Wayanad landslide: ಬದುಕಿನ ದಾರಿಗೆ ಅದೆಷ್ಟು ವಿಘ್ನ,ಇಡೀ ಊರೇ ನಿದ್ರಿಸುತ್ತಿದ್ದ ವೇಳೆ ಕುಸಿದ ಆ ಎರಡು ಬೆಟ್ಟ!

ರಣ ಭೀಕರ ಮಳೆಗೆ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಜಲಪ್ರವಾಹ ಕಥೆ ಇದು. ಸುಮಾರು 18 ಕಿ ಮೀಟರ್‌  ವ್ಯಾಪ್ತಿಯಲ್ಲಿ ನಡೆದ  ಘಟನೆಗೆ ಸಾವಿನ ಸಂಖ್ಯೆ ಏರುತ್ತಲೇ ಇದೆ.

wayanad landslide tragedy why kerala facing disasters every monsoon gow

ಇಡೀ ಊರಿಗೆ ಊರೇ ನಿದ್ರಿಸುತ್ತಿದ್ದ ಸಮಯದಲ್ಲಿ ವರುಣನ ಅಬ್ಬರ ಬಿಟ್ಟರೆ ಆ ಊರಿನಲ್ಲಿ ಏನೂ ಕೇಳಿಸುತ್ತಿರಲಿಲ್ಲ. ಹಗಲು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದ ಟೀ ಎಸ್ಟೇಟ್‌, ಕಾಫಿ ಎಸ್ಟೇಟ್‌ ಸುತ್ತಲಿನ ಪರಿಸರ ಕೂಡ ವರುಣ ಆರ್ಭಟಕ್ಕೆ ಮಂಕಾಗಿತ್ತು. ಅದು ಮಂಗಳವಾರ ಮಧ್ಯರಾತ್ರಿಯ 1 ಗಂಟೆ ಸಮಯ ಇದ್ದಕ್ಕಿದಂತೆ ಬೆಟ್ಟ ಕುಸಿದು ನೀರಿನ ಜೊತೆಗೆ ತಪ್ಪಲಿನಲ್ಲಿದ್ದ ಮನೆಯ ಕಡೆಗೆ ಧಾವಿಸುತ್ತಿತ್ತು. 2 ಗಂಟೆಗೆ ಮತ್ತೊಮ್ಮೆ ಬೆಟ್ಟ ಕುಸಿಯಿತು. ಬೆಳಗ್ಗಿನ 4 ಗಂಟೆಗೆ ಮತ್ತೊಮ್ಮೆ ಬೆಟ್ಟ ಕುಸಿಯಿತು. 

ಸಾವಿನ ಸಂಖ್ಯೆ 150 ದಾಟುವ ಶಂಕೆ! 
ರಣ ಭೀಕರ ಮಳೆಗೆ ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತ ಮತ್ತು ಜಲಪ್ರವಾಹ ಕಥೆ ಇದು. ಸುಮಾರು 18 ಕಿ.ಮೀಟರ್‌  ವ್ಯಾಪ್ತಿಯಲ್ಲಿ ನಡೆದ ಈ ದುರ್ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಸಾವಿನ ಸಂಖ್ಯೆ ಏರುತ್ತಲೇ ಇದೆ. 250 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, ಸಾವಿನ ಸಂಖ್ಯೆ 150ರ ಗಡಿದಾಟಬಹುದು ಎಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದ್ದು, ಹೆಣಗಳ ಗುರುತೇ ಸಿಗದಂತಾಗಿದೆ. ಇನ್ನು ಆಸ್ಪತ್ರೆಗಳಲ್ಲಿ ಗಾಯಳುಗಳ ಸಂಖ್ಯೆ ಹೆಚ್ಚಾಗಿದ್ದು, ಜಾಗವಿಲ್ಲದೆ ಮಸೀದಿ, ಮದ್ರಸಾ, ಮಂದಿರ, ಚರ್ಚ್‌ಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ನಿರಾಶ್ರಿತ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.

