ಹೈದರಾಬಾದ್(ಡಿ.01): ಹಿಂದೆಂದೂ ಕಂಡು ಕೇಳರಿಯದ ಪ್ರಚಾರಕ್ಕೆ ಸಾಕ್ಷಿಯಾದ ಬೃಹತ್‌ ಹೈದರಾಬಾದ್‌ ಮಹಾನಗರ ಪಾಲಿಕೆಗೆ ಮಂಗಳವಾರ ಆರಂಭವಾಗಿದೆ. ಹೇಗಾದರೂ ಮಾಡಿ ಪಾಲಿಕೆಯನ್ನು ವಶಪಡಿಸಿಕೊಳ್ಳಬೇಕು ಎಂದು ಹಟ ತೊಟ್ಟಿರುವ ಬಿಜೆಪಿ, ರಾಷ್ಟ್ರೀಯ ನಾಯಕರನ್ನೇ ಪ್ರಚಾರಕ್ಕೆ ಕರೆತಂದ ಕಾರಣ ಈ ಚುನಾವಣೆ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ರೀತಿ ದೇಶದಲ್ಲೇ ಗಮನ ಸೆಳೆದಿರುವ ಈ ಚುನಾವಣೆಯಲ್ಲಿ 74.44 ಲಕ್ಷ ಮತದಾರರು ಹಕ್ಕು ಚಲಾಯಿಸಲಿದ್ದಾರೆ. 150 ವಾರ್ಡ್‌ಗಳನ್ನು ಪಾಲಿಕೆ ಹೊಂದಿದೆ. 1122 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಡಿ.4ರಂದು ಮತ ಎಣಿಕೆ ನಡೆಯಲಿದೆ.

ಈ ನಡುವೆ, ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್‌ ರಾಜ್‌ ಅವರು ಹೈದರಾಬಾದ್‌ ಪಾಲಿಕೆ ಚುನಾವಣೆಯಲ್ಲಿ ಟಿಆರ್‌ಎಸ್‌ ಬೆಂಬಲಿಸಿದ್ದಾರೆ.

ಬಿಜೆಪಿ-ಜೆಡಿಯು ಕೂಟ ಜಯಗಳಿಸಿದ ಬಿಹಾರದಲ್ಲಿ ಚುನಾವಣಾ ಉಸ್ತುವಾರಿಯಾಗಿದ್ದ ಭೂಪೇಂದ್ರ ಯಾದವ್‌ ಅವರು ಈ ಚುನಾವಣೆಯಲ್ಲೂ ಬಿಜೆಪಿ ಉಸ್ತುವಾರಿ. ಇವರಿಗೆ ಸಹ ಉಸ್ತುವಾರಿಯಾಗಿ ಕರ್ನಾಟಕದ ಸಚಿವ ಡಾ

ಕೆ. ಸುಧಾಕರ್‌ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಸಾಥ್‌ ನೀಡಿದ್ದಾರೆ. ಇದಲ್ಲದೆ ಕೇಂದ್ರ ಸಚಿವರಾದ ಅಮಿತ್‌ ಶಾ, ಪ್ರಕಾಶ ಜಾವಡೇಕರ್‌, ಕಿಶನ್‌ ರೆಡ್ಡಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಬಂದು ಇಲ್ಲಿ ಪ್ರಚಾರ ನಡೆಸಿ ಹೋಗಿದ್ದು, ಟಿಆರ್‌ಎಸ್‌-ಎಐಎಂಐಎಂಗೆ ಮಣ್ಣು ಮುಕ್ಕಿಸುವ ಮಾತಾಡಿದ್ದಾರೆ. ಆ ಕಾರಣ ಚುನಾವಣೆ ಕುತೂಹಲ ಕೆರಳಿಸಿದೆ.

ಟಿಆರ್‌ಎಸ್‌ಗೆ ಪ್ರಕಾಶ್‌ ರಾಜ್‌ ಬೆಂಬಲ

ಹೈದರಾಬಾದ್‌: ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್‌ ರಾಜ್‌ ಅವರು ಹೈದರಾಬಾದ್‌ ಪಾಲಿಕೆ ಚುನಾವಣೆಯಲ್ಲಿ ಟಿಆರ್‌ಎಸ್‌ ಬೆಂಬಲಿಸಿದ್ದಾರೆ. ‘ವಿಭಜಕ ರಾಜಕೀಯದ ಬದಲು ಸೌಹಾರ್ದಕ್ಕೆ ಮತ ಕೊಡಿ’ ಎಂದು ಹೈದರಾಬಾದ್‌ ಜನತೆಗೆ ಟ್ವೀಟರ್‌ನಲ್ಲಿ ಮನವಿ ಮಾಡಿದ್ದಾರೆ. ಆದರೆ ‘ಪ್ರಜಾಸತ್ತೆ ಹಂತಕರ ಪರ ರಾಜ್‌ ನಿಂತಿದ್ದಾರೆ’ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಹಾಗೂ ಅಸಾದುದ್ದೀನ್‌ ಒವೈಸಿ ಅವರ ಎಐಎಂಐಎಂ ಪಕ್ಷಗಳು ಈ ಸಲ ಹಿಂದಿನಂತೆಯೇ ಬಲ ಪ್ರದರ್ಶಿಸಿ ಮತ್ತಷ್ಟುವೃದ್ಧಿಸಿಕೊಳ್ಳಲು ಶತಾಯ ಗತಾಯ ಯತ್ನಿಸುತ್ತಿವೆ.

ಈ ಹಿಂದಿನ ಪಾಲಿಕೆಯಲ್ಲಿ ಟಿಆರ್‌ಎಸ್‌ 99 ಸ್ಥಾನ ಪಡೆದು ಅಧಿಕಾರಕ್ಕೆ ಬಂದಿತ್ತು. ಎಐಎಂಐಎಂ 44, ಬಿಜೆಪಿ 4, ಕಾಂಗ್ರೆಸ್‌ 2 ಹಾಗೂ ತೆಲುಗುದೇಶಂ ಒಬ್ಬ ಸದಸ್ಯರನ್ನು ಹೊಂದಿದ್ದವು.