ್ತು. ಈ ವಿಚಾರ ಬಯಲಾಗುತ್ತಿದ್ದಂತೆಯೇ ಪಾಕ್ ಪ್ರಧಾನಿ ಟ್ರೋಲ್ ಆಗಿದ್ದರು.

ಬಾಂಗ್ಲಾ ವಿಡಿಯೋ ಹಾಕಿ ಭಾರತದ್ದು ಎಂದ ಇಮ್ರಾನ್: ಟ್ವೀಟ್ ಟ್ಯಾಗ್ ಬ್ಲಾಕ್!

ಆದರೀಗ ಈ ವಿಡಿಯೋ ಸಂಬಂಧ ಶನಿವಾರ ಪ್ರತಿಕ್ರಿಯಿಸಿರುವ ಎಐಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪಾಕ್ ಪ್ರಧಾನಿಗೆ ಭರ್ಜರಿಯಾಗೇ ಮಾತಿನ ಏಟು ಕೊಟ್ಟಿದ್ದಾರೆ. 'ನಾವು ಹೆಮ್ಮೆಯ ಭಾರತೀಯ ಮುಸಲ್ಮಾನರು. ಇಮ್ರಾನ್ ಖಾನ್ ನೀವು ನಿಮ್ಮ ಸ್ವಂತ ದೇಶದ ಬಗ್ಗೆ ನೀವು ಚಿಂತಿಸಿರಿ. ಜಿನ್ನಾರ ತಪ್ಪು ಸಿದ್ಧಾಂತವನ್ನು ನಾವು ತಿರಸ್ಕರಿಸಿದ್ದೇವೆ. ನಾವು ಭಾರತೀಯ ಮುಸಲ್ಮಾನರು ಎನ್ನಲು ನಮಗೆ ಹೆಮ್ಮೆಯಾಗುತ್ತೆ. ನಾವು ಹಾಗೇ ಇರುತ್ತೇವೆ. ನೀವು ಸಿಖ್ಖರ ಮೇಲೆ ನಡೆಯುತ್ತಿರುವುದನ್ನು ಮೊದಲು ತಡೆಯಿರಿ. ಗುರುದ್ವಾರಗಳ ಮೇಲಾಗುತ್ತಿರುವ ದಾಳಿಯನ್ನು ನಿಲ್ಲಿಸಿ. ಭಾರತದ ಚಿಂತೆ ಬಿಡಿ' ಎಂದಿದ್ದಾರೆ.

ಇನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿರುವ ಅಕ್ಬರುದ್ದೀನ್ ಕೂಡ ಇಮ್ರಾನ್ ಖಾನ್ ಟ್ವೀಟ್‌ನ್ನು ಖಂಡಿಸಿದ್ದು, ಭಾರತದ ಜಾತ್ಯಾತೀತ ಸ್ವರೂಪ ಅರಿಯದ ಇಮ್ರಾನ್ ಖಾನ್ ಭಾರತದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.