Gyanesh Kumar: ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಲಕ್ನೋದಲ್ಲಿ ನಡೆದ ಪ್ರತಿಭಟನೆಯ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾಕಾರನನ್ನು ಬಾಹುಬಲಿಯಂತೆ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ. ಮುಂದೇನಾಯ್ತು.
ನವದೆಹಲಿ (ಅಕ್ಟೊಬರ್ 10): ದೇಶದಲ್ಲಿ ಗ್ಯಾನೇಶ್ ಕುಮಾರ್ (Gyanesh Kumar) ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯ ಕಾವು ಜೋರಾಗಿದೆ. ಕೇವಲ ಕರ್ನಾಟಕ ಮತ್ತು ದೆಹಲಿಗೆ ಮಾತ್ರ ಈ ಪ್ರತಿಭಟನೆ ಸೀಮಿತವಾಗಿಲ್ಲ. ದೇಶದ ವಿವಿಧ ಭಾಗಗಳಲ್ಲೂ ಪ್ರತಿಭಟನೆ ನಡೆಯುತ್ತಿವೆ.
ಅದರಂತೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಭಾರೀ ವೈರಲ್ ಆಗ್ತಿದೆ. ಆಗಿದ್ದೇನು ಅಂತಾ ನೋಡೋದಾರೆ.. ಲಕ್ನೋದ ಪ್ರಮುಖ ಸ್ಥಳದಲ್ಲಿ ಇಂದು ಪ್ರತಿಭಟನೆ ನಡೆಯುತ್ತಿದೆ. ಮಾಧ್ಯಮಗಳು ತಮ್ಮ ಪಾಡಿಗೆ ತಾವು ವರದಿ ಮಾಡುತ್ತಿವೆ. ಇದರ ಮಧ್ಯೆ ಪೊಲೀಸರು ಭದ್ರತೆಯನ್ನ ಒದಗಿಸುತ್ತಿವೆ.
ಪ್ರತಿಭಟನೆಯು ತೀವ್ರ ಕಾವು ಪಡೆದುಕೊಂಡಾಗ ಪೊಲೀಸರು ಸಹಜವಾಗಿಯೇ ಅದನ್ನು ಹತ್ತಿಕ್ಕಲು ಮುಂದಾಗಿದ್ದಾರೆ. ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನದಲ್ಲಿ ತುಂಬಲು ಮುಂದಾಗಿದ್ದಾರೆ.ಈ ವೇಳೆ ಓರ್ವ ಪೊಲೀಸ್ ಅಧಿಕಾರಿ ಒಬ್ಬ ಯುವಕನನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ಬಂದಿದ್ದಾರೆ. ಆ ದೃಶ್ಯವು ಬಾಹುಬಲಿ ಸಿನಿಮಾದಂತೆ ಇದೆ. ಅಧಿಕಾರಿಯ ಭುಜದ ಮೇಲೆ ಏರಿದ್ದ ಯುವಕ ಗ್ಯಾನೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾನೆ. ಜೋರಾಗಿ ದಿಕ್ಕಾರ ಕೂಗುತ್ತಿದ್ದಾನೆ.
ಹೀಗೆ ಪೊಲೀಸ್ ಅಧಿಕಾರಿ ಯಾರ ಸಹಾಯವೂ ಇಲ್ಲದೇ ಆ ವ್ಯಕ್ತಿಯನ್ನ ಎತ್ತಿಕೊಂಡು ಹೋಗಿ ಪೊಲೀಸ್ ವಾಹನದತ್ತ ಸಾಗಿದ್ದಾರೆ. ವಿಡಿಯೋದಲ್ಲಿ ಇನ್ನೇನು ವಾಹನಕ್ಕೆ ತುಂಬಿಸುತ್ತಾರೆ ಅಂದುಕೊಳ್ಳುವಷ್ಟರಲ್ಲೇ ಯಡವಟ್ಟು ಮಾಡಿಬಿಡ್ತಾರೆ. ಯುವಕನನ್ನು ವಾಹನ ಹತ್ತಿರ ಎತ್ಕೊಂಡು ಹೋಗಿ ಜೋರಾಗಿ ನೆಲಕ್ಕೆ ಬೀಸಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇದನ್ನು ಗಮನಿಸಿದ ಅನೇಕರು ಪೊಲೀಸ್ ಅಧಿಕಾರಿಯ ಕ್ರಮವನ್ನು ಪ್ರಶ್ನೆ ಮಾಡಿದ್ದಾರೆ.
ಹೇಗೆ ಬಾಹುಬಲಿಯಂತೆ ಆತನನ್ನು ಎತ್ಕೊಂಡು ಹೋದ ಪೊಲೀಸ್ ಅಧಿಕಾರಿ ಹೀರೋ ಆಗಿ ಬಿಡುತ್ತಿದ್ದರು. ಆದರೆ ಅವರು ಕೊನೆಯಲ್ಲಿ ಬೀಸಾಡಿ ತುಂಬಾ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪೊಲೀಸ್ ಅಧಿಕಾರಿ ಬಿಸಾಡಿದ ಆ ಯುವಕ ಹೇಗಿದ್ದಾನೆ? ಗಾಯ ಆಗಿದೆಯೇ ಅನ್ನೋದ್ರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ ಯಾಕೆ?
ದೇಶಾದ್ಯಂತ ಇದೀಗ ಚುನಾವಣಾ ಆಯೋಗ (Election Commission), ಗ್ಯಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ (SIR : special intensive revision) ಭಾರಿ ಕೋಲಾಹಲ ಸೃಷ್ಟಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅಕ್ರಮ ನಡೆದಿದೆ ಅನ್ನೋದು ಕಾಂಗ್ರೆಸ್ ಸೇರಿದಂತೆ ಹಲವರ ಆರೋಪ. ಅಕ್ಟೋಬರ್ 8 ರಂದು ಬೆಂಗಳೂರಲ್ಲಿ ಖ್ಯಾತ ಯೂಟ್ಯೂಬರ್, ಜಿರಳೆ ಪಕ್ಷದ ಮುಖ್ಯಸ್ಥ ಅಭಿಜಿತ್ ದೀಪ್ಕೆ ಸೇರಿದಂತೆ ಹಲವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಬೆಂಗಳೂರು ಬೆನ್ನಲ್ಲೇ ಇವತ್ತು ದೆಹಲಿಯಲ್ಲೂ ಪ್ರತಿಭಟನೆ ನಡೆದಿದೆ. ಮಾತ್ರವಲ್ಲ ಉತ್ತರ ಪ್ರದೇಶದಲ್ಲೂ ಪ್ರತಿಭಟನೆ ನಡೆದಿದೆ.