ವಯನಾಡ್ ಭೀಕರ ಭೂಕುಸಿತ-ಜಲಪ್ರವಾಹ, ತುರ್ತು ಸಹಾಯವಾಣಿ ಇಲ್ಲಿದೆ

400 ಮನೆಗಳಲ್ಲಿ ಉಳಿದಿದ್ದು 10 ಮನೆಯಷ್ಟೇ!
ಈ ಭಯಾನಕ ಘಟನೆ ನಡೆದಿದ್ದು, ಇಡೀ ಗ್ರಾಮಕ್ಕೆ ಗ್ರಾಮವೇ ಬೆಟ್ಟದ ಕೆಳಗೆ ಹುದುಗಿ ಹೋಯ್ತು. 400ಕ್ಕೂ ಹೆಚ್ಚು ಮನೆಗಳ ಜೊತೆಗೆ ಹಲವಾರು ಮಂದಿ ಭೂ ಸಮಾಧಿಯಾಗಿದ್ದಾರೆ. ಈಗ ಅಲ್ಲಿ ಉಳಿದಿರುವುದು ಕೇವಲ 10 ಮನೆಗಳು. ಮೆಪ್ಪಾಡಿ, ಮುಂಡಕ್ಕೈ , ಚೂರಲ್ಮಲಾ, ಪ್ರದೇಶದಲ್ಲಿ ಈ ದುರಂತ ನಡೆದಿದ್ದು, ರಾತ್ರಿ ಕೇಳಿಸಿದ ಭಾರೀ ಸದ್ದಿನ ಹಿನ್ನೆಲೆ ಸ್ಥಳೀಯರು ಜೀವ ರಕ್ಷಣೆಗೆ ಮನೆಯಿಂದ ಹೊರಬಂದಾಗ ಮುಳುಗುವಷ್ಟು ಕೆಸರು ಬಂದು ನಿಂತಿತ್ತು. ಅಲ್ಲಿಂದ ರಾತ್ರೋರಾತ್ರಿ ಹೊರಟ ಜನ ಸ್ಥಳೀಯವಾಗಿದ್ದ, ಟ್ರೀ ವ್ಯಾಲಿ ರೆಸಾರ್ಟ್ ಅನ್ನು ಸೇರಿಕೊಂಡರು. 

ನದಿಯಲ್ಲಿ ತೇಲಿಬಂದ ಹೆಣಗಳ ರಾಶಿ!
ಮೆಪ್ಪಾಡಿಯ ಪಕ್ಕದಲ್ಲಿ  ಚೆಲಿಯಾರ್ ನದಿ ಹರಿಯುತ್ತದೆ. ಮಂಗಳವಾರ ಸುಮಾರು 57 ಸೆಂ ಮೀ ಮಳೆ ಹಿನ್ನೆಲೆ ನದಿಯ ಪಕ್ಕದಲ್ಲಿ ಇರುವ ಚೆಂಬರ ಮತ್ತು ವೆಲ್ಲಾರಿ ಎನ್ನುವ ಎರಡು ಗುಡ್ಡಗಳು ಕುಸಿತವಾಗಿ ಮೆಪ್ಪಾಡಿ ಮತ್ತು ಮುಂಡಕ್ಕೈ ಮೇಲೆ ಬಿದ್ದಿದೆ. ಈ ವೇಳೆ ಚೆಲಿಯಾರ್ ನದಿ ಅಪಾಯದ ಮಟ್ಟ ಮೀರಿ ಹರಿತಿತ್ತು. ಈ ವೇಳೆ ನದಿಯ ದಿಕ್ಕೇ ಬದಲಾಗಿ ಹೋಗಿ ಇಡೀ ಊರಿಗೆ ಊರೇ ಮುಚ್ಚಿ ಹೋಯ್ತು. ಪ್ರವಾಸಿಗರ ವಾಹನಗಳು, ಕಾರು, ಬೈಕ್ ಮಾತ್ರವಲ್ಲ ಹೆಣಗಳು  ಮಲಪ್ಪುರಂನ ನಿಲಂಬೂರ್ ಪ್ರದೇಶದಲ್ಲಿನ ಚಾಲಿಯಾರ್ ನದಿಯಲ್ಲಿ ತೇಲಿ ಬರುತ್ತಿದ್ದವು. ತೇಲಿ ಬರುತ್ತಿದ್ದ ನದಿಯಿಂದ ಹಲವು ಶವಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನಷ್ಟು ಶವಗಳು ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.

