Uttarakhand Elections: ಬಿಜೆಪಿ ಗೆದ್ದರೂ ಸಿಎಂಗೆ ಸೋಲು: 6,900 ಮತಗಳ ಅಂತರದಿಂದ ಮುಗ್ಗರಿಸಿದ ಧಾಮಿ!
* ಉತ್ತರಾಖಂಡ್‌ನಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ
* ಬಿಜೆಪಿ ಗೆದ್ದರೂ ಮುಖ್ಯಮಂತ್ರಿ ಧಾಮಿಗೆ ಸೋಲು
* ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತ ಉತ್ತರಾಖಂಡ್ ಸಿಎಂ ಧಾಮಿ
ಡೆಹ್ರಾಡೂನ್(ಮಾ.10): ಬಹುನಿರೀಕ್ಷಿತ ಪಂಚರಾಜ್ಯ ಚುನಾವಣಾ ಫಲಿತಾಂಶ ಬಹುತೇಕ ಅನಾವರಣಗೊಂಡಿದೆ. ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ಇತ್ತ ಉತ್ತರಾಖಂಡ್‌ನಲ್ಲೂ ಬಿಜೆಪಿ ಗೆಲುವಿನ ನಗು ಬೀರಿದೆ. ಆರಂಭಿಕ ಟ್ರೆಂಡ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮಬಲದ ಹೋರಾಟ ಕಂಡು ಬಂದಿತ್ತಾದರೂ ಬಳಿಕ ಬಿಜೆಪಿ ಗೆಲುವಿನತ್ತ ದಾಪುಗಾಲು ಇಟ್ಟಿತ್ತು. ಆದರೀಗ ಉತ್ತರಾಖಂಡ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಧಾಮಿ ಸೋಲನುಭವಿಸಿದ್ದಾರೆ.
ಹೌದು ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ ಉತ್ತರಾಖಂಡ್‌ನಲ್ಲಿ ಒಬ್ಬರಾದ ಬಳಿಕ ಮತ್ತೊಬ್ಬರಂತೆ ಒಟ್ಟು ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿತ್ತು. ಅಭಿವೃದ್ಧಿ, ಜಾತಿ ಲೆಕ್ಕಾಚಾರ ಹಾಗೂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಕಾಲ ಕಾಲಕ್ಕರ ಈ ಬದಲಾವಣೆಗಳನ್ನು ತಂದಿತ್ತು. ಆದರೀಗ ಈ ಬದಲಾವಣೆಯಿಂದ ಪಕ್ಷ ಗೆದ್ದಿದೆಯಾದರೂ ರಾಜ್ಯದ ಮುಖ್ಯಮಂತ್ರಿ ಸೋಲನುಭವಿಸಿದ್ದಾರೆ.
"
ಖತಿಮಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಎಂ ಪುಷ್ಕರ್ ಧಾಮಿ, ಕಾಂಗ್ರೆಸ್ ಅಭ್ಯರ್ಥಿ ಭುವನ್ ಚಂದ್ ಕಪ್ರಿ ವಿರುದ್ಧ ಬರೋಬ್ಬರಿ 6,900 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಹೀಗಾಗಿ ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುವುದು ಖಚಿತವಾಗಿದೆ.
2017 ರಲ್ಲಿ ಸೋಲನುಭವಿಸಿದ್ದ ಕಪ್ರಿ
ಭುವನ್ ಚಂದ್ ಕಪ್ರಿ ಉತ್ತರಾಖಂಡದ ಕಾಂಗ್ರೆಸ್‌ನ ಯುವ ನಾಯಕ ಮತ್ತು ಕಾರ್ಯಾಧ್ಯಕ್ಷ. ಯುವಜನರಲ್ಲಿ ಜನಪ್ರಿಯರಾಗಿರುವ ಭುವನ್ ಚಂದ್ ಕಪ್ರಿ ಅವರು ಉತ್ತರಾಖಂಡ ಯುವ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದಾರೆ. ಅವರು ಉತ್ತರಾಖಂಡ ಪ್ರದೇಶ ಕಾಂಗ್ರೆಸ್‌ನಲ್ಲಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೂ ಅಲಂಕರಿಸಿದ್ದಾರೆ. ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಾಮಿಗೆ ಕಠಿಣ ಹೋರಾಟ ನೀಡಿದರು ಆದರೆ ಕೇವಲ 2709 ಮತಗಳಿಂದ ಸೋಲಿಸಲ್ಪಟ್ಟರು. ಭುವನ್ ಕಪ್ರಿ 26,830 ಮತಗಳನ್ನು ಪಡೆದರೆ, ಪುಷ್ಕರ್ ಸಿಂಗ್ ಧಾಮಿ 29,539 ಮತಗಳನ್ನು ಪಡೆದಿದ್ದರು.
