ಜಮ್ಮು[ಫೆ.10]: ದೇಶದ ಅತೀ ಶ್ರೀಮಂತ ‘ತಿರುಪತಿ ವೆಂಕಟೇಶ್ವರ’ ಸ್ವಾಮಿ ದೇವಸ್ಥಾನ ನಿರ್ವಹಣೆ ಮಾಡುವ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಜಮ್ಮುವಿನಲ್ಲೂ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಿಸುವ ಯೋಜನೆಗೆ ಚಾಲನೆ ನೀಡಿದೆ. ದೇವಸ್ಥಾನ ನಿರ್ಮಾಣಕ್ಕೆ ಸೂಕ್ತ ಸ್ಥಳ ಪರಿಶೀಲನೆ ನಡೆಸಲು ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ಸೇರಿ ಇನ್ನಿತರ ಅಧಿಕಾರಿಗಳ ತಂಡ ಜಮ್ಮುವಿಗೆ ಭೇಟಿ ನೀಡಿ, ವರದಿ ತಯಾರಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ದೇಶದ ಪ್ರಮುಖ ನಗರಗಳಾದ ಮುಂಬೈ, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿ ಹಾಗೂ ಜಮ್ಮು-ಕಾಶ್ಮೀರ ಸೇರಿದಂತೆ ಇನ್ನಿತರ ಭಾಗಗಳಲ್ಲೂ ಶ್ರೀ ವೆಂಕಟೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಟಿಟಿಡಿ ನಿರ್ಧರಿಸಿತ್ತು. ಅದರ ಭಾಗವಾಗಿ ದೇವಸ್ಥಾನ ನಿರ್ಮಾಣದ ಪ್ರಸ್ತಾವನೆಗೆ ಒಪ್ಪಿರುವ ಜಮ್ಮು ಸರ್ಕಾರ, ದೇವಸ್ಥಾನ ನಿರ್ಮಾಣಕ್ಕೆ 7 ಸ್ಥಳಗಳನ್ನು ಗುರುತುಪಡಿಸಿತ್ತು. ಈ ಪೈಕಿ ನಾಲ್ಕು ಸ್ಥಳಗಳನ್ನು ಅಂತಿಮಗೊಳಿಸಲಾಗಿದೆ. ಇವುಗಳ ಪೈಕಿ ಸೂಕ್ತ ಜಾಗದಲ್ಲಿ ದೇವಾಲಯ ನಿರ್ಮಿಸಲಾಗುತ್ತದೆ ಎಂದು ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ತಿಳಿಸಿದ್ದಾರೆ.

ಅಲ್ಲದೆ, ವೆಂಕಟೇಶ್ವರ ಸನ್ನಿಧಿ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರವೂ ಈಗಾಗಲೇ ಮುಂಬೈನ ಬಾಂದ್ರಾದಲ್ಲಿ ಜಮೀನನ್ನು ಹಂಚಿಕೆ ಮಾಡಿದ್ದು, 30 ಕೋಟಿ ರು. ವೆಚ್ಚದಲ್ಲಿ ಇಲ್ಲಿ ವೈಭವೋಪೇತ ದೇವಸ್ಥಾನ ತಲೆ ಎತ್ತಲಿದೆ.