ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸಂಪೂರ್ಣ ವೈಫಲ್ಯ| ಸೋಂಕು ನಿಯಂತ್ರಣದಲ್ಲಿ ಕೇಂದ್ರ ವಿಫಲ: ಐಎಂಎ ಕಿಡಿ

ನವದೆಹಲಿ(ಮೇ.09): ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸಂಪೂರ್ಣ ವೈಫಲ್ಯ ಅನುಭವಿಸಿದೆ ಹಾಗೂ ಅತಿಯಾದ ನಿಲಕ್ಷ್ಯ ತೋರಿದೆ ಎಂದು ಭಾರತೀಯ ವೈದ್ಯಕೀಯ ಸಂಘಟನೆ (ಐಎಂಎ) ಕಿಡಿಕಾರಿದೆ.

ಸೋಂಕು ನಿಯಂತ್ರಣಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಸಚಿವಾಲಯ ವಿಫಲವಾಗಿರುವುದು ಅಚ್ಚರಿಯನ್ನು ಉಂಟು ಮಾಡಿದೆ. ಐಎಂಎ ಹಾಗೂ ಇತರ ತಜ್ಞರು ನೀಡಿದ್ದ ಸಲಹೆ ಹಾಗೂ ಕೋರಿಕೆಯನ್ನು ಸರ್ಕಾರ ಕಸದ ಬುಟ್ಟಿಗೆ ಹಾಕಿದೆ. ವಾಸ್ತವವನ್ನು ಅರಿಯದೇ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಐಎಂಎ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

"

10ರಿಂದ 15 ದಿನಗಳ ಕಾಲ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್‌ ಘೋಷಣೆ ಮಾಡುವ ಬದಲು ದೇಶವ್ಯಾಪಿ ಲಾಕ್‌ಡೌನ್‌ಗೆ ಸಲಹೆ ನೀಡಲಾಗಿತ್ತು. ಇದರಿಂದ ಆರೋಗ್ಯ ಮೂಲ ಸೌಕರ್ಯ ಸುಧಾರಣೆ ಹಾಗೂ ವೈದ್ಯಕೀಯ ಸಾಮಗ್ರಿ ಹಾಗೂ ಮಾನವ ಶಕ್ತಿಯ ಬಳಕೆಗೆ ಅವಕಾಶ ದೊರೆಯುತ್ತಿತ್ತು. ಲಾಕ್‌ಡೌನ್‌ನಿಂದ ಸೋಂಕಿನ ಸರಪಳಿಗೆ ಕಡಿವಾಣ ಹಾಕಲು ಸಾಧ್ಯವಿದೆ. ಆದರೆ, ಕೇಂದ್ರ ಸರ್ಕಾರ ಲಾಕ್‌ಡೌನ್‌ ಜಾರಿಗೆ ನಿರಾಕರಿಸುತ್ತಿದೆ. ಇದರ ಪರಿಣಾಮಗಾಗಿ ದೈನಂದಿನ ಸೋಂಕಿನ ಪ್ರಮಾಣ 4 ಲಕ್ಷ ಗಡಿ ದಾಟಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona