ನವದೆಹಲಿ (ಮಾ. 31): ಭಾರತೀಯ ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿ ಸಾಲ ಮಾಡಿ, ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿದ್ದ ಮದ್ಯ ದೊರೆ ವಿಜಯ್ ಮಲ್ಯ ತಾನು ಪಡೆದ ಸಾಲವನ್ನು ಸಂಪೂರ್ಣವಾಗಿ ಮರುಪಾತಿಸಲು ಸಿದ್ಧನಿದ್ದೇನೆಂದು ತಿಳಿಸಿದ್ದಾರೆ. ದೇಶದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ದು, ಇಂತ ಸಂದರ್ಭದಲ್ಲಿ ನಿಮಗೆ ಈ ಹಣ ಉಪಯೋಗಕ್ಕೆ ಬೀಳಬಹುದು. ಹೀಗಾಗಿ ನಾನು ಪಡೆದ ಸಾಲವನ್ನು ದಯವಿಟ್ಟು ಸ್ವೀಕರಿಸಿ ಎಂದು ಮಲ್ಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಮಾಡಿದ್ದಾರೆ.

ಹೌದು ಈ ಸಂಬಂಧ ಟ್ವೀಟ್ ಮಾಡಿರುವ ಮಲ್ಯ ದೊರೆ ವಿಜಯ್ ಮಲ್ಯ ನಾನು ಪದೇ ಪದೇ ಭಾರತದ ಬ್ಯಾಂಕ್‌ಗಳಿಂದ ಕೆಎಫ್‌ಎಯಿಂದ ಸಾಲ ಪಡೆದ ಮೊತ್ತದ ಶೇ. 100ರಷ್ಟು ಪಾವತಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದೇನೆ. ಆದರೆ ಬ್ಯಾಂಕ್‌ಗಳಾಗಲೀ, ಜಾರಿ ನಿರ್ದೇಶನಾಲಯವಾಗಲಿ ಈ ಕುರಿತು ಗಮನ ಹರಿಸುತ್ತಿಲ್ಲ. ಮುಟ್ಟುಗೋಲು ಹಾಕಿಕೊಂಡಿರುವ ನನ್ನ ಆಸ್ತಿಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಿಲ್ಲ. ಹೀಗಾಗಿ ಹಣಕಾಸು ಸಚಿವರು ಇಂತಹ ಸಂಕಷ್ಟದ ಸಮಯದಲ್ಲಿ ನನ್ನ ಮನವಿಯನ್ನು ಆಲಿಸಬೇಕೆಂದು ಮನವಿ ಮಾಡಿದ್ದಾರೆ. 

ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಗಾಗಿ ಭಾರತದ ವಿವಿಧ ಬ್ಯಾಂಕುಗಳಿಂದ ವಿಜಯ ಮಲ್ಯ ಸುಮಾರು 9,000 ಕೋಟಿ ರೂ. ಸಾಲ ಪಡೆದಿದ್ದರು. ಅಲ್ಲದೆ, ಆ ಹಣವನ್ನು ತೀರಿಸಲಾಗದೆ ಲಂಡನ್‌ನಲ್ಲಿ ತಲೆ ಮರೆಸಿಕೊಂಡಿದ್ದರು. ಆದರೆ, ಭಾರತ ಸರ್ಕಾರ ಅವರನ್ನು ವಾಪಸ್‌ ದೇಶಕ್ಕೆ ಕರೆತರಲು ಸಾಕಷ್ಟು ಪ್ರಯತ್ನ ನಡೆಸಿದ ಬೆನ್ನಿಗೆ ವಿಜಯ ಮಲ್ಯ ತಾನು ಸಾಲವಾಗಿ ಪಡೆದ ಸಂಪೂರ್ಣ ಹಣವನ್ನು ಬಡ್ಡಿ ಸಮೇತ ಮರುಪಾವತಿ ಮಾಡಲು ಸಿದ್ದನಿದ್ದೇನೆ ಎಂದು ಒಂದು ವರ್ಷದಿಂದ ಸತತವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರ ಈ ಮನವಿಯನ್ನು ಈವರೆಗೆ ಸ್ವೀಕರಿಸಿಲ್ಲ. ಇದಕ್ಕೆ ನಿಖರ ಕಾರಣವನ್ನೂ ತಿಳಿಸಿಲ್ಲ.