ದಕ್ಷಿಣ ಭಾರತದಲ್ಲಿ ಎನ್ ಡಿಎ ಸ್ಥಾನ ಗಳಿಕೆ ಹೆಚ್ಚಳ;ಕರ್ನಾಟಕದಲ್ಲ ಎಲ್ಲ 28 ಸೀಟು ಗೆಲ್ಲುವ ವಿಶ್ವಾಸ: ಪ್ರಧಾನಿ ಮೋದಿ
ರಾಜ್ಯದಲ್ಲಿ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಎಲ್ಲ 28 ಸೀಟುಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ಸಂದರ್ಶನವೊಂದರಲ್ಲಿ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಏ.29): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ 400ಕ್ಕಿಂತಲೂ ಅಧಿಕ ಸೀಟುಗಳನ್ನು ಗೆಲ್ಲಲಿದೆ. ಬಿಜೆಪಿ 370 ಸೀಟುಗಳನ್ನು ಗೆಲ್ಲುವ ಗುರಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾಕ್ಕೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀಡಿರುವ ವಿಶೇಷ ಸಂದರ್ಶನದಲ್ಲಿ ಪ್ರಧಾನಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 370ನೇ ವಿಧಿ ರದ್ದು ಪಡಿಸಿದ ಬಿಜೆಪಿಗೆ 370 ಸೀಟು ಗೆಲ್ಲಿಸಿಕೊಡಬೇಕೆಂಬ ಭಾವನೆ ಜನರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ 'ಅಬ್ ಕೀ ಬಾರ್ 400 ಪಾರ್' ಎಂಬ ಘೋಷಣೆ ಮಾಡಲಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಈ ಮೂಲಕ 'ಅಬ್ ಕೀ ಬಾರ್ 400 ಪಾರ್' ಘೋಷಣೆ ಹಿಂದಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಇನ್ನು ಕರ್ನಾಟಕದಲ್ಲಿ ಈ ಬಾರಿ ಎಲ್ಲ 28 ಲೋಕಸಭಾ ಸೀಟುಗಳನ್ನು ಗೆಲ್ಲುವ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಚ್ಚರಿಯ ಸಾಧನೆ
ಈ ಬಾರಿ ದಕ್ಷಿಣ ಭಾರತದಲ್ಲಿ ಜನರು ಉತ್ತಮ ಆಡಳಿತದ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಈ ಬಾರಿ ಸ್ಥಾನ ಹಾಗೂ ಮತ ಗಳಿಕೆ ಎರಡರಲ್ಲೂ ಗಣನೀಯ ಹೆಚ್ಚಳ ಕಾಣಲಿದೆ. ಈ ಮೂಲಕ ಅಚ್ಚರಿಯ ಸಾಧನೆ ಮಾಡಲಿದೆ ಎಂದು ಹೇಳಿದರು.
ಕರ್ನಾಟಕಕ್ಕೆ 3 ಲಕ್ಷ ಕೋಟಿ ರು. ಕೊಟ್ಟಿದ್ದೇವೆ: ಏಷ್ಯಾನೆಟ್ ಸಂದರ್ಶನದಲ್ಲಿ ಅಂಕಿ ಅಂಶ ತೆರೆದಿಟ್ಟ ಮೋದಿ!
ಕರ್ನಾಟಕದಲ್ಲಿ ಎಲ್ಲ 28 ಸೀಟು ಗೆಲ್ಲುವ ವಿಶ್ವಾಸ
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಹಿನ್ನಡೆ ಕಂಡಿದೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಕೂಡ ರಾಜ್ಯದಲ್ಲಿ ಪಕ್ಷದ ಸ್ಥಾನಗಳು ಕಡಿಮೆಯಾಗಲಿವೆ ಎಂಬ ಅಭಿಪ್ರಾಯಗಳು ಕೇಳಿಬಂದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ, ಈ ರೀತಿ ಮಾತುಗಳನ್ನು ಆಡುವವರ ಸಂಖ್ಯೆ ಕಡಿಮೆಯಾಗುತ್ತದೆಯೇ ಹೊರತು ಬಿಜೆಪಿ ಸೀಟುಗಳಲ್ಲ ಎಂದು ಉತ್ತರಿಸಿದ್ದಾರೆ. ಕರ್ನಾಟಕದ ಜನರು ಬಿಜೆಪಿ ಜೊತೆ ವಿಶೇಷ ಸಂಬಂಧ ಹೊಂದಿದ್ದಾರೆ. ಪಕ್ಷದ ಕಾರ್ಯಕ್ರಮಗಳು ಜನರ ಮೆಚ್ಚುಗೆ ಪಡೆದಿವೆ. ಅಲ್ಲದೆ, ಜೆಡಿಎಸ್ ಬೆಂಬಲ ಕೂಡ ಸಿಕ್ಕಿದೆ. ಹೀಗಾಗಿ ಈ ಬಾರಿ ಕರ್ನಾಟಕದಲ್ಲಿ ಎಲ್ಲ 28 ಸೀಟುಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಗ್ಯಾರಂಟಿಗಳನ್ನು ಪೂರ್ಣವಾಗಿ ಪೂರೈಸದೆ ಜನರನ್ನು ವಂಚಿಸಿದೆ. ಹೀಗಾಗಿ ಈ ಬಾರಿ ಜನರು ಕಾಂಗ್ರೆಸ್ ಗೆ ಮತ ಹಾಕೋದಿಲ್ಲ ಎಂದು ಹೇಳಿದ್ದಾರೆ.
ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಪ್ರಯತ್ನ
ಕರ್ನಾಟಕದಲ್ಲಿ ಹೆಣ್ಣುಮಗಳ ಹತ್ಯೆ, ಬಾಂಬ್ ಬ್ಲಾಸ್ಟ್, ಭಜನೆ ಹಾಡುವವರ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಜನರ ದಾರಿ ತಪ್ಪಿಸಲು ಪ್ರಯತ್ನಿಸಿತ್ತು. ಹೀಗಾಗಿ ಧರ್ಮದ ಆಧಾರದಲ್ಲಿ ಮೀಸಲು ನೀಡಲು ಹೊರಟ್ಟಿರುವ ಕಾಂಗ್ರೆಸ್ ನಡವಳಿಕೆ ಅಸಾಂವಿಧಾನಿಕ ಎಂಬ ಬಿಜೆಪಿ ಹೇಳಿಕೆಯಲ್ಲಿ ತಪ್ಪಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
EXCLUSIVE | ಜನರ ಕಣ್ಣಲ್ಲೇ ನನಗೆ ರಿಸಲ್ಟ್ ಕಾಣ್ತಿದೆ: ಪಿಎಂ ಮೋದಿ ಏಷ್ಯಾನೆಟ್ ಸಂದರ್ಶನ
ಆಸ್ತಿ ಮರುಹಂಚಿಕೆ ಜಾರಿಯಾದ್ರೆ ಜನಸಾಮಾನ್ಯರ ಮನೆ ಮೇಲೆ ದಾಳಿ
ಆಸ್ತಿ ಮರು ಹಂಚಿಕೆ ಯೋಜನೆ ಜಾರಿಗೆ ಬಂದರೆ ಜನಸಾಮಾನ್ಯರು, ರೈತರ ಮನೆಗಳ ಮೇಲೆ ದಾಳಿ ನಡೆಯುತ್ತದೆ. ಅವರ ಸಂಪತ್ತನ್ನು ಲೆಕ್ಕ ಹಾಕಿ, ಮಹಿಳೆಯರ ಆಭರಣಗಳನ್ನು ತೆಗೆದುಕೊಂಡು ಹೋಗುತ್ತದೆ. ಯುವರಾಜನ ಈ ಕೆಟ್ಟ ಯೋಚನೆ ದೇಶವನ್ನು ಸಂಕಷ್ಟಕ್ಕೆ ತಳ್ಳಲಿದೆ ಎಂದು ಪ್ರಧಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕರ್ನಾಟಕವನ್ನು ದಿವಾಳಿ ಮಾಡಲು ಹೊರಟಿದೆ
ಕಾಂಗ್ರೆಸ್ ಈಗಾಗಲೇ ಕೇರಳವನ್ನು ದಿವಾಳಿ ಮಾಡಿದೆ. ಈಗ ಕರ್ನಾಟಕ ಮತ್ತು ತೆಲಂಗಾಣವನ್ನು ದಿವಾಳಿ ಮಾಡಲು ಹೊರಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ತಪ್ಪು ನಿರ್ಧಾರಗಳಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.46ರಷ್ಟು ವಿದೇಶಿ ನೇರ ಹೂಡಿಕೆ ಕಡಿತಗೊಂಡಿದೆ. ಇನ್ನು ಸ್ಟಾರ್ಟಪ್ ಗಳಿಗೆ ಶೇ.80ರಷ್ಟು ಬಂಡವಾಳ ಕೊರತೆ ಎದುರಾಗಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ.