ಪ್ರಪಂಚದ ಉದ್ವಿಗ್ನತೆಗೆ ಭಾರತದಲ್ಲಿ ಮಾತ್ರ ಪರಿಹಾರವಿದೆ ಹಾಗೂ ನಾವು ವಿಭಜಿತರಾದಾಗೆಲ್ಲ ದುರ್ಬಲಗೊಂಡಿದ್ದೇವೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇಂದಿನ ಯುವಜನತೆ ಸುಳ್ಳು-ನಿಜಗಳ ವ್ಯತ್ಯಾಸ ಅರಿಯುತ್ತಿಲ್ಲವಾದ್ದರಿಂದ ಒಟಿಟಿ ನಿಯಂತ್ರಣದ ಅಗತ್ಯವಿದೆ ಎಂದಿದ್ದಾರೆ.

ಇವತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ನಿರ್ಮಾಣವಾಗಿರುವ ಉದ್ವಿಗ್ನತೆಗೆ ಪರಿಹಾರ ಭಾರತದಲ್ಲಿ ಮಾತ್ರ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನಾವು ವಿಭಜಿತರಾದಾಗೆಲ್ಲ ದುರ್ಬಲಗೊಂಡಿದ್ದೇವೆ

ನಾಗ್ಪುರದಲ್ಲಿ ಮಂಗಳವಾರ (ಅ.20)ರಂದು ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್ ಅವರು, ನಾವು(ಭಾರತೀಯರು) ಯಾವಾಗೆಲ್ಲಾ ವಿಭಜಿತರಾಗಿದ್ದೇವೋ ಆಗೆಲ್ಲ ದುರ್ಬಲಗೊಂಡಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಭಾರತದ ಯುವಕರ ಕುರಿತು ಭಾಗವತ್ ಹೇಳಿದ್ದೇನು?

ಇದೇ ವೇಳೆ ಭಾರತದ ಯುವಜನತೆ ಬಗ್ಗೆ ಪ್ರಸ್ತಾಪಿಸಿದ ಭಾಗವತ್, ಇಂದಿನ ಹೊಸ ಪೀಳಿಗೆಯು ಹಲವು ಮೂಲಗಳಿಂದ ಮಾಹಿತಿಯನ್ನು ಸ್ವೀಕರಿಸುವಾಗ ಯಾವುದು ಸೂಕ್ತ, ಯಾವುದು ಸೂಕ್ತವಲ್ಲ, ಯಾವುದು ನಿಜ, ಯಾವುದು ಸುಳ್ಳು ಎಂಬುದರ ನಡುವೆ ವ್ಯತ್ಯಾಸವನ್ನು ಗುರುತಿಸದೆ ಎಲ್ಲವನ್ನೂ ಒಪ್ಪಿಕೊಳ್ಳುತ್ತದೆ ಎಂದು ಗಮನಸೆಳೆದರು. ಅಲ್ಲದೆ ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ (OTT) ಪ್ಲಾಟ್‌ಫಾರಂಗಳಲ್ಲಿ ನಿಯಮಾವಳಿಗಳನ್ನು ರೂಪಿಸುವ ಅಗತ್ಯವನ್ನೂ ಮುಖ್ಯವಾಗಿ ತಿಳಿಸಿದರು.

ಇಂದಿನ ಯುವಕರು ಎಲ್ಲವನ್ನೂ ಕಲಿಯಲು ಬಯಸ್ತಾರೆ. ಕಲಿಯುವ ಭರದಲ್ಲಿ ಅವರು ಯಾವುದು ತಪ್ಪು, ಯಾವುದು ಸರಿ ಎಂಬ ವ್ಯತ್ಯಾಸವನ್ನು ಅರಿಯದೆ ಎಲ್ಲವನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಅನೇಕ ದೇಶಗಳು ಸಾಮಾಜಿಕ ಜಾಲತಾಣಗಳು ಮತ್ತು ಒಟಿಟಿ (OTT) ಪ್ಲಾಟ್‌ಫಾರಂ ಕುರಿತು ನಿಯಂತ್ರಣಗಳನ್ನು ಜಾರಿಗೆ ತಂದಿವೆ. ನಮ್ಮ ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದರು.

