ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆ ಜಾರಿ ಕುರಿತು ಚರ್ಚೆಗಳು ನಡೆಯುತ್ತಿದೆ. ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಉತ್ತರಾಖಂಡದ ಬಿಜೆಪಿ ಸರ್ಕಾರ UCC ಜಾರಿಗೆ ಪಣತೊಟ್ಟಿದೆ. ಕ್ಯಾಬಿನೆಟ್ ಸಭೆಯಲ್ಲಿ ಯುಸಿಸಿಗೆ ಅನುಮೋದನೆ ನೀಡಲಾಗಿದ್ದು, ಫೆಬ್ರವರಿ 6ರಂದು ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಲಿದೆ. 

ಡೆಹ್ರಡೂನ್(ಫೆ.04) ಏಕರೂಪ ನಾಗರೀಕ ಸಂಹಿತೆ(UCC) ಕುರಿತು ದೇಶಾದ್ಯಂತ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಬಿಜೆಪಿ ಭರವಸೆ ನೀಡಿದಂತೆ UCC ಜಾರಿಗೆ ತರಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ. ಇದರ ನಡುವೆ ಉತ್ತರಾಖಂಡದಲ್ಲಿ ಏಕರೂಪ ನಾಗರೀಕ ನೀತಿ ಸಂಹಿತೆಗೆ ಸಂಪುಟ ಅನುಮೋದನೆ ನೀಡಿದೆ. ಫೆಬ್ರವರಿ 6 ರಂದು ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಈ ಬಿಲ್ ಮಂಡನೆಯಾಗಲಿದೆ. ಪುಷ್ಕರ್ ಸಿಂಗ್ ಧಮಿ ನೇತೃತ್ವದ ಬಿಜೆಪಿ ಸರ್ಕಾರ ಐತಿಹಾಸಿಕ ಬಿಲ್ ಮಂಡನೆಗೆ ಸಜ್ಜಾಗಿದ್ದು, ವಿಪಕ್ಷಗಳ ಕೋಲಾಹಲ ಸೃಷ್ಟಿಸಲು ಸಜ್ಜಾಗಿದೆ. 

ಫೆಬ್ರವರಿ 2ರಂದು ಕರೆದಿದ್ದ ಸಂಪುಟ ಸಭೆಯಲ್ಲಿ ಏಕರೂಪ ನಾಗರೀತ ಸಂಹಿತೆ ಅನುಮೋದನೆ ಕುರಿತು ಚರ್ಚಿಸಲಾಗಿತ್ತು. ಆದರೆ ಮೊದಲ ಸಂಪುಟ ಸಭೆಯಲ್ಲಿ ಅನುಮೋದನೆ ನೀಡದೆ, ಕೆಲ ಚರ್ಚೆಗಳ ಬಳಿಕ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಹೇಳಿದ್ದರು. ಹೀಗಾಗಿ ಎರಡನೆ ಸಂಪುಟ ಸಭೆ ಕರೆದು ಈ ಕುರಿತು ಚರ್ಚೆ ನಡೆಸಲಾಗಿದೆ. ಇದೀಗ ಸಂಪುಟ ಅನುಮೋದನೆ ನೀಡಿದ್ದು, ಬಿಲ್ ಮಂಡನೆಯಾಗಲಿದೆ.

ನಾಗರಿಕ ಸಂಹಿತೆ ವಿರುದ್ಧ ಕೇರಳ ವಿಧಾನಸಭೆಯಲ್ಲಿ ಗೊತ್ತುವಳಿ ಅಂಗೀಕಾರ

ಫೆ.5ರಿಂದ 8ರವರೆಗೆ ನಡೆಯಲಿರುವ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಈ ಏಕರೂಪ ನಾಗರೀಕ ಸಂಹಿತೆ ಮಸೂದೆ ಅಂಗೀಕಾರವಾದರೆ ಇಂಥ ಕಾಯ್ದೆ ರೂಪಿಸಿದ ದೇಶದ ಮೊದಲ ರಾಜ್ಯ ಅನ್ನೋ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ. ಸದ್ಯ ಗೋವಾ ರಾಜ್ಯದಲ್ಲಿ ಏಕರೂಪ ನಾಗರೀಕ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಈ ಕಾನೂನು ಸ್ವತಂತ್ರ ಭಾರತದ ಗೋವಾ ಸರ್ಕಾರವಾಗಲಿ, ಭಾರತ ಸರ್ಕಾರವಾಗಲಿ ಜಾರಿಗೆ ತಂದಿಲ್ಲ, ಪೋರ್ಚುಗೀಸರು ಜಾರಿಗೆ ತಂದ ಕಾನೂನು ಹಾಗೇ ಮುಂದುವರಿದಿದೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾ। ರಂಜನಾ ಪ್ರಕಾಶ್‌ ದೇಸಾಯಿ ಅವರ ನೇತೃತ್ವದ ಐವರು ಸದಸ್ಯರ ಸಮಿತಿ ಏಕರೂಪ ನಾಗರೀಕ ಸಂಹಿತೆ ಕುರಿತು ಚರ್ಚಿಸಿ ಕರಡು ತಯಾರಿಸಿತ್ತು. ದೇಶದಲ್ಲಿ ಎಲ್ಲರಿಗೂ ಸಮಾನ ಕಾನೂನು ಇರಬೇಕು,ಸಮಾನ ಹಕ್ಕು ಸಿಗಬೇಕು. ಹೀಗಾಗಿ ಏಕರೂಪ ನಾಗರೀಕ ಸಂಹಿತೆ ಬಿಲ್ ಅಗತ್ಯವಾಗಿದೆ ಎಂದು ಪುಷ್ಕರ್ ಸಿಂಗ್ ಧಮಿ ಹೇಳಿದ್ದಾರೆ.

ಏಕರೂಪ ನಾಗರಿಕ ಸಂಹಿತೆಗೆ ಶೇ.67ರಷ್ಟು ಮುಸ್ಲಿಂ ಮಹಿಳೆಯರ ಬೆಂಬಲ, ಸರ್ವೇಯಲ್ಲಿ ಬಹಿರಂಗ

ಇತ್ತೀಚೆಗೆ ರಂಜನಾ ಪ್ರಕಾಶ್‌ ದೇಸಾಯಿ ನೇತೃತ್ವದ ಸಮಿತಿ ನೀಡಿದ್ದ ವರದಿ ಸ್ವೀಕರಿಸಿ ಮಾತನಾಡಿದ್ದ ಧಮಿ, 2022ರ ಚುನಾವಣೆಗೂ ಮುನ್ನ ನಾವು ರಾಜ್ಯದ ಜನತೆಗೆ ನೀಡಿದ್ದ ಭರವಸೆಯನ್ನು ಈಡೇರಿಸುವಲ್ಲಿ ಈ ಮಸೂದೆ ಅಂಗೀಕಾರ ಮಹತ್ವದ ಹೆಜ್ಜೆಯಾಗಿದೆ. ನ್ಯಾ। ದೇಸಾಯಿ ನೇತೃತ್ವದ ಸಮಿತಿಯು ಸಮಾಜದ ಎಲ್ಲಾ ವರ್ಗಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸಿದೆ’ ಎಂದಿದ್ದರು.