ಪ್ರೇಮಿಗಳ ದಿನಾಚರಣೆ ಜೋಶ್‌ನಲ್ಲಿ ಗಂಡನ ಜೊತೆ ರೋಸ್ ಡೇ, ಪತಿ ಹಾಗೂ ಪತ್ನಿ ರೋಸ್ ಡೇ ಆಚರಿಸಿದರೆ ಪೊಲೀಸರಿಗೆ ಏನು ಕಷ್ಟ? ಆದರೆ ಗಂಡನಿಗೆ ರೋಸ್ ಜೊತೆಗೆ ನೀಡಿದ ವಸ್ತುವಿನ ಪೊಲೀಸರ ಕಣ್ಣು ಬಿದ್ದಿದೆ. 

ಪಾಟ್ನಾ (ಫೆ.13) ವ್ಯಾಲೆಟೈನ್ಸ್ ಡೇ ಸಂಭ್ರಮಕ್ಕೆ ವಿಶ್ವವೇ ಸಜ್ಜಾಗಿದೆ. ಫೆಬ್ರವರಿ 14ರಂದು ಪ್ರೇಮಿಗಳ ದಿನಾಚರಣೆ. ಇದಕ್ಕೂ ಮೊದಲು ಹಗ್ ಡೇ, ಕಿಸ್ ಡೇ, ರೋಸ್ ಡೇ ಸೇರಿದಂತೆ ಹಲವು ಆಚರಣೆಗಳಿವೆ. ಪ್ರೇಮಿಗಳು, ಪ್ರಣಯ ಹಕ್ಕಿಗಳಂತೆ ಸುತ್ತಾಡುವ ಜೋಡಿಗಳು ವ್ಯಾಲಟೈನ್ಸ್ ಡೇ ಅದ್ದೂರಿಯಾಗಿ ಆಚರಿಸುತ್ತಾರೆ. ಹೀಗೆ ಗಂಡ ಹೆಂಡತಿ ಪ್ರೀತಿಯಿಂದ ಪ್ರೇಮಿಗಳ ದಿನಾಚರಣೆ ಆಚರಿಸಲು ಮುಂದಾಗಿದ್ದಾರೆ. ಈ ಪೈಕಿ ರೋಸ್ ಡೇ ದಿನ, ಗಂಡನಿಗೆ ರೋಸ್ ನೀಡಿ ಆಚರಿಸಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ನೋಡಿ ವಿಡಿಯೋ ವೈರಲ್ ಆಗಿದೆ. ಇದರ ಹಿಂದೆ ಪೊಲೀಸರು ಬಂದಿದ್ದಾರೆ. ವಿಡಿಯೋ ಡಿಲೀಟ್ ಮಾಡಿದರೂ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ನಡೆದಿದೆ.

ಗಂಡ ಹೆಂಡತಿ ರೋಸ್ ಡೇ ಆಚರಿಸಿದರೆ ಕೇಸ್ ಯಾಕೆ?

ಪ್ರೇಮಿಗಳ ದಿನಾಚರಣೆ ವೇಳೆ ಕೆಲ ಸಂಘಟನೆಗಳು ಜೋಡಿಗಳಾಗಿ ಕಂಡರೆ ಮದುವೆ ಮಾಡಿಸುತ್ತೇವೆ ಎಂಬ ಎಚ್ಚರಿಕೆ ನೀಡಿದ್ದು ನೋಡಿದ್ದೇವೆ. ಆದರೆ ಇಲ್ಲಿ ಗಂಡ ಹೆಂಡತಿ ರೋಸ್ ನೀಡಿ ಪ್ರೇಮಿಗಳ ದಿನಾಚರಣೆ ಮಾಡಿದರೆ ಪೊಲೀಸರು ಪ್ರಕರಣ ದಾಖಲಿಸಿದ್ದು ಯಾಕೆ ಅನ್ನೋ ಪ್ರಶ್ನೆಗೆ ವಿಡಿಯೋದಲ್ಲೇ ಉತ್ತರ ಇದೆ. ಕಾಂಚನ್ ದೇವಿ ಅನ್ನೋ ಮಹಿಳೆ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿ ಕಾಂಚನ್ ದೇವಿ ತನ್ನ ಪತಿಗೆ ಗುಲಾಬಿ ಹೂವಿನ ಜೊತೆಗೆ ಒಂದು ಗ್ಲಾಸ್ ಮದ್ಯ ನೀಡಿದ್ದಾರೆ. ಇತ್ತ ಗಂಡ ಕೂಡ ಈ ರೋಸ್ ಹಾಗೂ ಮದ್ಯ ಪ್ರೀತಿಯಿಂದ ತೆಗೆದುಕೊಂಡಿದ್ದಾನೆ. ಮದ್ಯದ ಕ್ಲಾಸ್ ಜೊತೆಗೆ ಮದ್ಯದ ಬಾಟಲಿ ಕೂಡ ಕಾಂಚನ್ ದೇವಿ ಹಿಡಿದು ವಿಡಿಯೋಗೆ ಪೋಸ್ ನೀಡಿದ್ದಾರೆ.

