ಮಹಾನಗರ ಪಾಲಿಕೆ ಚುನಾವಣೆಗೆ ಸಜ್ಜಾಗುತ್ತಿರುವ ದೆಹಲಿಯ ಆಮ್ ಆದ್ಮಿ ಪಾರ್ಟಿಗೆ ಮತ್ತೊಂದು ಹಿನ್ನಡೆಯಾಗಿದೆ. ದೆಹಲಿಯಲ್ಲಿ ಸರ್ಕಾರಿ ಶಾಲಾ ಕೊಠಡಿ ನಿರ್ಮಣದಲ್ಲಿ 1,300 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ವಿಜಿಲೆನ್ಸ್ ನಿರ್ದೇಶನಾಲಯ ಹೇಳಿದೆ. ಇಷ್ಟೇ ಅಲ್ಲ ತನಿಖೆಗೆ ಆದೇಶಿಸಿದೆ.

ನವದೆಹಲಿ(ನ.25): ಮಹಾನಗರ ಪಾಲಿಕೆ ಚುನಾವಣೆಗೆ ದೆಹಲಿ ಸಜ್ಜಾಗಿದೆ. ಆಮ್ ಆದ್ಮಿ ಪಾರ್ಟಿ ಹಾಗೂ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಇದರ ನಡುವೆ ಆಪ್‌ಗೆ ಸಂಕಷ್ಟ ಎದುರಾಗಿದೆ. ದೆಹಲಿಯಲ್ಲಿ ಸರ್ಕಾರಿ ಶಾಲಾ ಕೊಠಡಿ ನಿರ್ಮಾಣದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ವಿಜಿಲೆನ್ಸ್ ನಿರ್ದೇಶನಾಲಯ ಹೇಳಿದೆ. 1,300 ಕೋಟಿ ರೂಪಾಯಿ ಅಕ್ರಮ ನಡೆದಿದೆ. ಬಾರಿ ಅಕ್ರಮದ ವಾಸನೆ ಬರುತ್ತಿರುವ ಕಾರಣ ವಿಶೇಷ ತನಿಖಾ ಸಂಸ್ಥೆಯಿಂದ ಈ ಹಗರಣದ ತನಿಖೆ ನಡೆಸಲು ವಿಜಿಲೆನ್ಸ್ ನಿರ್ದೇಶನಾಲಯ ಆದೇಶಿಸಿದೆ. ದೆಹಲಿ ಸರ್ಕಾರ ನಿರ್ಮಿಸಿದ 2,400 ಶಾಲಾ ಕೊಠಡಿ ನಿರ್ಮಾಣದಲ್ಲಿ ಅಕ್ರಮ ಎಸೆಗಿರುವುದು ವರದಿಯಲ್ಲಿ ಉಲ್ಲೇಖಿಸಿದೆ. ಈ ಕುರಿತು ಸಂಪೂರ್ಣ ತನಿಖೆಯ ಅಗತ್ಯವಿದೆ ಎಂದು ವಿಜೆಲೆನ್ಸ್ ಹೇಳಿದೆ. ತನಿಖಾ ವರದಿಯನ್ನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಲು ವಿಜಿಲೆನ್ಸ್ ಸೂಚಿಸಿದೆ.

ವಿಜಿಲೆನ್ಸ್ ನಿರ್ದೇಶನಾಲಯದ ಆದೇಶ ಹೊರಬೀಳುತ್ತಿದ್ದಂತೆ ಆರವಿಂದ್ ಕೇಜ್ರಿವಾಲ್ ಹಾಗೂ ಆಪ್ ವಿರುದ್ದ ಬಿಜೆಪಿ ಮುಗಿಬಿದ್ದಿದೆ. ಶಾಲಾ ಮಕ್ಕಳ ಶಿಕ್ಷಣದಲ್ಲಿ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರ ನಡೆಸಿದೆ. ಮಕ್ಕಳ ವಿದ್ಯಭ್ಯಾಸದಲ್ಲಿ ಹಣ ಕೊಳ್ಳೆ ಹೊಡಿದಿದೆ ಎಂದು ಆರೋಪಿಸಿದೆ. ವಿಜಿಲೆನ್ಸ್ ವರದಿಯಲ್ಲಿ ಆಮ್ ಆದ್ಮಿ ಅಕ್ರಮಗಳು ಪತ್ತೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ.

ಮಸಾಜ್‌ ಅಷ್ಟೇ ಅಲ್ಲ..! ಜೈಲಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಸಲಾಡ್‌, ಹಣ್ಣು, ಭರ್ಜರಿ ಔತಣಕೂಟ..!

ಅರವಿಂದ್ ಕೇಜ್ರಿವಾಲ್ ಟೆಂಡರ್ ಕರೆಯದೇ ಶಾಲಾ ಕೊಠಡಿ ನಿರ್ಮಾಣ ಗುತ್ತಿಗೆಯನ್ನು ತಮ್ಮ ಆಪ್ತರ ಕಂಪನಿಗೆ ನೀಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಪ್ರತಿ ಹಂತದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಬೇಕಾದ ಹಾಗೆ ಮಾಡಿಕೊಂಡಿದ್ದಾರೆ ಎಂದು ಗೌರವ್ ಭಾಟಿಯಾ ಆರೋಪಿಸಿದ್ದಾರೆ.

 ಆಪ್‌ನಿಂದ ದಿಲ್ಲಿ ಪಾಲಿಕೆ ಟಿಕೆಟ್‌ .80 ಲಕ್ಷಕ್ಕೆ ಸೇಲ್‌?
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಟಿಕೆಟ್‌ಗಳನ್ನು ಆಮ್‌ಆದ್ಮಿ ಪಕ್ಷ ತಲಾ 80 ಲಕ್ಷ ರು.ಗಳಿಗೆ ಮಾರಾಟ ಮಾಡುತ್ತಿದೆ ಎಂದು ಹೇಳಲಾದ ರಹಸ್ಯ ಕಾರ್ಯಾಚರಣೆಯ ವಿಡಿಯೋವೊಂದನ್ನು ಬಿಜೆಪಿ ಸೋಮವಾರ ಬಿಡುಗಡೆ ಮಾಡಿದೆ. ಸ್ವತಃ ಆಮ್‌ಆದ್ಮಿ ಪಕ್ಷದ ಕಾರ್ಯಕರ್ತೆ ಬಿಂದು ಎನ್ನುವವರು, ಟಿಕೆಟ್‌ ಸಂಬಂಧ ಪಕ್ಷದ ನಾಯಕರ ಜೊತೆ ಹಣಕಾಸಿನ ಮಾತುಕತೆ ನಡೆಸಿದ ಬಗ್ಗೆ ರಹಸ್ಯ ಕ್ಯಾಮೆರಾ ಬಳಸಿ ಸೆರೆಹಿಡಿದಿದ್ದು, ಅದನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಆಪ್‌ನಿಂದಲೇ ಆತಂಕ, ನಾಮಪತ್ರ ಹಿಂಪಡೆದ ಅಭ್ಯರ್ಥಿ ಜರಿವಾಲ ಉತ್ತರಕ್ಕೆ ಕೇಜ್ರಿವಾಲ್‌ ಕಂಗಾಲು!

ವಿಡಿಯೋದಲ್ಲಿ ರೋಹಿಣಿ-ಡಿ’ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿಂದು ಅವರು, ಆಪ್‌ ನಾಯಕರಾದ ಆರ್‌.ಆರ್‌.ಪಠಾನಿಯಾ, ಪುನೀತ್‌ ಗೋಯಲ್‌ ಜೊತೆ ಟಿಕೆಟ್‌ ಪಡೆಯಲು ನೀಡಬೇಕಾದ ಮೊತ್ತದ ಬಗ್ಗೆ ಮಾತನಾಡುತ್ತಿರುವ ದೃಶ್ಯಗಳಿವೆ. ಪಠಾನಿಯಾ ಮತ್ತು ಗೋಯಲ್‌, ಇಬ್ಬರೂ ಆಪ್‌ನ ಟಿಕೆಟ್‌ ಹಂಚಿಕೆಗೆ ನೇಮಕವಾಗಿರುವ ಆಪ್‌ ಸಚಿವರಾದ ಗೋಪಾಲ್‌ ರಾಯ್‌, ಶಾಸಕರಾದ ದುರ್ಗೇಶ್‌ ಪಾಠಕ್‌, ಸೌರಭ್‌ ಭಾರದ್ವಾಜ್‌, ಆದಿಲ್‌ ಖಾನ್‌ ಮತ್ತು ಅತಿಶಿ ಜೊತೆ ನಂಟು ಹೊಂದಿದ್ದಾರೆ. ಮತ್ತೊಂದೆಡೆ ಸ್ಟಿಂಗ್‌ ಮಾಡಿದ್ದ ಬಿಂದು ಮಾತನಾಡಿ, ‘ಆಪ್‌ನ ಟಿಕೆಟ್‌ಗಳನ್ನು ಶ್ರೀಮಂತರಿಗೆ ಮಾರಿಕೊಳ್ಳಲಾಗುತ್ತಿದೆ. ಪಕ್ಷದ ತಳಮಟ್ಟದ ಕಾರ್ಯಕರ್ತರಿಗೆ ಯಾವುದೇ ಮಹತ್ವ ನೀಡಲಾಗುತ್ತಿಲ್ಲ. ಈ ಬಗ್ಗೆ ದುರ್ಗೇಶ್‌ ಪಾಠಕ್‌ಗೆ ದೂರು ನೀಡಿದರೂ ಪ್ರಯೋಜವಾಗಿಲ್ಲ. ಇಲ್ಲಿ ಒಬ್ಬರು ಇಬ್ಬರಲ್ಲ, ಕೆಳಗಿನಿಂದ ಮೇಲಿನವರೆಗೆ ಎಲ್ಲರೂ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.