ನವದೆಹಲಿ(ಮಾ.21): ದೇಹವನ್ನು ಕತ್ತರಿಸದೆ ಮರಣೋತ್ತರ ಪರೀಕ್ಷೆ ನಡೆಸುವ ಹೊಸ ವಿಧಾನವೊಂದನ್ನು ದೆಹಲಿಯ ಪ್ರತಿಷ್ಠಿತ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಶನಿವಾರದಿಂದ ಪರಿಚಯಿಸಿದೆ. ಇದನ್ನು ‘ವರ್ಚುವಲ್‌ ಅಟಾಪ್ಸಿ’ ಎಂದು ಕರೆಯಲಿದ್ದು, ಇಂತಹ ವ್ಯವಸ್ಥೆಯನ್ನು ಪರಿಚಯಿಸಿದ ದಕ್ಷಿಣ ಏಷ್ಯಾ ಹಾಗೂ ಆಗ್ನೇಯ ಏಷ್ಯಾದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಏಮ್ಸ್‌ ಪಾತ್ರವಾಗಿದೆ.

ಅಪಘಾತ ಅಥವಾ ಆತ್ಮಹತ್ಯೆಯಂತಹ ಪ್ರಕರಣಗಳಲ್ಲಿ ಮೊದಲೇ ಕುಟುಂಬಗಳು ಅತೀವ ದುಃಖದಲ್ಲಿರುತ್ತವೆ. ಇಂತಹ ಸಂದರ್ಭದಲ್ಲಿ ಮೃತದೇಹವನ್ನು ಕತ್ತರಿಸಿ, ಹೊಲಿಗೆ ಹಾಕುವುದು ದುಃಖವನ್ನು ಇಮ್ಮಡಿಗೊಳಿಸುತ್ತದೆ. ಇದನ್ನು ತಪ್ಪಿಸಲು ಏಮ್ಸ್‌ ದೇಹವನ್ನು ಮುಟ್ಟದೆ ಮರಣೋತ್ತರ ಪರೀಕ್ಷೆ ನಡೆಸಲು ಆರಂಭಿಸಿದೆ. ಇದರಡಿ ಶವವನ್ನು ಒಂದು ಚೀಲಕ್ಕೆ ತುಂಬಿ ಸಿ.ಟಿ. ಸ್ಕಾ್ಯನ್‌ ಮಾಡಲಾಗುತ್ತದೆ. ಕೆಲವೇ ಸೆಕೆಂಡುಗಳಲ್ಲಿ ದೇಹದ ಆಂತರಿಕ ಭಾಗಗಳು, ಅಂಗಾಂಶಗಳು ಹಾಗೂ ಮೂಳೆಗಳ ಸಹಸ್ರಾರು ಚಿತ್ರಗಳು ಸೆರೆ ಹಿಡಿಯಲ್ಪಡುತ್ತವೆ. ವಿಧಿವಿಜ್ಞಾನ ತಜ್ಞರು ಅದನ್ನು ವಿಶ್ಲೇಷಣೆಗೆ ಒಳಪಡಿಸಬಹುದಾಗಿದೆ.

ಸ್ವಿಜರ್ಲೆಂಡ್‌, ಅಮೆರಿಕ ಹಾಗೂ ಬ್ರಿಟನ್‌ನಂತಹ ಮುಂದುವರಿದ ದೇಶಗಳಲ್ಲಿ ವರ್ಚುವಲ್‌ ಅಟಾಪ್ಸಿ ಇದೆ. ಆದರೆ ದಕ್ಷಿಣ ಏಷ್ಯಾದಲ್ಲಿ ಇದೇ ಮೊದಲು ಎಂದು ಏಮ್ಸ್‌ನ ವಿಧಿ ವಿಜ್ಞಾನ ವೈದ್ಯ ವಿಭಾಗದ ಮುಖ್ಯಸ್ಥ ಡಾ| ಸುಧೀರ್‌ ಗುಪ್ತಾ ತಿಳಿಸಿದ್ದಾರೆ.

ಲಾಭ ಏನು?:

ದೆಹಲಿ ಏಮ್ಸ್‌ನಲ್ಲಿ ಪ್ರತಿ ವರ್ಷ 3000 ಮರಣೋತ್ತರ ಪರೀಕ್ಷೆಗಳು ನಡೆಯುತ್ತವೆ. ಶೇ.30ರಿಂದ ಶೇ.50ರಷ್ಟುಪ್ರಕರಣಗಳಲ್ಲಿ ಶವ ಪರೀಕ್ಷೆಗಾಗಿ ದೇಹವನ್ನು ಕತ್ತರಿಸಬೇಕಾಗಿರುವುದಿಲ್ಲ. ಅಪಘಾತ, ನೇಣು ಅಥವಾ ಆತ್ಮಹತ್ಯೆ ಪ್ರಕರಣಗಳಲ್ಲಿ ಸಾವಿನ ಕಾರಣ ತಿಳಿಯುವುದು ಸುಲಭ. ಅಂತಹ ಸಂದರ್ಭದಲ್ಲಿ ವರ್ಚುವಲ್‌ ಅಟಾಪ್ಸಿ ಅನುಕೂಲಕ್ಕೆ ಬರಲಿದೆ ಎನ್ನುತ್ತಾರೆ ಗುಪ್ತಾ.

ಅಸ್ವಾಭಾವಿಕ ಸಾವಿನ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ಪೊಲೀಸರ ತನಿಖಾ ದೃಷ್ಟಿಯಿಂದ ಸಹಕಾರಿ. ದೇಹವನ್ನು ಅಡಿಯಿಂದ ಮುಡಿವರೆಗೆ ಕತ್ತರಿಸಿ ನಡೆಸುವ ಮರಣೋತ್ತರ ಪರೀಕ್ಷೆಗೆ ಪ್ರಕರಣ ಆಧರಿಸಿ 30 ನಿಮಿಷದಿಂದ 3 ದಿನಗಳ ಕಾಲ ಸಮಯ ಬೇಕಾಗುತ್ತದೆ. ಆದರೆ ಹೊಸ ರೀತಿಯ ಮರಣೋತ್ತರ ಪರೀಕ್ಷೆಯಲ್ಲಿ ಕೆಲವೇ ನಿಮಿಷಗಳಲ್ಲಿ ಪರೀಕ್ಷೆ ಮುಗಿದು ಹೋಗಲಿದೆ. ಇದರಿಂದ ಸಮಯ ಹಾಗೂ ಮಾನವ ಸಂಪನ್ಮೂಲ ಎರಡೂ ಉಳಿತಾಯವಾಗುತ್ತದೆ.

ವರ್ಚುವಲ್‌ ಅಟಾಪ್ಸಿಯ ದಾಖಲೆಗಳು ಡಿಜಿಟಲ್‌ ರೂಪದಲ್ಲಿ ಲಭ್ಯವಿರುವುದರಿಂದ, ಭವಿಷ್ಯದಲ್ಲಿ ಆರೋಪಗಳು ಕೇಳಿಬಂದರೆ ಎರಡು ಅಥವಾ ಮೂರನೇ ಅಭಿಪ್ರಾಯವನ್ನು ವೈದ್ಯರಿಂದ ಪಡೆಯಬಹುದಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.