ನವದೆಹಲಿ/ವಿಶಾಖಪಟ್ಟಣ(ಮೇ.09): 11 ಮಂದಿಯ ಸಾವಿಗೆ ಕಾರಣವಾದ ವೈಜಾಗ್‌ ವಿಷಾನಿಲ ಸೋರಿಕೆ ಪ್ರಕರಣ ಸಂಬಂಧ, ಎಲ್‌ಜಿ ಪಾಲಿಮರ್ಸ್‌ ಇಂಡಿಯಾಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 50 ಕೋಟಿ ದಂಡ ವಿಧಿಸಿದೆ. ಜತೆಗೆ ಕೇಂದ್ರ ಪರಿಸರ ಹಾಗೂ ಅರಣ್ಯ ಮಂತ್ರಾಲಯ, ಎಲ್‌ಜಿ ಪಾಲಿಮರ್ಸ್‌ ಇಂಡಿಯಾ, ರಾಜ್ಯ ಹಾಗೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ವಿಶಾಖ ಪಟ್ಟಣಂ ಜಿಲ್ಲಾಡಳಿತಕ್ಕೆ ನೋಟಿಸು ಜಾರಿ ಮಾಡಿದೆ.

ಈ ಮಧ್ಯೆ, ಎಲ್‌ಜಿ ಪಾಲಿಮ​ರ್‍ಸ್ ಕಂಪನಿಯ ರಾಸಾಯನಿಕ ಟ್ಯಾಂಕ್‌ಗಳು ಸುರಕ್ಷಿತವಾಗಿವೆ. ಅನಿಲ ರೂಪದಲ್ಲಿ ಸೋರಿಕೆಯಾಗಿರುವ ಸ್ಟೈರೀನ್‌ ಅನ್ನು 20 ಡಿಗ್ರಿಗಿಂತ ಕಡಿಮೆ ಉಷ್ಣಾಂಶಕ್ಕೆ ಇಳಿಸಿ, ದ್ರವರೂಪಕ್ಕೆ ತರುವ ಕ್ರಿಯೆಯಾದ ‘ಪಾಲಿಮರೈಸ್‌’ ಮಾಡಲಾಗುತ್ತಿದೆ. ಈಗಾಗಲೇ ಶೇ.60ರಷ್ಟುಅನಿಲವನ್ನು ಪಾಲಿಮರೈಸ್‌ ಮಾಡಲಾಗಿದೆ. ಮುಂದಿನ 18ರಿಂದ 24 ತಾಸುಗಳಲ್ಲಿ ಎಲ್ಲ ಸ್ಟೈರೀನ್‌ ಅನ್ನು ದ್ರವರೂಪಕ್ಕೆ ತರಲಾಗುವುದು ಎಂದು ಜಿಲ್ಲಾಧಿಕಾರಿ ವಿ. ವಿನಯ್‌ ಚಂದ್‌ ತಿಳಿಸಿದ್ದಾರೆ.

ಈ ನಡುವೆ, ವಿಷಾನಿಲ ಸೋರಿಕೆ ಕುರಿತು ತನಿಖೆ ನಡೆಸಲು ಅತ್ಯುನ್ನತ ಸಮಿತಿಯೊಂದನ್ನು ಆಂಧ್ರ ಮುಖ್ಯ ಕಾರ್ಯದರ್ಶಿ ನೀಲಂ ಸಾಹ್ನೆ ಅವರು ರಚನೆ ಮಾಡಿದ್ದಾರೆ. ವಿಷಾನಿಲದಿಂದ ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳ ಜನರ ಮೇಲೆ ದೀರ್ಘಾವಧಿಯಲ್ಲಿ ಯಾವುದಾದರೂ ಪರಿಣಾಮಗಳು ಆಗುತ್ತವೆಯೇ ಎಂಬುದರ ಬಗ್ಗೆಯೂ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ.