Asianet Suvarna News Asianet Suvarna News

ಉತ್ತರಕಾಶಿ: ರಕ್ಷಣಾ ಕಾರ್ಯ ಅಂತಿಮ ಘಟ್ಟಕ್ಕೆ: ಇಂದು 41 ಜನ ಕಾರ್ಮಿಕರು ಹೊರಬರುವ ಸಾಧ್ಯತೆ

ಉತ್ತರಾಖಂಡದ ಉತ್ತರಕಾಶಿಯ ಸಿಲ್‌ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆ ತರಲು ರಕ್ಷಣಾ ಸಿಬ್ಬಂದಿ ವಿಸ್ತ್ರತ ಯೋಜನೆಯೊಂದನ್ನು ಸಿದ್ದಪಡಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಇಂದು 41 ಜನರನ್ನು ಒಬ್ಬರಾದ ಮೇಲೆ ಒಬ್ಬರಂತೆ ಚಕ್ರವಿರುವ ಪುಟ್ಟ ಸ್ಟೆಚರ್ ಮೇಲೆ ಮಲಗಿಸಿ ಹೊರತರಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.

Uttarkashi Rescue work in final stage 41 laborers likely to come out today from Tunnel akb
Author
First Published Nov 24, 2023, 8:35 AM IST

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್‌ಕ್ಯಾರಾ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಗೆ ಕರೆ ತರಲು ರಕ್ಷಣಾ ಸಿಬ್ಬಂದಿ ವಿಸ್ತ್ರತ ಯೋಜನೆಯೊಂದನ್ನು ಸಿದ್ದಪಡಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಇಂದು 41 ಜನರನ್ನು ಒಬ್ಬರಾದ ಮೇಲೆ ಒಬ್ಬರಂತೆ ಚಕ್ರವಿರುವ ಪುಟ್ಟ ಸ್ಟೆಚರ್ ಮೇಲೆ ಮಲಗಿಸಿ ಹೊರತರಲು ಎಲ್ಲಾ ಸಿದ್ಧತೆ ನಡೆಸಲಾಗಿದೆ.

ಹಲವು ಅಡ್ಡಿಗಳ ನಡುವೆ ರಕ್ಷಣಾ ಕಾರ್ಯ ಗುರುವಾರವೂ ಮುಂದುವರಿದಿದ್ದು, ಇಂದುಮುಕ್ತಾಯಗೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ಕಾರ್ಮಿಕರು ಸಿಕ್ಕಿಬಿದ್ದ ಸ್ಥಳವು, ಸುರಂಗ ದ್ವಾರದಿಂದ 57 ಮೀ. ದೂರದಲ್ಲಿದೆ. ಅಲ್ಲಿಗೆ ಕಾರ್ಮಿಕರ ಕರೆತರಲು 80 ಸೆಂ.ಮೀ ಅಗಲದ ಪೈಪ್ ಅನ್ನುಸುರಂಗ ಕೊರೆದು ತೂರಿಸಲಾಗುತ್ತಿದೆ. ಈಪ್ರಕ್ರಿಯೆ ಬುಧವಾರವೇ ಮುಗಿಯಬೇಕಿತ್ತಾದರೂ, ಪೈಪ್ ಸಾಗುವ ಮಾರ್ಗದಲ್ಲಿ ಕಬ್ಬಿಣದ ಮೆಷ್ ಅಡ್ಡ ಬಂದ ಕಾರಣ ಅದನ್ನು ತೆರವು ಮಾಡಿ ಪೈಪ್ ಮುಂದೆ ತೂರಿಸುವ ಕೆಲಸಕ್ಕೆ 6 ಗಂಟೆ ಅಡ್ಡಿಯಾಗಿತ್ತು. ಬಳಿಕ ಅಡ್ಡಿ ತೆರವಾಗಿದೆ. ಗುರುವಾರ ಸಂಜೆವರೆಗೂ 47 ಮೀ.ವರೆಗೆ ಪೈಪ್ ಹಾಕಲಾಗಿದೆ. ಇನ್ನು 10 ಮೀ. ಮಾತ್ರ ಬಾಕಿ ಇದೆ. ಈ ವೇಳೆಯೂ ಅಡ್ಡಿ ಎದುರಾಗಿದೆ. ಹೀಗಾಗಿ ಇಂದು ಶುಭ ಸಮಾಚಾರ ಹೊರಬೀಳುವ ನಿರೀಕ್ಷೆ ಇದೆ.

