ಉತ್ತರಖಂಡದ ಭೀಕರ ಮೇಘಸ್ಪೋಟದಲ್ಲಿ ಇಡೀ ಗ್ರಾಮವೇ ಕೊಚ್ಚಿಹೋಗಿದೆ ಹಲವರು ಪ್ರವಾಹದಲ್ಲಿ ಸಿಲುಕಿದ್ದಾರೆ. ಮೃತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಮೇಘಸ್ಫೋಟದಲ್ಲಿ 8 ರಿಂದ 10 ಭಾರತೀಯ ಯೋಧರು ನಾಪತ್ತೆಯಾಗಿದ್ದಾರೆ. 

ಉತ್ತರಕಾಶಿ (ಆ.05) ಉತ್ತರಖಂಡದಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ಧಾರಾಲಿ ಗ್ರಾಮವೇ ಕೊಚ್ಚಿ ಹೋಗಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟರೆ, ಹಲವರು ನಾಪತ್ತೆಯಾಗಿದ್ದಾರೆ. ಪ್ರವಾಹ, ಅವಶೇಷಗಳಡಿಯಲ್ಲಿ ಸಿಲುಕಿದವರನ್ನು ರಕ್ಷಿಸಲು ಭಾರತೀಯ ಸೇನೆ ಕಾರ್ಯಾಚರಣೆ ನಡೆಸುತ್ತಿದೆ. ಈ ಮೇಘಸ್ಫೋಟದ ವೇಳೆ ಕ್ಯಾಂಪ್‌ನಲ್ಲಿದ್ದ 8 ರಿಂದ 10 ಯೋಧರು ನಾಪತ್ತೆಯಾಗಿದ್ದಾರೆ. ಆದರೆ ಪ್ರವಾಹದಲ್ಲಿ ಸಿಲುಕಿರುವ ಸ್ಥಳೀಯರು, ಪ್ರವಾಸಿಗರನ್ನು ರಕ್ಷಿಸಲು ಭಾರತೀಯ ಯೋಧರು ಕಾರ್ಯಪ್ರವೃತ್ತರಾಗಿದ್ದಾರೆ.

ಯೋಧರ ಕ್ಯಾಂಪ್ ನೆಲೆಸಮ

ಉತ್ತರಖಂಡದ ಉತ್ತರಕಾಶಿ ಜಿಲ್ಲೆಯ ಧಾರಾಲಿ ಗ್ರಾಮ ಮೇಘಸ್ಫೋಟದಿಂದ ಕೊಚ್ಚಿ ಹೋಗಿದೆ. ಲೋವರ್ ಹರ್ಸಿಲ್ ವಲಯದಲ್ಲಿ ಭಾರತೀಯ ಸೇನೆಯ ಶಿಬಿರವಿದೆ. ಈ ಶಿಬಿರದಲ್ಲಿ 8 ರಿಂದ 10 ಯೋಧರಿದ್ದರು. ಮೇಘಸ್ಫೋಟದಲ್ಲಿ ಈ ಯೋಧರು ನಾಪತ್ತೆಯಾಗಿದ್ದಾರೆ. ಪ್ರವಾಹದ ನೀರು ಶಿಬಿರ ಸೇರಿದಂತೆ ಇಡೀ ಪ್ರದೇಶನ್ನೇ ನೆಲಸಮ ಮಾಡಿದೆ. ಭಾರತೀಯ ಸೇನೆಗೆ ತಮ್ಮವರ ಹುಡುಕಲು ಸಾಧ್ಯವಾಗುತ್ತಿಲ್ಲ. ಕಾರಣ ಭಾರತೀಯ ಸೇನೆ ಧಾರಾಲಿ ಹಾಗೂ ಸುಖಿ ಪರ್ವತ ಶ್ರೇಣಿಗಳ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ ಸ್ಥಳೀಯರು, ಪ್ರವಾಸಿಗರ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

50ಕ್ಕೂ ಹೆಚ್ಚು ಮಂದಿ ನಾಪತ್ತೆ

ಧಾರಾಲಿ ಗ್ರಾಮದ ಮನೆ, ಗೆಸ್ಟ್ ಹೌಸ್, ಕಟ್ಟಡ, ಹೊಟೆಲ್ ಸೇರಿದಂತೆ ಎಲ್ಲವೂ ನೆಲಸಮವಾಗಿದೆ. ಧಾರಾಲಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅಧಿಕೃತವಾಗಿ ನಾಲ್ವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಖೀರ್ ಗಂಗಾ ನದಿಯಲ್ಲಿ ನೀರು ಮಾತ್ರವಲ್ಲ, ಬೆಟ್ಟ ಗುಡ್ಡವೇ ಹರಿದು ಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಸ್ಥಳೀಯ ಆಡಳಿತ ಹೇಳಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಭಾರಿ ಮಳೆಯಿಂದ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ರಾತ್ರಿಯಾಗಿರುವ ಕಾರಣ ಇದೀಗ ಹಲವು ಅಡೆ ತಡೆಗಳು ಎದುರಾಗಿದೆ.

Scroll to load tweet…

20 ರಿಂದ 22 ಮಂದಿ ರಕ್ಷಣೆ

ಹರ್ಶಿಲ್ ಕಣಿಯಲ್ಲಿ ನಡೆಸಿದ ರಕ್ಷಣಾ ಕಾರ್ಯಾಚರಣೆ ಮೂಲಕ 20 ರಿಂದ 22 ಮಂದಿಯನ್ನು ರಕ್ಷಿಸಲಾಗಿದೆ ಎಂದು ಗಂಗೋತ್ರಿ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಚೌವ್ಹಾಣ್ ಹೇಳಿದ್ದಾರೆ. 150 ಮಂದಿಯ ರಕ್ಷಣಾ ತಂಡ ಕಾರ್ಯಪ್ರವೃತ್ತವಾಗಿದೆ. ಘಟನೆಯಲ್ಲಿ 20 ರಿಂದ 25 ಕಟ್ಟಡಗಳು ನೆಲಸಮಗೊಂಡಿದೆ.

ಸಹಾಯವಾಣಿ ಆರಂಭಿಸಿದ ಸರ್ಕಾರ

ಉತ್ತರಖಂಡ ಸರ್ಕಾರ ಮೇಘಸ್ಫೋಟದ ಕಾರ್ಯಾಚರಣೆ ತೀವ್ರಗೊಳಿಸಿದೆ. ಭಾರತೀಯ ಸೇನೆ, ಎನ್‌ಡಿಆರ್‌ಎಪ್, ಎಸ್‌ಡಿಆರ್‌ಎಫ್ ಸೇರಿದಂತೆ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. ಇದೇ ವೇಳೆ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಘಟನೆ ಸಂಬಂಧ ಯಾರಿಗೆ ನೆರವು ಬೇಕಿದ್ದಲ್ಲಿ 01374222126, 222722, 9456556431 ಸಂಖ್ಯೆಗೆ ಕರೆ ಮಾಡಲು ಉತ್ತರಕಾಶಿ ಜಿಲ್ಲಾಡಳಿತ ಸೂಚಿಸಿದೆ.