ಲಖನೌ[ಡಿ.07]: ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ಮದುವೆ ಮನೆಯೊಂದರಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯೊಬ್ಬಳು ನೃತ್ಯ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಆಕೆಯ ಮುಖದ ಮೇಲೆ ಗುಂಡಿನ ದಾಳಿ ನಡೆಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಡಿ.1 ರಂದು ಚಿತ್ರಕೂಟ ಸಮೀಪದ ತಿರ್ಕಾ ಗ್ರಾಮ ಮುಖ್ಯಸ್ಥ ಸುಧೀರ್‌ ಸಿಂಗ್‌ ಪಟೇಲ್‌ ಎಂಬುವವರ ಮಗಳ ಮದುವೆ ನಡೆಯುತ್ತಿತ್ತು. ಇದರಲ್ಲಿ ಇಬ್ಬರು ಯುವತಿಯರಿಂದ ನೃತ್ಯ ಆಯೋಜಿಸಲಾಗಿತ್ತು. ಈ ವೇಳೆ ಯುವತಿಯರು ವೇದಿಕೆಯಲ್ಲಿ ನೃತ್ಯ ಮಾಡುವುದನ್ನು ನಿಲ್ಲಿಸುತ್ತಲೇ, ಸ್ಥಳದಲ್ಲಿದ್ದ ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಗುಂಡು ಹಾರಿಸುವಂತೆ ಹೇಳುತ್ತಾನೆ. ಈ ವೇಳೆ ಪಕ್ಕದ್ದಲ್ಲಿದ್ದ ಇನ್ನೊಬ್ಬ ವ್ಯಕ್ತಿ ನೀವೇ ಗುಂಡು ಹಾರಿಸಿ ಎಂದು ಹೇಳುತ್ತಾನೆ. ಅದಾದ ಕ್ಷಣದಲ್ಲೇ ಯುವತಿಯ ಮುಖದ ಮೇಲೆ ಗುಂಡಿನ ದಾಳಿ ನಡೆಯುವ ಘಟನೆಗಳು ವಿಡಿಯೋದಲ್ಲಿ ಸೆರೆಯಾಗಿದೆ. ಗುಂಡೇಟು ತಿಂದ ಯುವತಿಯನ್ನು ಹೀನಾ (22) ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಗ್ರಾಮ ಮುಖ್ಯಸ್ಥನ ಸಂಬಂಧಿಕನೇ ಕೃತ್ಯ ಎಸಗಿದ್ದಾನೆ. ಆತನ ಪತ್ತೆಗೆ ಬಲೆ ಬೀಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.