ಸುರಂಗ ಕುಸಿದು ಒಳಗೆ ಸಿಲುಕಿದ 40 ಕಾರ್ಮಿಕರು: ಯಮುನೋತ್ರಿಗೆ ಸಂಪರ್ಕ ಕಲ್ಪಿಸುವ ಸುರಂಗ

ರಕ್ಷಣಾ ಕಾರ್ಯ ಹೀಗೆ ನಡೆದಿದೆ: ಈ ಕುರಿತು ಮಾಹಿತಿ ನೀಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಲೆ.ಜ. ಸಯ್ಯದ್ ಆತಾ ಹಸ್ನೇನ್ ಮತ್ತು ಘಟನಾ ಸ್ಥಳದಲ್ಲಿನ ಹಿರಿಯ ಅಧಿಕಾರಿಗಳು, 'ಕಾರ್ಮಿಕರ ರಕ್ಷಣೆಗಾಗಿ ಸುರಂಗ ಕೊರೆದು ಪೈಪ್ ಅಳವಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಬುಧವಾರ ರಾತ್ರಿಯೇ ಅಂತಿಮಗೊಂಡು ಕಾರ್ಮಿಕರನ್ನು ಹೊರತರುವ ನಿರೀಕ್ಷೆಯನ್ನು ಈ ಮೊದಲು ಇಟ್ಟುಕೊಳ್ಳಲಾಗಿತ್ತು. ಆದರೆ ಬುಧವಾರದ ಕಾರ್ಯಾಚರಣೆ ವೇಳೆ ಡ್ರಿಲ್ಲಿಂಗ್ ಮಷಿನ್‌ಗೆ 45 ಮೀಟರ್ ದೂರದ ಪ್ರದೇಶದಲ್ಲಿ ಕಬ್ಬಿಣದ ಮೆಷ್ ಅಡ್ಡಬಂದಿತ್ತು. ಆದರೆ ತಾಂತ್ರಿಕ ತೊಂದರೆ ಕಾರಣ ಮಷಿನ್‌ಗೆ ಮೆಷ್ ಕೊರೆಯಲಾಗಲಿಲ್ಲ. ಈ ವೇಳೆ ಕಟರ್‌ಗಳನ್ನು ಬಳಸಿ ಮೆಷ್ ಕತ್ತರಿಸಲಾಯಿತು.  ಪರಿಣಾಮ 6 ತಾಸುಗಳ ಕಾಲ ಡ್ರಿಲ್ಲಿಂಗ್‌ಗೆ ಅಡ್ಡಿಯಾಗಿತ್ತು. ಬಳಿಕ ಡ್ರಿಲ್ಲಿಂಗ್ ಕಾರ್ಯ ಮುಂದುವರೆಸಲಾಗಿದೆ' ಎಂದು ತಿಳಿಸಿದ್ದಾರೆ. 

ಇದೇ ವೇಳೆ, 'ಗುರುವಾರ ಸಂಜೆ ಕೂಡ ಡ್ರಿಲ್ಲಿಂಗ್ ಮಷಿನ್ ತಾಂತ್ರಿಕ ತೊಂದರೆಗೆ ಒಳಗಾಗಿದೆ' ಎಂದು ಸ್ಥಳದಲ್ಲಿರುವ ವಿದೇಶಿ ಡ್ರಿಲ್ಲಿಂಗ್ ತಜ್ಞ ಅರ್ನಾಲ್ಡ್ ಡಿಕ್ಸ್ ಹೇಳಿದ್ದಾರೆ. ಈ ಎಲ್ಲ ಕಾರಣಗಳಿಂದ 'ಕಾರ್ಮಿಕರನ್ನು ನಿರ್ದಿಷ್ಟವಾಗಿ ಇದೇ ಸಮಯಕ್ಕೆ ಹೊರಕ್ಕೆ ಕರೆತರಲಾಗುವುದು ಎಂದು ಸಮಯ ನಿಗದಿ ಮಾಡಲಾಗದು. ಇಡೀ ಕಾರ್ಯಾಚರಣೆ ಥೇಟ್ ಯುದ್ಧದ ರೀತಿಯದ್ದು. ಯಾವಾಗ ಮುಗಿಯಲಿದೆ ಎಂದು ಹೇಳಲಾಗದು. ಅತಿ ಶೀಘ್ರದಲ್ಲಿ ಅಥವಾ ಶುಕ್ರವಾರ ಬೆಳಗ್ಗೆ ಇದು ಮುಗಿಯಬಹುದು ಎಂದು ಹಸೇನ್ ಸ್ಪಷ್ಟಪಡಿಸಿದ್ದರು

Uttarkashi Avalanche ನಾಲ್ಕು ಮೃತದೇಹ ಹೊರಕ್ಕೆ, ನಾಪತ್ತೆಯಾಗಿರುವ 27 ಮಂದಿಗಾಗಿ ರಕ್ಷಣಾಕಾರ್ಯ!

ಜೊತೆಗೆ, 'ಕಾರ್ಯಾಚರಣೆ ವೇಳೆ ಇನ್ನೂ 3-4 ಬಾರಿ ಅಡ್ಡಿ ಎದುರಾಗುವ ಸಾಧ್ಯತೆ ಇದೆ. ಅದೆಲ್ಲಾ ನಿವಾರಣೆಯಾದ ಬಳಿಕ ಕಾರ್ಮಿಕರ ರಕ್ಷಣೆ ಸಾಧ್ಯವಾಗಲಿದೆ. 41 ಕಾರ್ಮಿಕರು ಹೊರಬಂದ ಕೂಡಲೇ ಪ್ರತಿಯೊಬ್ಬರನ್ನೂ ಕರೆದೊಯ್ಯಲು 41 ಆ್ಯಂಬುಲೆನ್ಸ್‌ ಗಳನ್ನು ಸನ್ನದ್ದ ಸ್ಥಿತಿಯಲ್ಲಿ ಇಡಲಾಗಿದೆ. ಜೊತೆಗೆ ಯಾರಾದರೂ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರೆ, ಅವರನ್ನು ತಕ್ಷಣವೇ ಉನ್ನತ ಚಿಕಿತ್ಸೆ ಕೊಡಿಸುವ ಸಲುವಾಗಿ ಹೆಲಿಕಾಪ್ಟರ್ ಗಳನ್ನು ರೆಡಿ ಮಾಡಲಾಗಿದೆ ಎಂದು ಹಸ್ನೇನ್ ಅವರು ತಿಳಿಸಿದ್ದಾರೆ.

Follow Us:
Download App:
  • android
  • ios