ಗಂಡ ಹೆಂಡತಿ ಮದ್ಯ ಸೇವಿಸಿದರೆ ತಪ್ಪೇನು? ಮದ್ಯ ಕುಡಿದು ಸಾರ್ವಜನಿಕರಿಗೆ ಸಮಸ್ಯೆ ಮಾಡಿಲ್ಲ, ವಾಹನ ಚಲಾಯಿಸಿಲ್ಲ. ಮನೆಯಲ್ಲಿ ಮದ್ಯ ತೋರಿಸಿದರೆ, ಕುಡಿದರೆ ತಪ್ಪೇನು ಎಂದು ಕೆಲವರು ಪ್ರಶ್ನಿಸಿದ್ದಾರೆ. ಆದರೆ ಸಮಸ್ಯೆ ಇರುವುದೇ ಇಲ್ಲಿ. ಕಾರಣ ಬಿಹಾರ ಡ್ರೈ ಸ್ಟೇಟ್. ಬಿಹಾರದಲ್ಲಿ ಮದ್ಯ ಸಂಪೂರ್ಣ ನಿಷೇಧ. ಮದ್ಯ ನಿಷೇಧವಿರುವ ರಾಜ್ಯದಲ್ಲಿ ಮದ್ಯದ ಬಾಲಟಿ ಹಿಡಿದು ಪೋಸ್ ನೀಡಿದರೆ ಪೊಲೀಸರು ಬಿಡುತ್ತಾರಾ. ಈ ಮದ್ಯ ಎಲ್ಲಿಂದ ಬಂತು, ಎಲ್ಲಿಂದ ಖರೀದಿ ಮಾಡಿದ್ದೀರಿ, ನಿಷೇಧದ ರಾಜ್ಯದಲ್ಲಿ ಮದ್ಯ ತಂದಿದ್ದು ಹೇಗೆ ಎಂಬೆಲ್ಲಾ ಹಲವು ಪ್ರಶ್ನೆಗಳನ್ನು ಪೊಲೀಸರು ಮುಂದಿಟ್ಟಿದ್ದಾರೆ.

ಪಾರ್ಲರ್‌ನಲ್ಲಿ ಪಿಸ್ತೂಲ್

ಪೊಲೀಸರು ಈ ವಿಡಿಯೋ ಆಧರಿಸಿ ಪತಿ ಹಾಗೂ ಪತ್ನಿ ವಿರುದ್ದ ಕೇಸ್ ದಾಖಲಿಸಿದ್ದಾರೆ. ಬಳಿಕ ಈ ಕಾಂಚನ್ ದೇವಿ ಸೋಶಿಯಲ್ ಮೀಡಿಯಾ ಖಾತೆಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಮತ್ತೊಂದು ಪೋಸ್ಟ್ ಕುತೂಹಲ ಕೆರಳಿಸಿದೆ. ಈ ಕಾಂಚನ್ ದೇವಿ ಬ್ಯೂಟಿ ಪಾರ್ಲರ್‌ನಲ್ಲಿ ಪಿಸ್ತೂಲ್ ಹಿಡಿದು ಫೋಸ್ ನೀಡಿದ ಫೋಟೋ ಪೋಸ್ಟ್ ಮಾಡಿದ್ದಾರೆ. ತಕ್ಷಣವೇ ಪೊಲೀಸರು ಈ ಪಿಸ್ತೂಲ್‌ಗೆ ಲೈಸೆನ್ಸ್ ಇದೆಯಾ ಅನ್ನೋದು ಪರಿಶೀಲಿಸಿದ್ದಾರೆ. ಈ ವೇಳೆ ಈ ಪಿಸ್ತೂಲ್ ವಿಶಾಲ್ ಕುಮಾರ್ ಹೆಸರಿನಲ್ಲಿ ನೋಂದಣಿಯಾಗಿ ಲೈಸೆನ್ಸ್ ಪಡೆದಿರುವುದು ಪತ್ತೆಯಾಗಿದೆ. ಆದರೆ ಈ ಪಿಸ್ತೂಲ್ ಕಾಂಚನ್ ದೇವಿ ಬಳಕೆ ಮಾಡುವಂತಿಲ್ಲ. ಇಲ್ಲಿ ವಿಶಾಲ್ ಕಮಾರ್ ಹೊರತುಪಡಿಸಿ ಬೇರೊಬ್ಬ ವ್ಯಕ್ತಿ ಈ ಪಿಸ್ತೂಲ್ ಹಿಡಿದು ಪೋಸ್ ನೀಡಿ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಕಾಂಚನ್ ದೇವಿ ವಿರುದ್ಧ 2ನೇ ಪ್ರಕರಣ ದಾಖಲಾಗಿದೆ. ರೋಸ್ ಡೇ ಆಚರಿಸಲು ಹೋದ ದಂಪತಿ ಇದೀಗ ಕೇಸ್ ಮೇಲೆ ಕೇಸ್ ಹಾಕಿಸಿಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.