ಉಪಯೋಗಕ್ಕೆ ಬರಲಿಲ್ಲ ಧಾಮಿ ಶ್ರಮ
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳ ಅವಧಿಯಲ್ಲಿ ಖತೀಮಾದಲ್ಲಿ ಈ ಹಿಂದೆ ಪ್ರಸ್ತಾಪಿಸಲಾದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿದರು ಮತ್ತು ಹೊಸ ಕಾಮಗಾರಿಗಳನ್ನು ಪ್ರಸ್ತಾಪಿಸಿದರು. ಆದರೆ 2022ರ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗುವ ನಿಟ್ಟಿನಲ್ಲಿ ಇದು ಉಪಯೋಗವಾಗಲಿಲ್ಲ. ಚಕರ್‌ಪುರದಲ್ಲಿ ಕ್ರೀಡಾಂಗಣದ ಶಂಕುಸ್ಥಾಪನೆ, ಮಾಜಿ ಸೈನಿಕರಿಗಾಗಿ ಸಿಎಸ್‌ಡಿ ಕ್ಯಾಂಟೀನ್, ಬುಡಕಟ್ಟು ವಿದ್ಯಾರ್ಥಿಗಳಿಗೆ ಏಕಲವ್ಯ ವಿದ್ಯಾಲಯ, ಎನ್‌ಎಚ್ 125 ಬೈಪಾಸ್ ನಿರ್ಮಾಣ, ರಸ್ತೆ ಮಾರ್ಗಗಳ ಬಸ್ ನಿಲ್ದಾಣದ ಉದ್ಘಾಟನೆ ಮುಖ್ಯಮಂತ್ರಿಗಳು ಮಾಡಿದ ಪ್ರಮುಖ ಐದು ಕೆಲಸಗಳಲ್ಲಿ ಸೇರಿವೆ. ಇದಲ್ಲದೇ ನಗರದಲ್ಲಿ ಒಳಚರಂಡಿ ಮಾರ್ಗ, ಚರಂಡಿಗಳನ್ನು ಮುಚ್ಚಿ ಅದರ ಮೇಲೆ ರಸ್ತೆ ನಿರ್ಮಾಣ, ನಗರದ ಸೌಂದರ್ಯೀಕರಣ ಸೇರಿವೆ.
ಸೋಲಿಗೆ ಮುಖ್ಯ ಕಾರಣಗಳು
* ರೈತ ಚಳುವಳಿ
* ಜಾತಿ ಸಮೀಕರಣದಲ್ಲಿ ವಿಫಲ
* ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ಖತೀಮಗೆ ನಾಲ್ಕು ಬಾರಿ ಮಾತ್ರ ಬಂದಿದ್ದರು
* ಇತರೆ ವಿಧಾನಸಭಾ ಸ್ಥಾನಗಳತ್ತ ಹೆಚ್ಚಿನ ಗಮನ
* ರಾಜ್ಯಾದ್ಯಂತ ಪ್ರಚಾರ ಪ್ರವಾಸ
ಬಿಜೆಪಿ ಇತಿಹಾಸ ನಿರ್ಮಿಸುತ್ತಿದೆ
ಉತ್ತರಾಖಂಡದಲ್ಲಿ ಇಲ್ಲಿಯವರೆಗೆ ನಡೆದ ನಾಲ್ಕು ವಿಧಾನಸಭಾ ಚುನಾವಣೆಗಳ ಇತಿಹಾಸವು ಎರಡು ದಶಕಗಳಷ್ಟು ಹಳೆಯದು. ಉತ್ತರಾಖಂಡದಲ್ಲಿ ಕಳೆದ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪರ್ಯಾಯವಾಗಿ ಅಧಿಕಾರದಲ್ಲಿದ್ದರೂ ಸತತ ಎರಡನೇ ಬಾರಿಗೆ ಯಾವ ಪಕ್ಷವೂ ಅಧಿಕಾರಕ್ಕೇರಿಲ್ಲ. 2002ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು 2007ರಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದವು. ಇದಾದ ಬಳಿಕ 2012ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, 2017ರಲ್ಲಿ ಬಿಜೆಪಿ ಮತ್ತೆ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. 2022ರಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಲಿದೆ.
ಎಕ್ಸಿಟ್ ಪೋಲ್‌ಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು
ಮಾರ್ಚ್ 7 ರಂದು ಬಂದ ಹಲವು ಎಕ್ಸಿಟ್ ಪೋಲ್‌ಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಎರಡು ಪ್ರಮುಖ ರಾಜಕೀಯ ಪಕ್ಷಗಳು ನಿಕಟ ಪೈಪೋಟಿ ಅಥವಾ ಹಂಗ್ ಅಸೆಂಬ್ಲಿ ಸಾಧ್ಯತೆಯನ್ನು ವ್ಯಕ್ತಪಡಿಸಿವೆ. ಇಂತಹ ಸನ್ನಿವೇಶದಲ್ಲಿ ಪಕ್ಷೇತರರು, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಉತ್ತರಾಖಂಡ ಕ್ರಾಂತಿ ದಳದಂತಹ ಪ್ರಾದೇಶಿಕ ಪಕ್ಷಗಳ ಗೆಲ್ಲುವ ಅಭ್ಯರ್ಥಿಗಳ ಪಾತ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕವಾಗಲಿದೆ.