Asianet Suvarna News Asianet Suvarna News

ಗ್ಯಾನವಾಪಿ ಮಸೀದಿ ಸಮೀಕ್ಷೆ ವಿರುದ್ಧ ಹೈಕೋರ್ಟ್‌ಗೆ ಮಸೀದಿ ಸಮಿತಿ ಮೇಲ್ಮನವಿ

ವಾರಾಣಸಿಯ ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸರ್ವೇಕ್ಷಣೆ ವಿರುದ್ಧ ಮುಸ್ಲಿಂ ಸಮಿತಿ, ಮಂಗಳವಾರ ಅಲಹಾಬಾದ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಸರ್ವೇಕ್ಷಣೆ ನಡೆಸುವಂತೆ ವಾರಾಣಸಿ ಜಿಲ್ಲಾ ಕೋರ್ಟ್ ನೀಡಿದ್ದ ಆದೇಶವನ್ನು ಅದು ಪ್ರಶ್ನಿಸಿದೆ.

Varanasi Masjid Committee Appeal to High Court against Gnanavapi Masjid Survey akb
Author
First Published Jul 26, 2023, 8:47 AM IST

ಪ್ರಯಾಗ್‌ರಾಜ್‌ (ಉ.ಪ್ರ.): ವಾರಾಣಸಿಯ ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸರ್ವೇಕ್ಷಣೆ ವಿರುದ್ಧ ಮುಸ್ಲಿಂ ಸಮಿತಿ, ಮಂಗಳವಾರ ಅಲಹಾಬಾದ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಸರ್ವೇಕ್ಷಣೆ ನಡೆಸುವಂತೆ ವಾರಾಣಸಿ ಜಿಲ್ಲಾ ಕೋರ್ಟ್ ನೀಡಿದ್ದ ಆದೇಶವನ್ನು ಅದು ಪ್ರಶ್ನಿಸಿದೆ. ಮಸೀದಿಯ ಮೇಲುಸ್ತುವಾರಿ ಹೊತ್ತಿರುವ ಅಂಜುಮನ್‌ ಇಂತೆಜಾಮಿಯಾ ಮಸೀದಿ ಸಮಿತಿ ವಕೀಲ ಎಸ್‌ಎಫ್‌ಎ ನಖ್ವಿ ಮೇಲ್ಮನವಿ ಸಲ್ಲಿಸಿ, ಸಮೀಕ್ಷೆಯನ್ನು ವಿರೋಧಿಸಿ ವಾದ ಮಂಡಿಸಿದರು. ಬಳಿಕ ಕೋರ್ಟು ಇಂದಿಗೆ ವಿಚಾರಣೆ ಮುಂದೂಡಿದೆ. ಇತ್ತೀಚೆಗೆ ಹಿಂದೂ ಪಂಗಡ ಸಲ್ಲಿಸಿದ್ದ ಅರ್ಜಿ ಮನ್ನಿಸಿ, ಶಿವ ದೇಗುಲ ಬೀಳಿಸಿ  ಗ್ಯಾನವಾಪಿ ಮಸೀದಿಯನ್ನು ಕಟ್ಟಲಾಗಿದೆಯೆ ಎಂಬುದನ್ನು ಅರಿಯಲು ವೈಜ್ಞಾನಿಕ ಸಮೀಕ್ಷೆಗೆ ಜಿಲ್ಲಾ ಕೋರ್ಚ್‌ ಆದೇಶಿಸಿತ್ತು. ಆದರೆ ಜೂ.26ರವರೆಗೆ ಈ ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂಕೋರ್ಟ್, ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಲು ಮಸೀದಿ ಸಮಿತಿಗೆ ಸೂಚಿಸಿತ್ತು.

ಕಾಶಿಯ ಪ್ರಸಿದ್ಧ ವಿಶ್ವನಾಥ ದೇಗುಲದ (vishwanat Temple) ಪಕ್ಕದಲ್ಲೇ ಇರುವ ಗ್ಯಾನವಾಪಿ ಮಸೀದಿಯನ್ನು ದೇಗುಲದ ಮೇಲೆ ನಿರ್ಮಾಣ ಮಾಡಲಾಗಿದೆಯೇ ಎಂಬುದನ್ನು ಶೋಧಿಸಲು ಸೋಮವಾರ (ಜುಲೈ 24) ಸಮೀಕ್ಷೆ ಆರಂಭವಾದ ನಾಲ್ಕೇ ತಾಸಿನಲ್ಲಿ ಸುಪ್ರೀಂಕೋರ್ಟ್ (Supreme Court) ಇದಕ್ಕೆ ತಡೆಯೊಡ್ಡಿದೆ. ಸಮೀಕ್ಷೆಗೆ ಆದೇಶಿಸಿರುವ ವಾರಾಣಸಿ ಕೋರ್ಟ್ ಕ್ರಮದ ವಿರುದ್ಧ ಮೇಲ್ಮನವಿ ಸಲ್ಲಿಸಲು ಪ್ರತಿವಾದಿಗಳಿಗೆ ಅವಕಾಶ ಕೊಡಬೇಕು ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯ, ಬುಧವಾರ ಸಂಜೆ 5ರವರೆಗೂ (ಜುಲೈ 26 ಇಂದು ಸಂಜೆ 5 ರವರೆಗೆ) ಸಮೀಕ್ಷೆ ಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂದು ತಾಕೀತು ಮಾಡಿತ್ತು.

ವಾರಾಣಸಿ ಕೋರ್ಟ್ ಜು.21ರ ಆದೇಶದಂತೆ ಸೋಮವಾರ ಬೆಳಗ್ಗೆ 7 ರಿಂದಲೇ 30 ಮಂದಿಯ ತಂಡದಿಂದ ಸಮೀಕ್ಷೆ ಆರಂಭವಾಗಿತ್ತಾದರೂ, ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಅದನ್ನು ಬೆಳಗ್ಗೆ 11ರ ವೇಳೆಗೆ ಸ್ಥಗಿತಗೊಳಿಸಲಾಗಿತ್ತು. ಈ ಮಧ್ಯೆ, ವಾರಾಣಸಿ ಕೋರ್ಟ್ ಆದೇಶದ ವಿರುದ್ಧ ಅರ್ಜಿದಾರರು ಅಲಹಾಬಾದ್‌ ಹೈಕೋರ್ಟ್ ಮೊರೆ ಹೋಗಬಹುದು. ಹಾಗೂ ಬುಧವಾರ ಸಂಜೆ 5ರೊಳಗೆ ವಿಚಾರಣೆ ಆರಂಭಿಸಬೇಕು ಎಂದು ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ಹೈಕೋರ್ಟ್‌ನಲ್ಲಿ ಇಂದು ನಡೆಯುವ ವಿಚಾರಣೆಯ ಮೇಲೆ ಗ್ಯಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ (Scientific survey) ಭವಿಷ್ಯ ನಿರ್ಧಾರವಾಗಲಿದೆ.

ಗ್ಯಾನವಾಪಿಯಲ್ಲಿ ಶಿವ ಮಂದಿರ ಕಟ್ಟುವ ದಿನ ದೂರವಿಲ್ಲ, ಮುಸ್ಲಿಂ ಅರ್ಜಿ ವಜಾ ಬೆನ್ನಲ್ಲೇ ವಕೀಲರ ಹೇಳಿಕೆ!

ಏನಿದು ಹೈಡ್ರಾಮಾ?:

ದೇಗುಲ ಇದ್ದ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬ ಅರ್ಜಿಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಅದರಲ್ಲಿನ ಸತ್ಯಾಂಶ ಪರಿಶೀಲಿಸಲು ವೈಜ್ಞಾನಿಕ ಸಮೀಕ್ಷೆ ನಡೆಸುವಂತೆ ವಾರಾಣಸಿ ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್‌ ಅವರು ಶುಕ್ರವಾರ (ಜುಲೈ 21) ಸಂಜೆ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಅಗತ್ಯವಿರುವೆಡೆ ನೆಲ ಬಗೆಯಲೂ ಅನುಮತಿ ಕೊಟ್ಟಿದ್ದರು. ಆದರೆ, ಶಿವಲಿಂಗ ಎಂದು ಹಿಂದು ಪ್ರತಿವಾದಿದಾರರು ಹೇಳುತ್ತಿರುವ ಸ್ಥಳವನ್ನು ಸಂರಕ್ಷಿಸುವಂತೆ ಈ ಹಿಂದೆಯೇ ಸುಪ್ರೀಂಕೋರ್ಟ್ ಹೇಳಿದ್ದರಿಂದ ಅಲ್ಲಿ ಸಮೀಕ್ಷೆ ನಡೆಯುವ ಯಾವುದೇ ಸಾಧ್ಯತೆಯೂ ಇರಲಿಲ್ಲ.

ಈ ನಡುವೆ, ಪುರಾತತ್ವ ಸರ್ವೇಕ್ಷಣಾ ಇಲಾಖೆಯ (Archaeological Survey Department) ತಂಡ ವಾರಾಣಸಿ ತಲುಪಿದ್ದು, ಸೋಮವಾರ (ಜುಲೈ 24 ರಂದು) ಬೆಳಗ್ಗೆ 7ರಿಂದ ಸಮೀಕ್ಷೆ ಆರಂಭವಾಗಲಿದೆ ಎಂದು ವಾರಾಣಸಿ ಜಿಲ್ಲಾಧಿಕಾರಿ ರಾಜಲಿಂಗಂ ಅವರು ಭಾನುವಾರ ಸಂಜೆ ಹೇಳಿದ್ದರು. ಅದರಂತೆ 30 ಮಂದಿಯ ತಂಡ ಗ್ಯಾನವಾಪಿ ಮಸೀದಿಯನ್ನು ಸೋಮವಾರ ಬೆಳಗ್ಗೆ ಪ್ರವೇಶಿಸಿ  ಸಮೀಕ್ಷೆಗೆ ಸಿದ್ಧತೆ ಆರಂಭಿಸಿತ್ತು.

ಈ ನಡುವೆ, ಗ್ಯಾನವಾಪಿ ಮಸೀದಿಯ ಅಂಜುಮನ್‌ ಇಂತೇಜಾಮಿಯಾ ಮಸೀದಿ ಸಮಿತಿ ಸುಪ್ರೀಂಕೋರ್ಟ್ ಮೆಟ್ಟಿಲೇರಿ, ಈ ಬಗ್ಗೆ ತುರ್ತು ವಿಚಾರಣೆ ನಡೆಸುವಂತೆ ಸೋಮವಾರ ಮೊರೆ ಇಟ್ಟಿತು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಶುಕ್ರವಾರ ಸಂಜೆ 4.30ಕ್ಕೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿದೆ. ಸೋಮವಾರ ಸಮೀಕ್ಷಾ ಕಾರ್ಯ ಆರಂಭವಾಗಿದೆ. ಹೀಗಾಗಿ ಅರ್ಜಿದಾರರು ಸೂಕ್ತ ಪರಿಹಾರ ಪಡೆಯಲು ಹೈಕೋರ್ಟ್ ಮೊರೆ ಹೋಗುವುದಕ್ಕೆ ಒಂದಷ್ಟು ಕಾಲಾವಕಾಶ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಔರಂಗಜೇಬ್‌ ಕ್ರೂರಿ ಆಗಿರಲಿಲ್ಲ, ವಿಶ್ವನಾಥ ಮಂದಿರ ಕೆಡವಲಿಲ್ಲ: ಕಾಶಿ ಗ್ಯಾನವಾಪಿ ಮಸೀದಿ ಸಮಿತಿ

ಅಲ್ಲದೆ ಜು.26ರ ಸಂಜೆ 5 ಗಂಟೆವರೆಗೆ ವಾರಾಣಸಿ ಜಿಲ್ಲಾ ನ್ಯಾಯಾಧೀಶರ ಆದೇಶವನ್ನು ಜಾರಿಗೆ ತರಬಾರದು. ಅಷ್ಟರೊಳಗೆ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರಿದ್ದ ತ್ರಿಸದಸ್ಯ ಪೀಠ ಹೇಳಿತು. ಅಲ್ಲದೆ, ಸಮೀಕ್ಷೆಯನ್ನು ತಕ್ಷಣ ಸ್ಥಗಿತಗೊಳಿಸಲು ಸೂಚಿಸುವಂತೆ ಉತ್ತರಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾಗೆ ಸೂಚಿಸಿತು. ಸೂಚನೆ ಬಂದ ಹಿನ್ನೆಲೆಯಲ್ಲಿ ಗ್ಯಾನವಾಪಿ ಮಸೀದಿಯಲ್ಲಿನ ಸಮೀಕ್ಷೆ ಸ್ಥಗಿತವಾಯಿತು.

Follow Us:
Download App:
  • android
  • ios