ಪಟನಾ(ಅ.18): ಚುನಾವಣೆ ವೇಳೆ ಜನರ ಅಭಿಪ್ರಾಯ ಪಡೆಯಲು ಪತ್ರಕರ್ತರು ಊರು ಊರು ಸುತ್ತುವುದು ಸಾಮಾನ್ಯ. ಬಿಹಾರ ವಿಧಾನಸಭಾ ಚುನಾವಣೆಯಲ್ಲೂ ಇದೇ ನಡೆಯುತ್ತಿದೆ. ಆದರೆ ಹೀಗೆ ಪ್ರಶ್ನೆ ಕೇಳಿದ ಪ್ರರ್ತಕರ್ತರೊಬ್ಬರಿಗೆ, ಮುಗ್ದ ಗ್ರಾಮಸ್ಥರೊಬ್ಬರು ನೀಡಿದ ಉತ್ತರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಆಗಿದ್ದೇನು?: ಖಾಸಗಿ ಸುದ್ದಿ ವಾಹಿನಿಯ ವರದಿಗಾರರೊಬ್ಬರು ಲಖಿಸರಾಯ್‌ಗೆ ತೆರಳಿ ಅಲ್ಲಿನ ಗ್ರಾಮಸ್ಥರೊಬ್ಬರಿಗೆ, ನಿಮ್ಮೂರಿಗೆ ವಿಕಾಸ್‌ (ಅಭಿವೃದ್ಧಿ) ತಲುಪಿದೆಯಾ? ಎಂದು ಪ್ರಶ್ನಿಸಿದ್ದಾರೆ. ಪಾಪ ಆ ವೃದ್ಧ ಗ್ರಾಮಸ್ಥ ವಿಕಾಸ್‌ ಎನ್ನುವ ಪದವನ್ನು ಅಭಿವೃದ್ಧಿ ಎಂಬುದರ ಬದಲಾಗಿ ಯಾರದ್ದೋ ಹೆಸರಿರಬೇಕು ಅಂದುಕೊಂಡು ‘ವಿಕಾಸ್‌? ಇಲ್ಲ ನಾನು ಊರಲ್ಲಿ ಇರಲಿಲ್ಲ, ನನಗೆ ಆರೋಗ್ಯ ಸರಿ ಇರಲಿಲ್ಲ, ವೈದ್ಯರ ಬಳಿ ಹೋಗಿದ್ದೆ’ ಎಂದು ಮುಗ್ಧವಾಗಿ ಉತ್ತರಿಸಿದ್ದಾರೆ.

ರೈತನ ಈ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಟೀಕಾಕಾರರಿಗೆ ಭರ್ಜರಿ ಆಹಾರದ ವಸ್ತುವಾಗಿದೆ. ಆ ಊರಿಗೆ ವಿಕಾಸ್‌ ಬಲು ಅಪರೂಪಕ್ಕೆ ಬರುತ್ತಿರಬೇಕು. ಹಾಗಾಗಿ ಪಾಪ ಅವರಿಗಾದರೂ ಹೇಗೆ ಗೊತ್ತಾದೀತು! ಎಂದು ಸಿಎಂ ನಿತೀಶ್‌ ಕುಮಾರ್‌ ಸರ್ಕಾರವನ್ನು ವ್ಯಂಗ್ಯವಾಡಿದ್ದಾರೆ.