ಹನಿಮೂನ್ ವೇಳೆ ಪತ್ನಿಗೆ ಮುಟ್ಟಾಗಿದ್ದಕ್ಕೆ "ಮೂಡ್ ಹಾಳು ಮಾಡಿದೆ" ಎಂದು ಆಕೆಯ ಮೇಲೆ ಪತಿ ಭೀಕರ ಹಲ್ಲೆ ನಡೆಸಿ, ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಅಂಡಮಾನ್‌ನಲ್ಲಿ ನಡೆದಿದೆ. ಇನ್ನೊಂದು ವಿಚಾರ ಏನೆಂದರೆ ಪ್ರಕರಣ ನಡೆದ ಬರೋಬ್ಬರಿ ಮೂರು ವರ್ಷಗಳ ನಂತರ ಕೇಸ್ ದಾಖಲಾಗಿದೆ..

ಗೊರಖ್‌ಪುರ: ಮಧುಚಂದ್ರಕ್ಕೆಂದು (Honeymoon) ಪತಿಯೊಂದಿಗೆ ಅಂಡಮಾನ್ ದ್ವೀಪಕ್ಕೆ ತೆರಳಿದ್ದ ನವವಿವಾಹಿತೆಯೊಬ್ಬಳಿಗೆ ಕಹಿ ಅನುಭವವಾಗಿದೆ. ಪ್ರವಾಸದ ವೇಳೆ ಪತ್ನಿಗೆ ಮುಟ್ಟಾದ (Periods) ಕಾರಣಕ್ಕೆ ಆಕ್ರೋಶಗೊಂಡ ಪತಿ, ನನ್ನ ಮೂಡ್ ಹಾಳು ಮಾಡಿದೆ ಎಂದು ಕಿರುಚುತ್ತಾ ಆಕೆಯ ಮೇಲೆ ಭೀಕರ ಹಲ್ಲೆ ನಡೆಸಿ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ ಏನು?

ಉತ್ತರ ಪ್ರದೇಶದ ಗೊರಖ್‌ಪುರದ ಯುವತಿಯೊಬ್ಬಳಿಗೆ ದೆಹಲಿ ನಿವಾಸಿ ನಿಖಿಲ್ ಮಿಶ್ರಾ ಎಂಬಾತನೊಂದಿಗೆ 2023ರ ಮೇ 30ರಂದು ಅದ್ಧೂರಿಯಾಗಿ ವಿವಾಹವಾಗಿತ್ತು. ಮದುವೆಯ ಸಮಯದಲ್ಲಿ ಯುವತಿಯ ತಂದೆ ಸುಮಾರು 20 ಲಕ್ಷ ರೂಪಾಯಿ ನಗದು, ಒಂದು ಕಾರು ಸೇರಿದಂತೆ ಒಟ್ಟು 40 ಲಕ್ಷ ರೂಪಾಯಿ ಮೌಲ್ಯದ ವರದಕ್ಷಿಣೆಯನ್ನು ನೀಡಿದ್ದರು. ಆದರೆ ಮದುವೆಯಾದ ಮೊದಲ ದಿನದಿಂದಲೇ ಅತ್ತೆ ಮತ್ತು ನಾದಿನಿ ವರದಕ್ಷಿಣೆ ಸಾಲದು ಎಂದು ಕಿರುಕುಳ ನೀಡಲಾರಂಭಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹನಿಮೂನ್‌ನಲ್ಲಿ ನಡೆದಿದ್ದೇನು?

ಜೂನ್ ತಿಂಗಳಲ್ಲಿ ದಂಪತಿ ಅಂಡಮಾನ್ ಪ್ರವಾಸಕ್ಕೆ ತೆರಳಿದ್ದರು. ಜುಲೈ 4ರಂದು ಪ್ರವಾಸದ ನಡುವೆಯೇ ಪತ್ನಿಗೆ ಮಾಸಿಕ ಸ್ರಾವ (Periods) ಶುರುವಾಗಿದೆ. ಇದರಿಂದ ಆಕೆಗೆ ಹೊಟ್ಟೆನೋವು ಮತ್ತು ಅತಿಯಾದ ರಕ್ತಸ್ರಾವವಾಗಿ ಸುಸ್ತಾಗಿದ್ದಳು. ಈ ವಿಷಯ ತಿಳಿದ ಪತಿ ನಿಖಿಲ್ ಮಿಶ್ರಾ ಸಾಂತ್ವನ ಹೇಳುವ ಬದಲು ಆಕ್ರೋಶಗೊಂಡಿದ್ದಾನೆ. ನಿನಗೆ ಪೀರಿಯಡ್ಸ್ ಆಗುವ ವಿಷಯ ಮೊದಲೇ ಯಾಕೆ ಹೇಳಲಿಲ್ಲ? ನನ್ನ ಹನಿಮೂನ್ ಮೂಡ್ ಹಾಳು ಮಾಡಿದೆ ಎಂದು ಬೈಯುತ್ತಾ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ.