ಸಂಘವು ನೂರು ವರ್ಷಗಳಿಂದ 'ಸ್ವ'ವನ್ನು ಜಾಗೃತಗೊಳಿಸಲು ಶ್ರಮಿಸಿದೆ

ಸಂಘವು ನೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಾರ್ಯವು 'ಸ್ವ'ವನ್ನು ಜಾಗೃತಗೊಳಿಸುವ ಗುರಿಯನ್ನು ಹೊಂದಿದೆ. ಇದು ಈ 'ಸ್ವ'ದ ಅಸ್ಮಿತೆ ಮತ್ತು ಇತಿಹಾಸದಲ್ಲಿ ಬೇರೂರಿರುವ, ಭಾರತವನ್ನು ಸಂಘಟಿಸುವ ಮತ್ತು ಸಬಲೀಕರಣಗೊಳಿಸುವ ಒಂದು ಪ್ರಯತ್ನವಾಗಿದೆ. ನಮ್ಮ ಗೌರವಾನ್ವಿತ ಪ್ರಾಂತ ಸಂಘಚಾಲಕರು ತಮ್ಮ ಆರಂಭಿಕ ನುಡಿಗಳಲ್ಲಿ 'ಪಂಚ ಪರಿವರ್ತನೆ'ಗಳ ಬಗ್ಗೆ ಪ್ರಸ್ತಾಪಿಸಿದರು ಅದರರ್ಥ; 'ಸ್ವಬೋಧ' (ತನ್ನ ಅಸ್ತಿತ್ವದ ಅರಿವು) ಜಾಗೃತಿ ಮತ್ತು 'ಸ್ವದೇಶಿ' (ಸ್ವಾವಲಂಬಿ ಜೀವನಶೈಲಿ) ಪಾಲನೆ. ಈ 'ಸ್ವ'ದ ಪರಿಕಲ್ಪನೆಯು ನಮ್ಮ ಸಂವಿಧಾನದ ಪೀಠಿಕೆಯಲ್ಲಿಯೂ ಪ್ರತಿಧ್ವನಿಸುತ್ತದೆ. ಅಲ್ಲಿ ನಾವು ನಮ್ಮನ್ನು 'ಭಾರತದ ಜನಗಳಾದ ನಾವು' (We, the People of India) ಎಂದು ಕರೆದುಕೊಂಡಿದ್ದೇವೆ' ಎಂದು ವಿವರಿಸಿದರು.

ಮೋಹನ್ ಭಾಗವತ್ ಭಾಷಣದ ವಿಡಿಯೋ ಇಲ್ಲಿದೆ:

Scroll to load tweet…

ಈ ಒಗ್ಗಟ್ಟಿನ ಭಾವನೆ ನಮ್ಮ ಈ 'ಸ್ವತ್ವ', ಈ ಭಾವನಾತ್ಮಕ ಬಂಧ ಇದೇ ಕಾರಣದಿಂದಾಗಿ ನಮ್ಮಂತಹ ವೈವಿಧ್ಯಮಯ ದೇಶವು ಪ್ರಾಚೀನ ಕಾಲದಿಂದಲೂ ಒಂದು ರಾಷ್ಟ್ರವಾಗಿ, ಒಂದು ಸಮಾಜವಾಗಿ ಮತ್ತು ಒಂದೇ ಅಸ್ತಿತ್ವವಾಗಿ ಉಳಿದುಕೊಂಡು ಬರಲು ಸಾಧ್ಯವಾಗಿದೆ. ನಮ್ಮ ಪೂರ್ವಜರಿಗೆ ಸಮಸ್ತ ಅಸ್ತಿತ್ವದ ಏಕತೆಯ ಬಗ್ಗೆ ಆಳವಾದ ಅರಿವಿತ್ತು; ಈ ಅರಿವಿನ ಆಧಾರದ ಮೇಲೆ, ಅವರು ವಿವಿಧ ಹಂತಗಳನ್ನು ಒಳಗೊಂಡ ಒಂದು ಪ್ರಬುದ್ಧ ತತ್ತ್ವಜ್ಞಾನವನ್ನು ರೂಪಿಸಿದರು. ಇದು ಜನರಲ್ಲಿ ಪರಸ್ಪರ ಸಂಬಂಧ ಮತ್ತು ಒಡೆತನದ (ತಮ್ಮವರೆಂಬ) ಭಾವನೆಯನ್ನು ಬೆಳೆಸಿತು. ನಾವು ಯಾವಾಗ ಈ ಸಂಗತಿಯನ್ನು ಮರೆತೇವೆಯೋ, ಆಗಲೇ ನಮ್ಮ ಅವನತಿ ಪ್ರಾರಂಭವಾಯಿತು ಎಂದರು.