ಕೇರಳದಲ್ಲಿ ಭೀಕರ ಭೂಕುಸಿತ, 40ಕ್ಕೂ ಹೆಚ್ಚು ಮಂದಿ ಬಲಿ! 100ಕ್ಕೂ ಹೆಚ್ಚು ಮಂದಿ ಕಣ್ಮರೆ!

ಗುರುತೇ ಸಿಗದಂತಾದ ವಯನಾಡ್‌!
ವಯನಾಡ್ ದೇವರ ನಾಡು ಕೇರಳದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿ ಅದೆಷ್ಟೋ ರೆಸಾರ್ಟ್, ಹೋಟೆಲ್‌ಗಳು, ಹೋಂ ಸ್ಟೇಗಳು ತಲೆ ಎತ್ತಿ ನಿಂತಿದೆ. ಪ್ರತೀ ವರ್ಷ ಇಲ್ಲಿನ ಪಕೃತಿ ಸೌಂದರ್ಯವನ್ನು ಸವಿಯಲು ಲಕ್ಷಗಟ್ಟಲೆ ಜನ ಇಲ್ಲಿಗೆ ಬರುತ್ತಾರೆ. ಇಂತಹ ಸುಂದರ ಪ್ರದೇಶ ಸದಾ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ವಯನಾಡು ಈಗ ಕೆಸರುಮಯವಾಗಿದೆ. ಹೆಣಗಳ ರಾಶಿ ಕಾಣಿಸುತ್ತಿದೆ. ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಬಂಡೆ ಕಲ್ಲುಗಳು, ಕೆಸರುಮಯ ನೀರು ಹರಿಯುತ್ತಿರುವುದು ಮಾತ್ರ ಕಾಣಿಸುತ್ತಿದೆ. ನದಿಗಳು ಯಾವುದು? ಊರು ಯಾವುದು? ಮನೆಗಳು ಎಲ್ಲಿತ್ತು ಎಂಬುದೂ ಕೂಡ ಕಾಣಿಸುತ್ತಿಲ್ಲ.

483 ಜನರನ್ನು ಬಲಿ ಪಡೆದಿದ್ದ ಕೇರಳದ 2018ರ ಪ್ರವಾಹ:
2018ರಲ್ಲೂ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಘಟನೆ ದೇವರನಾಡಲ್ಲಿ ನಡೆದಿತ್ತು. 483 ಜನರನ್ನು ಬಲಿ ಪಡೆದಿತ್ತು.  1961 ಮತ್ತು 2016 ರ ನಡುವೆ ಕೇರಳದಲ್ಲಿ ಭೂಕುಸಿತದಿಂದಾಗಿ ಸುಮಾರು 295 ಜನರು ಸಾವನ್ನಪ್ಪಿದ್ದರು. 2019 ಮತ್ತು 2020 ರ ಮಾನ್ಸೂನ್‌ ಸಮಯದಲ್ಲಿ ಮಳೆಯ ದುರಂತದಿಂದ ಒಟ್ಟು 100 ಕ್ಕೂ ಹೆಚ್ಚು ಜೀವ ಬಲಿಯಾಗಿತ್ತು.