ಅಷ್ಟೇ ಅಲ್ಲದೆ, ಆಕೆಗೆ ಮನಬಂದಂತೆ ಒದ್ದು, ಮುಖಕ್ಕೆ ಹೊಡೆದು, ಕೊನೆಗೆ ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಆಕೆಯ ಕಿರುಚಾಟ ಕೇಳಿ ಹೋಟೆಲ್ ಸಿಬ್ಬಂದಿ ಓಡಿ ಬಂದು ಆಕೆಯನ್ನು ಪತಿಯ ಪೈಶಾಚಿಕ ಕೃತ್ಯದಿಂದ ಪಾರು ಮಾಡಿದ್ದಾರೆ.

ಮನೆ ಬಿಟ್ಟು ಹೊರಹಾಕಿದ ಅತ್ತೆ-ಮಾವ

ಪ್ರವಾಸ ಮುಗಿಸಿ ದೆಹಲಿಗೆ ಮರಳಿದ ನಂತರವೂ ಪತ್ನಿಯ ಮೇಲಿನ ದೌರ್ಜನ್ಯ ನಿಂತಿಲ್ಲ. ನಡೆದ ಘಟನೆಯನ್ನು ಅತ್ತೆ ಮತ್ತು ನಾದಿನಿಗೆ ತಿಳಿಸಿದರೆ ಅವರು ಪತಿಯ ಪರವಾಗಿಯೇ ನಿಂತು ಮಾನಸಿಕ ಹಿಂಸೆ ನೀಡಿದ್ದಾರೆ. ಮದುವೆಯಾದ ಕೇವಲ 45 ದಿನಗಳಲ್ಲೇ ಅಂದರೆ ಜುಲೈ 14, 2023 ರಂದು ಆಕೆಯನ್ನು ಮನೆಯಿಂದ ಹೊರಹಾಕಿದ್ದಾರೆ. ಸಮಾಧಾನ ಮಾಡಲು ಹೋದ ಪತ್ನಿಯ ತಂದೆಗೂ ನಿಖಿಲ್ ಕುಟುಂಬ ಅವಮಾನ ಮಾಡಿದೆ.

ಸಂತ್ರಸ್ತ ಮಹಿಳೆ ನ್ಯಾಯಕ್ಕಾಗಿ ಹಲವು ಬಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರೂ ಮೊದಲು ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದಾರೆ. ಸಂಧಾನದ ಪ್ರಯತ್ನಗಳೂ ವಿಫಲವಾದ ನಂತರ ಗೊರಖ್‌ಪುರ ಎಸ್‌ಎಸ್‌ಪಿ ಡಾ. ಕೌಸ್ತುಭ್ ಅವರ ಮಧ್ಯಪ್ರವೇಶದಿಂದಾಗಿ ಅಂತಿಮವಾಗಿ ಆಗಸ್ಟ್ 15 ರಂದು ಪತಿ ನಿಖಿಲ್ ಮಿಶ್ರಾ, ಅತ್ತೆ ಮತ್ತು ನಾದಿನಿ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ. ವರದಕ್ಷಿಣೆ ರೂಪದಲ್ಲಿ ನೀಡಿದ್ದ ವಸ್ತುಗಳನ್ನು ಪತಿ ಹಿಂದಿರುಗಿಸಿಲ್ಲ ಮತ್ತು ಈಗಲೂ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಸತತ ಮೂರು ವರ್ಷಗಳ ಕಾಲ ನಡೆದ ಸಂಧಾನಗಳು ವಿಫಲವಾದ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.