ಮೈದಾನದಲ್ಲಿ 'ದಿ ವಾಲ್' ಎಂದೇ ಖ್ಯಾತರಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್, ತೆರೆಮರೆಯಲ್ಲಿ ನೂರಾರು ಬಡ ಕ್ರೀಡಾ ಪ್ರತಿಭೆಗಳ ಬಾಳಿಗೆ ಬೆಳಕಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿದ್ದ ಯುವ ಕ್ರೀಡಾಪಟುಗಳ ಕಣ್ಣೀರು ಒರೆಸಿ ಕನಸು ಕಟ್ಟಿಕೊಟ್ಟ ದ್ರಾವಿಡ್ ಅವರ ಮಾನವೀಯ ಕಥೆ ಇಲ್ಲಿದೆ.
ಕ್ರಿಕೆಟ್ ಎಂದರೆ ಇಂದು ಸುಲಭವಾಗಿ ಕೈಗೆಟುಕುವ ಕ್ರೀಡೆಯಾಗಿ ಉಳಿದಿಲ್ಲ. ಅದು ಈಗ ಸಾಮಾನ್ಯರ ಕೈಗೆ ಸಿಗದ ಆಕಾಶವಾಗಿದೆ. ಏಕೆಂದರೆ, ಇಂದು ಅಲ್ಲಿ ಬಡ ಮಕ್ಕಳನ್ನು, ಯಾವುದೇ ಪ್ರಭಾವ ಇಲ್ಲದವರನ್ನು ಯಾರೂ ತಿರುಗಿಯೂ ನೋಡುವುದಿಲ್ಲ. ಎಷ್ಟೇ ಪ್ರತಿಭೆ ಇದ್ದರೂ, ತಂಡದ ಒಳಗೆ ಹೋಗುವುದಕ್ಕಾದರೂ, ತಮ್ಮ ಸಾಮರ್ಥ್ಯ ತೋರಿಸಲಿಕ್ಕಾದರೂ ಇಂದು ಹಣ ಮತ್ತು ಪ್ರಭಾವದ ಜಾಲ ಆ ಕ್ರೀಡೆಯನ್ನು ಕಾಡುತ್ತಿದೆ ಎಂದು ಹಲವಾರು ಕ್ರೀಡಾ ವಿಶ್ಲೇಷಕರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ. ಇಂಥ ಕ್ಲಿಷ್ಟಕರ ಸಮಯದಲ್ಲೂ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್ ಅವರು ತುಳಿದ ಹಾದಿ ಇದೆಯಲ್ಲ, ಅದನ್ನು ಯಾರೂ ತುಳಿಯಲು ಸಾಧ್ಯವಿಲ್ಲ. ಹಲವಾರು ಬಡವರ ಮಕ್ಕಳ ಕಣ್ಣೀರು ಒರೆಸಿ ಕನಸು ಕಟ್ಟಿಕೊಟ್ಟ ಕನ್ನಡಿಗ ರಾಹುಲ್. ಆ ಕನಸುಗಳಿಗೆ 'ದಿ ವಾಲ್' ದಾರಿದೀಪವಾಗಿದ್ದು ಹೇಗೆ? ದ್ರಾವಿಡ್ ನೆಟ್ಟ ಬೀಜ ಇಂದಿಗೂ ಫಲ ಕೊಡುತ್ತಿರುವುದು ಹೇಗೆ? ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ಕನ್ನಡದ ಹೆಮ್ಮೆ ರಾಹುಲ್!
ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿದ ಎಷ್ಟೋ ದಿಗ್ಗಜರು ನಿವೃತ್ತಿಯ ನಂತರ ಐಷಾರಾಮಿ ಕಾಮೆಂಟರಿ ಬಾಕ್ಸ್ಗಳಲ್ಲಿ ಕುಳಿತು ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ಆದರೆ, ನಮ್ಮ ಕರ್ನಾಟಕದ ಹೆಮ್ಮೆ ರಾಹುಲ್ ದ್ರಾವಿಡ್ ಆರಿಸಿಕೊಂಡ ದಾರಿ ಮಾತ್ರ ಸಂಪೂರ್ಣ ಭಿನ್ನ. ಆಟಗಾರನಾಗಿದ್ದಾಗ ಮೈದಾನದಲ್ಲಿ 'ಮಹಾಗೋಡೆ'ಯಂತೆ ನಿಂತು ಭಾರತವನ್ನು ಎಷ್ಟೋ ಸೋಲುಗಳಿಂದ ಪಾರು ಮಾಡಿದ್ದ ಈ ಕನ್ನಡಿಗ, ನಿವೃತ್ತಿಯ ನಂತರ ಬಡ ಮತ್ತು ಸಾಮಾನ್ಯ ಹಿನ್ನೆಲೆಯ ಪ್ರತಿಭೆಗಳ ಕಣ್ಣೀರು ಒರೆಸಿ ಅವರ ಬಾಳಿಗೆ ಬೆಳಕಾಗಿದ್ದಾರೆ.
ಹಸಿವಿನಿಂದ ಗೆಲುವಿನವರೆಗೆ ಜೊತೆಯಾದ ಕೈಗಳು!
ಮುಂಬೈನ ಬೀದಿಗಳಲ್ಲಿ ಪಾನಿಪುರಿ ಮಾರುತ್ತಾ, ಮೈದಾನದ ಟೆಂಟ್ನಲ್ಲಿ ಮಲಗುತ್ತಿದ್ದ ಯಶಸ್ವಿ ಜೈಸ್ವಾಲ್ ಕಣ್ಣಲ್ಲಿ ದೊಡ್ಡ ಕನಸಿತ್ತು. ಹೈದರಾಬಾದ್ನ ಬೀದಿಗಳಲ್ಲಿ ಆಟೋ ಓಡಿಸುತ್ತಿದ್ದ ತಂದೆಯ ಮಗ ಮೊಹಮ್ಮದ್ ಸಿರಾಜ್, ಸಾಮಾನ್ಯ ಹಿನ್ನೆಲೆ ಹೊಂದಿದ್ದ ಶುಬ್ಮನ್ ಗಿಲ್, ಸಂಜು ಸ್ಯಾಮ್ಸನ್ ಹೀಗೆ ಹಣವಿಲ್ಲದೆ, ಬೆಂಬಲವಿಲ್ಲದೆ ಕಮರಿ ಹೋಗುತ್ತಿದ್ದ ಅದೆಷ್ಟೋ ಎಲೆಮರೆಯ ಕಾಯಿಗಳನ್ನು ದ್ರಾವಿಡ್ ಹುಡುಕಿ ತೆಗೆದರು. ಅವರಿಗೆ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಧೈರ್ಯ ತುಂಬಿ ಅಂತಾರಾಷ್ಟ್ರೀಯ ಮಟ್ಟಕ್ಕೆ ತಯಾರು ಮಾಡಿದರು.
ರಾಜಸ್ಥಾನ್ ರಾಯಲ್ಸ್ನಲ್ಲಿ ನೆಟ್ಟ ಬೀಜ, 2024ರ ವಿಶ್ವಕಪ್ನಲ್ಲಿ ಫಲ!
ದ್ರಾವಿಡ್ ಅವರ ಈ ಪ್ರತಿಭಾನ್ವೇಷಣೆ ಶುರುವಾಗಿದ್ದು ಐಪಿಎಲ್ನ ರಾಜಸ್ಥಾನ್ ರಾಯಲ್ಸ್ ತಂಡದಿಂದ. ಕಡಿಮೆ ಬಜೆಟ್ನ ಆ ತಂಡದ ನಾಯಕರಾಗಿ ಮತ್ತು ಮೆಂಟರ್ ಆಗಿ ದ್ರಾವಿಡ್ ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದರು. ಕೇರಳದ ಸಾಮಾನ್ಯ ಕುಟುಂಬದಿಂದ ಬಂದ ಸಂಜು ಸ್ಯಾಮ್ಸನ್ ಅವರನ್ನು ಹದಿಹರೆಯದಲ್ಲೇ ಗುರುತಿಸಿ ಬೆಳೆಸಿದ್ದು ಇದೇ ದ್ರಾವಿಡ್. ಮುಂದೆ ರಾಜಸ್ಥಾನ್ ತಂಡದಲ್ಲೇ ಅರಳಿದ ಯಶಸ್ವಿ ಜೈಸ್ವಾಲ್ ಮತ್ತು ಯುಜ್ವೇಂದ್ರ ಚಹಾಲ್ ಕೂಡ ದ್ರಾವಿಡ್ ಮಾರ್ಗದರ್ಶನದಲ್ಲಿ ಪಳಗಿದರು.