ದೇಶದಲ್ಲಿ ಅತೀ ಹೆಚ್ಚು ಭೂಕುಸಿತವಾಗುವ ರಾಜ್ಯ ಕೇರಳ: 
2021 ರಲ್ಲಿ, ಕೇರಳದ ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಅನೇಕ ಭೂಕುಸಿತ ಮತ್ತು ಪ್ರವಾಹವಾಗಿ 53 ಮಂದಿ ಮೃತಪಟ್ಟ ಬಗ್ಗೆ ವರದಿಯಾಗಿತ್ತು. 2022 ಕ್ಕೆ ಭೂ ವಿಜ್ಞಾನ ಸಚಿವಾಲಯವು ನೀಡಿರುವ ಮಾಹಿತಿಯಂತೆ ಏಳು ವರ್ಷಗಳಲ್ಲಿ ಕೇರಳವು ದೇಶದಲ್ಲಿ ಅತಿ ಹೆಚ್ಚು ಭೂಕುಸಿತಗಳಿಗೆ ಸಾಕ್ಷಿಯಾದ ರಾಜ್ಯವಾಗಿದೆ. 2015 ಮತ್ತು 2022 ರ ನಡುವೆ 3,782 ಭೂಕುಸಿತವಾಗಿದೆ.

ಭೂಕುಸಿತಕ್ಕೆ ಕಾರಣ:
ಕಳೆದ ಕೆಲವು ವರ್ಷಗಳಿಂದ ಕೇರಳದಲ್ಲಿ ಬದಲಾಗುತ್ತಿರುವ ಮಳೆಯ ಸ್ವರೂಪವು  ಭೂಕುಸಿತಕ್ಕೆ ಕಾರಣವಾಗಿದೆ. ಮಾತ್ರವಲ್ಲ ಇದು ಪಶ್ಚಿಮ ಘಟ್ಟದ ಬಹುತೇಕ ಕಾಡನ್ನು ಒಳಗೊಂಡ ರಾಜ್ಯವಾಗಿರುವ ಕೇರಳದಲ್ಲಿ ದಿನದಿಂದ ದಿನಕ್ಕೆ ಅರಣ್ಯನಾಶ ಮಾಡಿ ರೆಸಾರ್ಟ್, ಹೋಟೆಲ್ ಮಾಡಿ ನಗರೀಕರಣಕ್ಕೆ ಬದಲಾಗುತ್ತಿರುವುದು ಕೂಡ ಈ ದುರ್ಘಟನೆಗೆ ಮೂಲ ಕಾರಣವಾಗಿದೆ. ಹವಾಮಾನ ಬದಲಾವಣೆ, ಮನುಷ್ಯ ಪಕೃತಿಯೊಂದಿಗೆ ವಿಕೃತವಾಗಿ ನಡೆದುಕೊಳ್ಳುವುದು ಕೂಡ ಇದಕ್ಕೆ ಪ್ರಮುಖ ಕಾರಣ.

ಕೊಡಗಿನ ದುರಂತ: 2018 ರ ಆಗಸ್ಟ್  10 ರಿಂದ 17ರ ನಡುವೆ ಕೊಡಗಿನಲ್ಲಿ ಭಾರೀ ಮಳೆ ಹಲವಾರು ಭೂಕುಸಿತಕ್ಕೆ ಕಾರಣವಾಗಿತ್ತು. ಘಟನೆಯಲ್ಲಿ 20 ಜನರು ಸಾವನ್ನಪ್ಪಿದರು. 4056 ಮನೆಗಳು ಹಾನಿಗೊಂಡಿದ್ದವು ಮತ್ತು 18,000 ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಇದು ಕೊಡಗಿನಲ್ಲಿ ಅನುಭವಿಸಿದ ಮೊದಲ ಬೃಹತ್ ದುರಂತ ಮಾತ್ರವಲ್ಲ ಕರ್ನಾಟಕ ರಾಜ್ಯ ಕಂಡ ಅತ್ಯಂತ ಭೀಕರ ದುರಂತವಾಗಿತ್ತು. ಇದು ಕೂಡ ಪ್ರವಾಸಿತಾಣ, ಬೆಟ್ಟಗುಡ್ಡಗಳನ್ನು ಕೊರೆದು ಇಲ್ಲಿ ರೆಸಾರ್ಟ್ ಮಾಡಿರುವುದು ಕೂಡ ಈ ದುರಂತಕ್ಕೆ ಪ್ರಮುಖ ಕಾರಣವಾಗಿತ್ತು.

Latest Videos
Follow Us:
Download App:
  • android
  • ios