ಕೋಲ್ಕತ್ತಾ(ಆ.16): ಪಶ್ಚಿಮ ಬಂಗಾಳದದ ರಾಜ್ಯಪಾಲ ಜಗದೀಪ್‌ ಧನ್‌ಖಡ್ ಸ್ವಾತಂತ್ರ್ಯ ದಿನದ ಪ್ರಯುಕ್ತ ರಾಜಭವನದಲ್ಲಿ ಆಯೋಜಿಸಲಾಗಿದ್ದ ಪಾರಂಪರಿಕ ಚಾಯ್‌ ಪಾರ್ಟಿಗೆ ಸಿಎಂ ಮಮತಾ ಬ್ಯಾನರ್ಜಿ ಗೈರಾಗಿರುವ ಸಂಬಂಧ ಕಿಡಿ ಕಾರಿದ್ದಾರೆ. ರಾಜ್ಯಪಾಲರು ಇದು ಬಹುದೊಡ್ಡ ಅಪರಾಧ ಎಂಬಂತೆ ಪರಿಗಣಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯಪಾಲರು ಮಮತಾ ಬ್ಯಾನರ್ಜಿ ಹಾಗೂ ಅರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಖಾಲಿ ಕುರ್ಚಿಯೊಂದರ ಫೋಟೋ ಶೇರ್ ಮಾಡುತ್ತಾ ಚಿತ್ರಗಳು ಅನೇಕ ವಿಚಾರ ಬಯಲಲು ಮಾಡುತ್ತೆ ಎಂದಿದ್ದಾರೆ.

ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ಶನಿವಾರ ಬೆಳಗ್ಗೆ 25 ನಿಮಿಷಗಳ ಪುಟ್ಟ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ 10:40 ಗಂಟೆಗೆ ರಾಜ್ಯಪಾಲ ಜಗದೀಪ್‌ ಧನ್‌ಖಡ್‌ರನ್ನು ಭೇಟಿಯಾಗಿದ್ದರು. ಇದೊಂದು ಅನೌಪಚಾರಿಕ ಭೇಟಿಯಾಗಿತ್ತಾದರೂ ಬರೋಬ್ಬರಿ 90 ನಿಮಿಷ ನಡೆದಿತ್ತು. ಅಲ್ಲದೇ ಇದು ಬಹಳ ಸೌಹಾರ್ದಪೂರ್ಣವಾಗಿತ್ತು.

ಆದರೆ ರಾಜಭವನದಲ್ಲಿ ಸಂಜೆ ನಡೆದ ಎಟ್‌ ಹೋಂ ಟೀ ಪಾರ್ಟಿಯ ಕೆಲ ತಾಸಿನ ಬಳಿಕ ಟ್ವೀಟ್ ಮಾಡಿದ ರಾಜ್ಯಪಾಲ 'ರಾಜ್ಯಭವನದಲ್ಲಿ ಸ್ವಾತಂತ್ರ್ಯ ದಿನದ ಪ್ರಯುಕ್ತ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳ ಅನುಪಸ್ಥಿತಿ ನನ್ನನ್ನು ಅಚ್ಚರಿಗೀಡು ಮಾಡಿದೆ. ನಮಗೆ ನಮ್ಮ ಸ್ವಾತಂತ್ರ್ಯ ಸೇನಾನಿಗಳ ಪರ ಗೌರವ ಇರಬೇಕು. ಅವರು ನಮ್ಮ ದೇಶದ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಕ್ಕಾಗಿ ತಮ್ಮದೆಲ್ಲವನ್ನೂ ತ್ಯಾಗ ಮಾಡಿದ್ದರು. ನನ್ನ ಬಳಿ ಶಬ್ಧಗಳಿಲ್ಲ' ಎಂದಿದ್ದಾರೆ,.

ಇದಾಧ ಬಳಿಕ ಮತ್ತೊಂದು ಟ್ವೀಟ್ ಮಾಡಿದ ರಾಜ್ಯಪಾಲರು ಮುಖ್ಯಮಂತ್ರಿಯ ಖಾಲಿ ಕುರ್ಚಿಯ ಫೋಟೋ ಫೋಸ್ಟ್‌ ಮಾಡುತ್ತಾ ಈ ಕುರ್ಚಿ ಮುಖ್ಯಮಂತ್ರಿಗಾಗಿ ಮೀಸಲಾಗಿತ್ತು. ಇದರಲ್ಲಿ ರಾಜ್ಯಪಾಲರು ಖಾಲಿ ಕುರ್ಚಿ ಕಡೆ ನೋಡುವ ದೃಶ್ಯವಿದೆ.

ತಮ್ಮ ಈ ಎರಡನೇ ಟ್ವೀಟ್‌ನಲ್ಲಿ ರಾಜ್ಯಪಾಲರು ಸ್ವಾತಂತ್ರ್ಯ ದಿನದ ಅಂಗವಾಗಿ ರಾಜಭವನದಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ಈ ಖಾಲಿ ಕುರ್ಚಿ ಅನೇಕ ವಿಚಾರವನ್ನು ಬಹಿರಂಗಪಡಿಸುತ್ತದೆ ಎಂದು ಬರೆದಿದ್ದಾರೆ.