ವಿಧಿಯ ವಿಶೇಷ ಆಟ!
ಅಂದು ದ್ರಾವಿಡ್ ಕೈಹಿಡಿದು ಬೆಳೆಸಿದ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಚಹಾಲ್ ಹಾಗೂ ಸಿರಾಜ್ ಅವರಂತಹ ಆಟಗಾರರೇ, 2024ರ ಟಿ20 ವಿಶ್ವಕಪ್ನಲ್ಲಿ ದ್ರಾವಿಡ್ ಅವರ ಕೋಚಿಂಗ್ನಲ್ಲೇ ಆಡಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟರು. ತಾವು ಬೆಳೆಸಿದ ಹುಡುಗರು ಇಂದು ಮೈದಾನದಲ್ಲಿ ಮಿಂಚುತ್ತಿದ್ದರೆ, ದ್ರಾವಿಡ್ ಡ್ರೆಸ್ಸಿಂಗ್ ರೂಮ್ನ ಮೂಲೆಯಲ್ಲಿ ನಿಂತು ಮುಗುಳ್ನಗುತ್ತಾ ಚಪ್ಪಾಳೆ ತಟ್ಟುತ್ತಿದ್ದರು. ಮಗನ ಕ್ರಿಕೆಟ್ ಪಂದ್ಯ ನೋಡಲು ಸಾಮಾನ್ಯ ಪೋಷಕರಂತೆ ಸರತಿ ಸಾಲಿನಲ್ಲಿ ನಿಂತ ಆ ಸರಳತೆ ಕನ್ನಡಿಗರ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿತ್ತು.
ವಿಶ್ವಕಪ್ನಲ್ಲಿ ಸಾರ್ಥಕ ಭಾವ!
2024ರ ಟಿ20 ವಿಶ್ವಕಪ್ ಗೆದ್ದಾಗ, ಶಾಂತ ಸ್ವಭಾವದ ದ್ರಾವಿಡ್ ಟ್ರೋಫಿ ಹಿಡಿದು ಮಗುವಿನಂತೆ ಕಿರುಚಿ ಸಂಭ್ರಮಿಸಿದ್ದರು. ಏಕೆಂದರೆ, ತಾವು ವರ್ಷಗಳ ಕಾಲ ತಳಮಟ್ಟದಲ್ಲಿ ಬೆಳೆಸಿದ ಪ್ರತಿಭೆಗಳು ಇಂದು ವಿಶ್ವಚಾಂಪಿಯನ್ ಆಗಿವೆ ಎಂಬ ಸಾರ್ಥಕ ಭಾವ ಅವರ ಕಣ್ಣಲ್ಲಿತ್ತು. ಮೈದಾನದಲ್ಲಿ ಎದುರಾಳಿಗಳಿಗೆ ಸಿಂಹಸ್ವಪ್ನವಾಗಿದ್ದ 'ಮಿಸ್ಟರ್ ವಾಲ್', ಬಡ ಪ್ರತಿಭೆಗಳ ಪಾಲಿಗೆ ಆಸರೆಯಾದರು. ಇಂತಹ ಸರಳ, ನಿಷ್ಕಲ್ಮಶ ವ್ಯಕ್ತಿತ್ವದ ರಾಹುಲ್ ದ್ರಾವಿಡ್














